ಬೆಂಗಳೂರು: ರಾಜ್ಯದ ವಿವಿಧ ಕಡೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ ಮುಂದುವರಿದಿದೆ. ಬೀದರ್ನ ಪಶುವೈದ್ಯಕೀಯ ಮೀನುಗಾರಿಕೆ ವಿಜ್ಞಾನಿಗಳ ವಿವಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಗ್ಗೆ ಏಕಕಾಲದಲ್ಲಿ ಕರ್ನಾಟಕದ 69 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಭ್ರಷ್ಟಾಚಾರ ಆರೋಪ ಸಂಬಂಧ ಬೀದರ್ ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಾಗಿತ್ತು. ಬೆಂಗಳೂರು ಮೂಲದ ವೆಂಕಟ್ ರೆಡ್ಡಿ ಎಂಬುವರು ದೂರು ನೀಡಿದ್ದರು. 2021ರಲ್ಲಿ ವಿವಿ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸಿದ ಅಧಿಕಾರಿಗಳು, ಸಿಬ್ಬಂದಿ ಮನೆಗಳು, ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಲೋಕಾಯುಕ್ತ ಎಡಿಜಿಪಿ ಮನೀಶ್ ಕರ್ಬಿಕರ್, ಐಜಿ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ.
ಬೀದರ್‌ನಲ್ಲಿ ಒಟ್ಟು 25 ಕಡೆ ದಾಳಿ
ಬೀದರ್‌ನಲ್ಲಿ ಒಟ್ಟು 25 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ವಿಶ್ವವಿದ್ಯಾಲಯದ ಪ್ರೊಫೆಸರ್, ಇಂಜಿನಿಯರ್ಸ್ ಸೇರಿ ಸಿಬ್ಬಂದಿಗಳ ಮನೆ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.
ಲೋಕಾಯುಕ್ತ ದಾಳಿ
ಬೀದರ್ ಜಿಲ್ಲೆಯ 24 ಕಡೆ, ಬೆಂಗಳೂರಿನ 31 ಕಡೆ, ಕೊಪ್ಪಳ 2 ಕಡೆ, ಚಿಕ್ಕಮಗಳೂರು ಜಿಲ್ಲೆಯ 2 ಕಡೆ, ಹಾಸನ, ರಾಮನಗರ, ಕೋಲಾರ, ಉಡುಪಿ ಸೇರಿದಂತೆ ರಾಜ್ಯಾದ್ಯಂತ 69 ಕಡೆ ದಾಳಿ ನಡೆಸಿ ಶೋಧ ಕಾರ್ಯ ಕೈಗೊಳ್ಳಲಾಗಿದೆ.
28 ಕೋಟಿ ಅವ್ಯವಹಾರ ಬಯಲು
ವಿಶ್ವವಿದ್ಯಾಲಯದಲ್ಲಿ 2017-19ರವರೆಗೆ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎನ್ನುವ ಆರೋಪ ಇದೆ. 2021ರಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದು, ತನಿಖೆ ವೇಳೆ ಸುಮಾರು 28 ಕೋಟಿ ಅವ್ಯವಹಾರ ಬಯಲಿಗೆ ಬಂದಿದೆ ಎಂದು ಹೇಳಲಾಗಿದೆ.
ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಎಂಟರ್ಪ್ರೈಸ್ ಜೊತೆ ಶಾಮೀಲಾಗಿ ಪೀಠೋಪಕರಣ, ಸ್ಟೇಷನರಿ ಖರೀದಿಯಲ್ಲಿ ಅಕ್ರಮ ಎಸಗಿದ್ದಾರೆ ಎನ್ನಲಾಗಿದೆ.