ಮಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಂದೆ ಮಂಗಳವಾರ ಕೇರಳದ ಮೂವರು ಯೂಟ್ಯೂಬರ್‌ಗಳು ಸೇರಿದಂತೆ ಆರು ಜನರು ವಿಚಾರಣೆಗೆ ಹಾಜರಾದರು.
ಕೇರಳದಲ್ಲಿ ಯೂಟ್ಯೂಬ್ ಚಾನೆಲ್‌ಗಳನ್ನು ನಡೆಸುತ್ತಿರುವ ಮನಾಫ್, ಅಭಿಷೇಕ್ ಮತ್ತು ಜಯಂತ್ ಟಿ, ಜೊತೆಗೆ ಕಾರ್ಯಕರ್ತರಾದ ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ ಮತ್ತು ಪ್ರದೀಪ್ ಅವರಿಗೆ ಸಮನ್ಸ್ ನೀಡಲಾಗಿತ್ತು ಎಂದು ಎಸ್‌ಐಟಿ ತಿಳಿಸಿದೆ.
ಯೂಟ್ಯೂಬರ್‌ಗಳು ಸೃಷ್ಟಿಸಿದ ಕಂಟೆಂಟ್ ಮತ್ತು ಅವರ ಹೇಳಿಕೆಗಳ ಮೂಲಗಳನ್ನು ಪರಿಶೀಲಿಸಲು ಅವರನ್ನು ಪ್ರಶ್ನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖಾಧಿಕಾರಿಗಳು ಇಲ್ಲಿಯವರೆಗೆ ವಿಚಾರಣೆಗೆ ಸಂಬಂಧಿಸಿದ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ವಿಚಾರಣೆಯು ಪ್ರಾಥಮಿಕ ಹಂತದಲ್ಲಿದೆ ಎನ್ನಲಾಗಿದ್ದು, ತನಿಖೆ ಮುಂದುವರೆದಂತೆ ಹೆಚ್ಚಿನ ವ್ಯಕ್ತಿಗಳನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.
ಒಂದು ದಶಕದ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ ಅತ್ಯಾಚಾರ ಮತ್ತು ಕೊಲೆಗೆ ಬಲಿಯಾದವರ ಶವಗಳನ್ನು ಹೂಳಲು ನನ್ನನ್ನು ಒತ್ತಾಯಿಸಲಾಯಿತು ಎಂದು ಬಂಧಿತ ಸಿಎನ್ ಚಿನ್ನಯ್ಯ ಆರೋಪಿಸಿದ ಬೆನ್ನಲ್ಲೇ ಧರ್ಮಸ್ಥಳ ಪೊಲೀಸರು ಜುಲೈ 4 ರಂದು ಪ್ರಕರಣ ದಾಖಲಿಸಿಕೊಂಡಿದ್ದರು ಮತ್ತು ಜುಲೈ 19 ರಂದು ಡಿಜಿಪಿ ಪ್ರಣಬ್ ಮೊಹಾಂತಿ ನೇತೃತ್ವದಲ್ಲಿ ಸರ್ಕಾರ ಎಸ್‌ಐಟಿ ರಚಿಸಿತ್ತು.
ಅಂದಿನಿಂದ ಆನ್‌ಲೈನ್‌ನಲ್ಲಿ ಸಾಕಷ್ಟು ನಿರೂಪಣೆಗಳಿಗೆ ಕಾರಣವಾಯಿತು. ಇತ್ತೀಚಿನ ತಿಂಗಳುಗಳಲ್ಲಿ ಸಾಮಾಜಿಕ ಮಾಧ್ಯಮ ಚಟುವಟಿಕೆಯು ಹೆಚ್ಚಾಗಿದ್ದು, ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವಂತಹ ವಿಷಯಗಳ ಪ್ರಸಾರದ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ.
ತನಿಖೆಯು ಘಟನೆಗೆ ಸಂಬಂಧಿಸಿದ ಭೌತಿಕ ಪುರಾವೆಗಳು ಮತ್ತು ಡಿಜಿಟಲ್ ಸಾಮಗ್ರಿಗಳ ಮೇಲೆ ಕೇಂದ್ರೀಕರಿಸಿದೆ.
ಈ ವಿಚಾರಣೆಗಳಿಂದ ಹೊರಬರುವ ವಿಚಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.