ಹುಬ್ಬಳ್ಳಿ: ಗದಗ ತೋಂಟದಾರ್ಯ ಮಠದ ಸಿದ್ದರಾಮ ಸ್ವಾಮೀಜಿ ನೇತೃತ್ವದ ‘ಬಸವ ಸಂಸ್ಕೃತಿ ಯಾತ್ರೆ’ ವೀರಶೈವರು ಮತ್ತು ಲಿಂಗಾಯತರ ನಡುವೆ ಒಡಕು ಮೂಡಿಸುವ ಪ್ರಯತ್ನವಾಗಿದೆ ಎಂದು ಶಿರಹಟ್ಟಿ ಫಕೀರ ಮಠದ ಪೀಠಾಧ್ಯಕ್ಷ ದಿಂಗಾಲೇಶ್ವರ ಸ್ವಾಮೀಜಿ ಸೋಮವಾರ ಹೇಳಿದ್ದಾರೆ.
ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, 2017-18ರಲ್ಲಿ ಲಿಂಗಾಯತ ಪ್ರತ್ಯೆಕ ಧರ್ಮ ಹೋರಾಟ ಸಮಿತಿಯ ಬ್ಯಾನರ್ ಅಡಿಯಲ್ಲಿ ಆಂದೋಲನ ಆರಂಭವಾಗಿತ್ತು. ಈಗ, ಅವರೇ ತಮ್ಮ ಧರ್ಮವನ್ನು ಬಸವ ಧರ್ಮ ಎಂದು ಗುರುತಿಸುವಂತೆ ಕೇಳುತ್ತಾ ಸಮುದಾಯಗಳಲ್ಲಿ ಬಿರುಕು ಮೂಡಿಸಲು ಪ್ರಯತ್ನ ನಡೆಸುತ್ತಿವೆ ಎಂದು ಕಿಡಿಕಾರಿದರು.
ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಆರಂಭವಾಗಿತ್ತು. ಈಗಲೂ ಕಾಂಗ್ರೆಸ್ ಸರ್ಕಾರ ಇದೆ. ಈಗ ಮತ್ತೆ ಪ್ರತ್ಯೇಕ ಧರ್ಮ ಹೋರಾಟ ಆರಂಭಗೊಂಡಿದೆ. ಹೆಸರಿಗೆ ಬಸವ ಸಂಸ್ಕೃತಿ ಯಾತ್ರೆ, ವೇದಿಕೆ ಮೇಲೆ ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಮಾತ್ರ ಮಾತನಾಡುತ್ತಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೆಲ್ಲಾ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನದ ವಿಷಯ ಮುನ್ನೆಲೆಗೇಕೆ ಬರುತ್ತದೆ ಎಂದು ಪ್ರಶ್ನಿಸಿದರು.
ಬಸವ ಸಂಸ್ಕೃತಿ ಯಾತ್ರೆ ಹೆಸರಲ್ಲಿ ಸಮಾಜ ಒಡೆಯೋ ಕೆಲಸ ಮಾಡುತ್ತಿದ್ದಾರೆ. ಬಸವಣ್ಣನ ಹೆಸರಲ್ಲಿ ಕೆಲವರಿಂದ ಸಮಾಜ ಒಡೆಯೋ ಕೆಲಸ ನಿರಂತರವಾಗಿ ನಡೆದಿದೆ. ಬಸವಣ್ಣ ಹೆಸರು ಬಳಸಿಕೊಂಡು, ಮನಬಂದಂತೆ ಮಾತನಾಡುತ್ತಿದ್ದಾರೆ. ಬಸವೇಶ್ವರ ವಿಚಾರಧಾರೆಗಳನ್ನು ಬಿತ್ತುವುದಾಗಿರಬೇಕಿತ್ತು, ಆದರೆ ಅಲ್ಲಿ ಬಸವಣ್ಣ ಆಚಾರ-ವಿಚಾರಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ.
ಸಿದ್ಧರಾಮ ಸ್ವಾಮೀಜಿ ಬಸವಣ್ಣನವರ ತತ್ವಗಳಿಗೆ ವಿರುದ್ಧವಾಗಿ ಹೋಗುತ್ತಿದ್ದಾರೆ. ಗದಗ ಮಠವು ವೈದಿಕ ಪದ್ಧತಿಗಳನ್ನು ಕಲಿಸುವ ಮೂರು ಶಾಲೆಗಳನ್ನು ನಡೆಸುತ್ತಿದೆ. ಒಬ್ಬ ಶ್ರೀಗಳು ಬಸವ ಸಂಸ್ಕೃತಿಯನ್ನು ಬೋಧಿಸುತ್ತಿರುವಾಗ ಅದರ ತತ್ವಗಳಿಗೆ ವಿರುದ್ಧವಾಗಿ ಅಭ್ಯಾಸ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಇದೇ ವೇಳೆ ಸಮುದಾಯಗಳ ನಡುವಿನ ಏಕತೆಗಾಗಿ ವೀರಶೈವ ಲಿಂಗಾಯತ ಏಕತಾ ಸಮಾವೇಶವನ್ನು ಸೆಪ್ಟೆಂಬರ್ 19 ರಂದು ಹುಬ್ಬಳ್ಳಿಯಲ್ಲಿ ನಡೆಸಲಾಗುವುದು ಎಂದು ಅವರು ಹೇಳಿದರು.