ಶಿವಮೊಗ್ಗ: ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಮೇಲೆ ಮುಸ್ಲಿಂರು ಕಲ್ಲು ತೂರಾಟ ನಡೆಸಿರುವ ಘಟನೆ ರಾಜ್ಯದಲ್ಲಿನ ಹಿಂದೂಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವಂತೆಯೇ ಮುಂದಿನ ಜನ್ಮದಲ್ಲಿ ನಾನು ಮುಸ್ಲಿಂ ಆಗಿ ಹುಟ್ಟಬೇಕು ಎಂದು ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ .ಸಂಗಮೇಶ್ ಹೇಳಿದ್ದಾರೆ.
ಈದ್‌ಮಿಲಾದ್ ಹಬ್ಬದ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ರಕ್ತದಾನ, ಉಚಿತ ಆರೋಗ್ಯ ತಪಾಸಣೆ ಶಿಬಿರದದಲ್ಲಿ ಮಾತನಾಡಿದ ಅವರು, ನಾನು ನಾಲ್ಕು ಬಾರಿ ಶಾಸಕನಾಗಿ ನಿಮ್ಮ ಮುಂದೆ ಮಾತಾಡಿ ಬಂದಿದ್ದೇನೆ ಅಂದ್ರೆ ಅದಕ್ಕೆ ಕಾರಣ ಮುಸ್ಲಿಂ ಬಾಂಧವರು ಎಂದಿದ್ದಾರೆ.
ನಿಮ್ಮ ಮನೆಯ ಮಗನಾಗಿ ಕೊನೆಯವರೆಗೂ ಇರುತ್ತೇನೆ. ಮುಂದಿನ ಜನ್ಮದಲ್ಲಿ ಹುಟ್ಟಿದ್ರೆ, ಮುಸ್ಲಿಂ ಆಗಿ ಹುಟ್ಟಬೇಕು ಅನ್ನೋದೆ ನನ್ನ ಆಸೆ. ಈ ಕಾರ್ಯಕ್ರಮಕ್ಕೆ ಬಹಳ ಪ್ರೀತಿಯಿಂದ ಕರೆಸಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.
ನಿನ್ನೆ ನಡೆದ ಈದ್ ಮಿಲಾದ್ ಮೆರವಣಿಗೆ ವೇಳೆ ಮಾತಾಡಿದ ಶಾಸಕರ ವಿಡಿಯೋ ವೈರಲ್ ಆಗಿದೆ. ಇದೇ ವೇಳೆ ತಮ್ಮ ಪುತ್ರ ಗಣೇಶನ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದು ಶಾಸಕ ಸಂಗಮೇಶ್ ಮನವಿ ಮಾಡಿದ್ದಾರೆ. ಈ ಮೂಲಕ ಮುಂದಿನ ಚುನಾವಣೆಯಲ್ಲಿ ಪುತ್ರ ಗಣೇಶನನ್ನು ಭದ್ರಾವತಿಯಲ್ಲಿ ಕಣಕ್ಕಿಳಿಸುವ ಸುಳಿವು ನೀಡಿದ್ದಾರೆ.
ಸಂಗಮೇಶ್ ಹೇಳಿಕೆಗೆ ಅತ್ತ ದೆಹಲಿಯಲ್ಲಿ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮುಂದಿನ ಜನ್ಮದ ತನಕ ಕಾಯುವುದು ಬೇಡ. ಈಗಲೇ ಹೋಗಿ ಎಂದು ಕುಟುಕಿದರು. ಸಂಗಮೇಶ್ ಹುಟ್ಟಿದ ಜಾತಿಗೆ, ಅವರ ಮತದಾರರಿಗೆ ಅಪಮಾನ ಮಾಡುತ್ತಿದ್ದಾರೆ. ಮುಸ್ಲಿಮರು ನಿಮ್ಮ ಜೊತೆಗೆ ಇದ್ದಾರೆ. ಇನ್ನೆಷ್ಟು ಓಲೈಕೆ ಮಾಡುತ್ತೀರಿ. ನಿಮ್ಮಗೆ ಮತ ಹಾಕಲು ಲಿಂಗಾಯತರು, ಹಿಂದುಳಿದವರು, ದಲಿತರು ಬೇಕು. ಈಗ ಗೆದ್ದ ಮೇಲೆ ಮುಸ್ಲಿಂ ಆಗಬೇಕು ಅಂತಾರೆ ಎಂದು ಕಿಡಿಕಾರಿದರು.
ಜಾತ್ಯಾತೀತತೆಯ ಮುಖವಾಡ ಹಾಕಿಕೊಂಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಸದಾ ಹಿಂದುಗಳು, ಹಿಂದೂ ಸಂಸ್ಕೃತಿಯನ್ನು ಹತ್ತಿಕ್ಕುವ ಹಾಗೂ ಮತಾಂಧರನ್ನು ಎತ್ತಿಕಟ್ಟುವ ಕೃತ್ಯದಲ್ಲಿ ನಿರತವಾಗಿದೆ. ಇವರ ಓಲೈಕೆಯ ರಾಜಕಾರಣದಿಂದಾಗಿಯೇ ರಾಜ್ಯದಲ್ಲಿ ಮತಾಂಧತೆಯ ಕೃತ್ಯಗಳು ಹೆಚ್ಚುತ್ತಲೇ ಇವೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ತಮ್ಮ ಮೇಲಿನ ಕೇಸ್ ವಾಪಾಸ್ ಪಡೀತಾರೆ ಎನ್ನುವ ಹುಂಬತನದಿಂದಲೇ ಮತಾಂಧರು ಕುಕೃತ್ಯಕ್ಕೆ ಕೈಹಾಕುತ್ತಿದ್ದಾರೆ, ಸರ್ಕಾರ ಈಗಾಲಾದರೂ ಎಚ್ಚೆತ್ತು ಮತಾಂಧ ಶಕ್ತಿಗಳನ್ನು ನಿಗ್ರಹಿಸಬೇಕೆಂದು ಆಗ್ರಹಿಸಿದ್ದಾರೆ.