ಬೆಂಗಳೂರು: ನಗರದ ಮೆಟ್ರೋ ನಿಲ್ದಾಣವೊಂದಕ್ಕೆ ಸೆಂಟ್ ಮೇರಿ ಹೆಸರಿಡಬೇಕೆಂದ ಪ್ರಸ್ತಾವನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಒಪ್ಪಿಗೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸೆಂಟ್ ಮೇರೀಸ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿನ ಒಂದು ಮೆಟ್ರೋ ನಿಲ್ದಾಣಕ್ಕೆ 'ಸೆಂಟ್ ಮೇರಿ' ಎಂಬ ಹೆಸರಿಡಬೇಕು ಎಂಬ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಇದಕ್ಕೆ ಅನುಮೋದನೆ ದೊರೆತ ನಂತರ ನಾಮಕರಣ ದಿನಾಂಕ ಘೋಷಣೆ ಮಾಡಲಾಗುವುದು ಎಂದು ಹೇಳಿದರು.
ಇಂದು ತುಂಬಾ ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಈ ಸಂದರ್ಭದಲ್ಲಿ ನಾಡಿನ ಜನತೆಗೆ ಸೆಂಟ್ ಮೇರಿಸ್ ಜನ್ಮದಿನದ ಶುಭಾಶಯ ಕೋರುತ್ತೇನೆ. ನಾನು ಮುಖ್ಯಮಂತ್ರಿ ಆಗಿ ಪ್ರತಿ ವರ್ಷ ತಪ್ಪದೇ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಈ ಕಾರ್ಯಕ್ರಮದಲ್ಲಿ ಬಹಳ ಜನ ಹರಕೆ ಹೊತ್ತುಕೊಳ್ತಾರೆ, ನಂತರ ಹರಕೆ ತೀರಿಸ್ತಾರೆ. ಪ್ರತಿಯೊಬ್ಬರು ಕೂಡ ದೈಹಿಕ, ಮಾನಸಿಕವಾಗಿ ಆರೋಗ್ಯ ಕೊಡಲಿ ಅಂತ ತಾಯಿ ಸೆಂಟ್ ಮೇರಿಯನ್ನು ಪ್ರಾರ್ಥನೆ ಮಾಡುತ್ತಾರೆ. ಅದಕ್ಕೋಸ್ಕರ ಸೆಂಟ್ ಮೇರಿಗೆ ಆರೋಗ್ಯ ಮಾತೆ ಅಂತ ಕರಿತಾರೆ ಎಂದು ಹೇಳಿದರು.
ಎಲ್ಲರೂ ಮಾನಸಿಕ, ದೈಹಿಕ ಆರೋಗ್ಯ ಚೆನ್ನಾಗಿ ಇರಲಿ ಅಂತ ನಾನು ಕೂಡ ಪ್ರಾರ್ಥನೆ ಮಾಡುತ್ತೇನೆ. ನಮ್ಮ ದೇಶದಲ್ಲಿ ಅನೇಕ ಜಾತಿ, ಧರ್ಮ, ಸಂಸ್ಕೃತಿ ಇದೆ. ವಿವಿಧತೆಯಲ್ಲಿ ಏಕತೆ ಸಾಧಿಸಬೇಕು, ಬಹುತ್ವ ಸಂಸ್ಕೃತಿಯಲ್ಲಿ ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ. ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರಿಗಾಗಿ ನಮ್ಮ ಸರ್ಕಾರ ಕಾರ್ಯಕ್ರಮ ರೂಪಿಸಿ ಜಾರಿ ಮಾಡುವ ಮೂಲಕ ಸಮಾಜದ ಅಸಮಾನತೆ ಹೋಗಲಾಡಿಲು ಶ್ರಮಿಸುತ್ತಿದೆ. ದಯೆಯಿಲ್ಲದ ಧರ್ಮ ಯಾವುದಯ್ಯ-ದಯೆಯೇ ಧರ್ಮದ ಮೂಲವಯ್ಯ ಎನ್ನುವ ಬಸವಣ್ಣರ ಮಾತನ್ನು ನಾವು ಪಾಲಿಸಬೇಕು. ಧಾರ್ಮಿಕ ಸಹಿಷ್ಣುತೆ ಮತ್ತು ಸಾಮಾಜಿಕ ನ್ಯಾಯ ನಮ್ಮ ಸಂವಿಧಾನದ ಆಶಯವೂ ಆಗಿದೆ.
ಬಸವಣ್ಣನವರು ಹೇಳಿದ ಮೌಲ್ಯಗಳನ್ನೇ ಗಾಂಧಿ, ಅಂಬೇಡ್ಕರ್ ಅವರೂ ಹೇಳಿದ್ದಾರೆ. ಈ ಮೌಲ್ಯಗಳಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು ಎಲ್ಲರಿಗೂ ಸಮಾನ ರಕ್ಷಣೆ ನೀಡುತ್ತದೆ. ಮಹಾಧರ್ಮಾಧ್ಯಕ್ಷರಾದ ಪೀಟರ್ ಮಚಾಡೋ ಅವರು ಮುಂದಿಟ್ಟಿರುವ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು ಎಂದು ತಿಳಿಸಿದರು.
ಬಸವಣ್ಣನವರ ವಚನವನ್ನು ಹೇಳುತ್ತಲೇ ಯಾವ ಜಾತಿ ಎಂದು ಕೇಳುತ್ತೇವೆ. ಇದನ್ನು ಹೋಗಲಾಡಿಸಬೇಕಾದರೆ ಆರ್ಥಿಕ, ಸಾಮಾಜಿಕವಾಗಿ ಸ್ವಾವಲಂಬಿಗಳಾಗಬೇಕು. ಅದಕ್ಕಾಗಿ ಕಸುಬು ಯಾವುದೇ ಇದ್ದರೂ ವಿದ್ಯೆ ಕಲಿಯಲೇಬೇಕು. ವೈದ್ಯರು, ಇಂಜಿನಿಯರ್, ಪ್ರೊಫೆಸರ್, ವಿಜ್ಞಾನಿಗಳಾಗಬೇಕು. ವೈದ್ಯರು, ಇಂಜಿನಿಯರ್ ಅಥವಾ ವಿಜ್ಞಾನಿಗಳಾಗುವುದು ಯಾರೊಬ್ಬರ ಸ್ವತ್ತಲ್ಲ. ಎಲ್ಲರಿಗೂ ಸಾಮರ್ಥ್ಯವಿದೆ.
ವಿದ್ಯೆ ಇಲ್ಲದೆ ಹೋಗಿದ್ದರೆ ದೇವರಾಜ ಅರಸು ಅವರನ್ನು ಮೊದಲ್ಗೊಂಡು, ನಾನಾಗಲಿ, ಬಂಗಾರಪ್ಪನವರಾಗಲಿ, ವೀರಪ್ಪ ಮೊಯ್ಲಿ ಅವರಾಗಲಿ, ಎಸ್. ಎಂ.ಕೃಷ್ಣ ಅವರಾಗಲಿ, ದೇವೇಗೌಡ ಅವರಾಗಲಿ ಮುಖ್ಯಮಂತ್ರಿಗಳಾಗಲು ಸಾಧ್ಯವಿತ್ತೆ? ಎಲ್ಲಾ ಸಾಧನೆಗಳಿಗೂ ಶಿಕ್ಷಣವೇ ಅಡಿಪಾಯ ಎಂದು ಶಿಕ್ಷಣದ ಮಹತ್ವವನ್ನು ನಾರಾಯಣ ಗುರುಗಳು ಪದೇ ಪದೇ ಹೇಳುತ್ತಿದ್ದರು.
ನಾನು ಕುರುಬ ಜಾತಿಯಲ್ಲಿ ಹುಟ್ಟಿದ್ದರೂ ಮುಖ್ಯಮಂತ್ರಿಯಾಗಿಲ್ಲವೆ. ಹುಟ್ಟಿನಿಂದ ಎಲ್ಲವೂ ನಿರ್ಧಾರವಾಗುವುದಿಲ್ಲ. ಅವಕಾಶಗಳು ದೊರೆಯುವುದು ಹಾಗೂ ಅದನ್ನು ಬಳಕೆ ಮಾಡುವುದರ ಮೇಲೆ ನಿರ್ಧಾರವಾಗುತ್ತದೆ. ಜಾಲಪ್ಪ ಅವರು ವೈದ್ಯಕೀಯ ಕಾಲೇಜು ಸ್ಥಾಪಿಸಿದರು. ಆ ಯೋಚನೆ ಮಾಡದೇ ಹೋಗಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ.
ದೇವಸ್ಥಾನಕ್ಕೆ ಪ್ರವೇಶ ದೊರೆಯದಿದ್ದರೆ, ದೇವಸ್ಥಾನವೇ ನಿಮ್ಮ ಬಳಿ ಕರೆತರಲು ಪ್ರಯತ್ನಿಸಿ ಎಂದು ನಾರಾಯಣಗುರುಗಳು ತಿಳಿಸಿದ್ದರು. ನಾರಾಯಣ ಗುರುಗಳ ಕಾಲಮಾನದಲ್ಲಿ ಕೇರಳದಲ್ಲಿ ಶೂದ್ರವರ್ಗದವರನ್ನು ತುಚ್ಛವಾಗಿ ಕಾಣುವ ಪರಿಸ್ಥಿತಿಯಿತ್ತು.
ಪರ್ಯಾಯ ವ್ಯವಸ್ಥೆಯನ್ನು ನಾರಾಯಣ ಗುರುಗಳು ಹುಡುಕಿದರು. ಅವರು ಮೊದಲನೇ ದೇವಸ್ಥಾನ ಕಟ್ಟಿದ್ದು 1885ರಲ್ಲಿ. ಅಲ್ಲಿಂದೀಚೆಗೆ 150ಕ್ಕೂ ಹೆಚ್ಚು ದೇವಸ್ಥಾನಗಳನ್ನು ಕಟ್ಟಿದರು. ಮೇಲ್ಜಾತಿಯವರೇ ಪೂಜಾರಿಗಳಾಗಬೇಕೆಂದು ದೇವರು ಹೇಳಿಲ್ಲ. ಪೂಜಾರಿಗಳಾದವರಿಗೆ ತರಬೇತಿ ಕೊಡುವ ವ್ಯವಸ್ಥೆಯನ್ನು ಕೂಡ ಮಾಡುತ್ತಾರೆ. ಒಂದು ಜಾತಿ, ಒಂದು ಮತ, ಒಂದು ದೇವರು ಎಂಬ ಮಾತುಗಳನ್ನು ಅವರು ಹೇಳಿದರು.
ಸರ್ಕಾರ ಎಲ್ಲರಿಗೂ ಉಚಿತ ಶಿಕ್ಷಣ ನೀಡುತ್ತಿದೆ. ಕಡ್ಡಾಯ ಶಿಕ್ಷಣ ನೀಡಲು ಬದ್ಧವಾಗಿದೆ. ಪೋಷಕರು ತಾವು ಯಾವುದೇ ವೃತ್ತಿಯನ್ನು ಮಾಡುತ್ತಿರಲಿ, ಮಕ್ಕಳಿಗೆ ಮಾತ್ರ ಒಳ್ಳೆಯ ಶಿಕ್ಷಣ ಕೊಡಿಸಿ ಅವರನ್ನು ವಿದ್ಯಾವಂತರನ್ನಾಗಿ ಮಾಡುವುದು ತಂದೆ ತಾಯಿಗಳ ಕರ್ತವ್ಯ ಎಂದರು.