ರಾಜ್ಯ

News Headlines 10-09-25 | SC ಒಳಮೀಸಲಾತಿಗೆ ವಿರೋಧ: ಸ್ಪೃಶ್ಯ ಜಾತಿಗಳಿಂದ ಉಗ್ರ ಪ್ರತಿಭಟನೆ; Hindu ಶಕ್ತಿ ಪ್ರದರ್ಶನ: ಮದ್ದೂರಿನಲ್ಲಿ 28ಕ್ಕೂ ಹೆಚ್ಚು ಗಣಪತಿ ವಿಸರ್ಜನೆ; ಶಾಸಕ ಸತೀಸ್ ಸೈಲ್ 2 ದಿನ ED ವಶಕ್ಕೆ!

SC ಒಳಮೀಸಲಾತಿಗೆ ವಿರೋಧ: ಸ್ಪೃಶ್ಯ ಜಾತಿಗಳಿಂದ ಉಗ್ರ ಪ್ರತಿಭಟನೆ

ಸ್ಪೃಶ್ಯ ಜಾತಿಗಳಾದ ಬಂಜಾರ, ಬೋವಿ, ಕೊರಮ, ಕೊರಚ ಜಾತಿಗಳನ್ನು C ವರ್ಗಕ್ಕೆ ಸೇರ್ಪಡೆ ಮಾಡಿ ಶೇ.5 ರಷ್ಟು ಮೀಸಲಾತಿ ನೀಡಲಾಗಿದೆ. ಆದರೇ ಹೀಗೆ ಮೀಸಲಾತಿ ಹಂಚಿಕೆ ಮಾಡಿದ್ದರಿಂದ ಸ್ಪೃಶ್ಯ ಜಾತಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಬಿಜೆಪಿ ಮಾಜಿ ಶಾಸಕ ಪಿ.ರಾಜೀವ್ ನೇತೃತ್ವದಲ್ಲಿ ಸ್ಪೃಶ್ಯ ಜಾತಿಗಳ ಜನರು ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಭಾರಿ ಪ್ರತಿಭಟನೆ ನಡೆಸಿದರು. ಒಳ ಮೀಸಲಾತಿ ವಿಚಾರವಾಗಿ ಮಾತುಕತೆಯ ಬಗ್ಗೆ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಇನ್ನು ಪ್ರತಿಭಟನೆ ವೇಳೆ ರೊಚ್ಚಿಗೆದ್ದ ಪ್ರತಿಭಟನಾಕಾರರು ಮಹಾರಾಣಿ ಕಾಲೇಜು ಬಳಿ ರಸ್ತೆ ತಡೆದು ಪ್ರತಿಕೃತಿ ದಹಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಅಲ್ಲದೆ ಮಹಿಳೆಯೊಬ್ಬರು ಸ್ಥಳದಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ರಸ್ತೆ ತಡೆಯಿಂದಾಗಿ ಕೆ.ಆರ್ ಸರ್ಕಲ್ ಬಳಿ ಟ್ರಾಫಿಕ್ ಜಾಮ್ ಆಗಿ, ವಾಹನ ಸವಾರರು ಪರದಾಡುವಂತಾಯಿತು.

ಹಿಂದೂಗಳ ಶಕ್ತಿ ಪ್ರದರ್ಶನ: ಮದ್ದೂರಿನಲ್ಲಿ 28ಕ್ಕೂ ಹೆಚ್ಚು ಗಣಪತಿಗಳ ವಿಸರ್ಜನೆ

ಕಳೆದ ಭಾನುವಾರ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೂರಾಟದ ನಂತರ ಬೂದಿ ಮುಚ್ಚಿದ ಕೆಂಡದಂತಿರುವ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಹಿಂದೂಪರ ಸಂಘಟನೆಗಳು ಇಂದು ಅದ್ಧೂರಿ ಸಾಮೂಹಿಕ ಗಣಪತಿ ವಿಸರ್ಜನಾ ಮೆರವಣಿಗೆ ನಡೆಸಿದವು. ಭಾರೀ ಬಿಗಿ ಭದ್ರತೆ ನಡುವೆ ಮದ್ದೂರಿನ ಹತ್ತು ಹಾಗೂ ಸುತ್ತಮುತ್ತಲಿನ ಗ್ರಾಮಗಳ 18 ಗಣಪತಿ ಸೇರಿದಂತೆ ಒಟ್ಟು 28 ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡಿ ಹಿಂದೂಪರ ಸಂಘಟನೆಗಳು ಶಕ್ತಿ ಪ್ರದರ್ಶಿಸಿದವು. 11.45ಕ್ಕೆ ಮದ್ದೂರು ಪಟ್ಟಣದ ಕಾಶಿ ವಿಶ್ವನಾಥ ದೇವಸ್ಥಾನದಿಂದ ಮೆರವಣಿಗೆ ಆರಂಭವಾಗಿ ಹೊಳೆಬೀದಿ, ಪೇಟೆ ಬೀದಿ, ಟಿಬಿ ಸರ್ಕಲ್‌, ಹಳೆ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಮೂರು ಕಿಲೋ ಮೀಟರ್‌ ಸಂಚರಿಸಿ ಕೊಲ್ಲಿ ಸರ್ಕಲ್‌ ಮೂಲಕ ಆಗಮಿಸಿ ಶಿಂಷಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ಗಣಪತಿ ವಿಸರ್ಜನೆಯಲ್ಲಿ ಬಿಜೆಪಿ ನಾಯಕರಾದ ಬಿ.ವೈ.ವಿಜಯೇಂದ್ರ, ಆರ್‌.ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ಸಂಸದ ಯದುವೀರ್‌ ಒಡೆಯರ್‌ ಭಾಗವಹಿಸಿದ್ದರು.

Nepal Violence ಕನ್ನಡಿಗರು ಸುರಕ್ಷಿತ, ಮರಳಿ ಕರೆತರಲು ಕ್ರಮ

ಹಿಂಸಾಚಾರ ಪೀಡಿತ ನೇಪಾಳದಲ್ಲಿ ಸಿಲುಕಿರುವ ರಾಜ್ಯದ ಜನರು ಸುರಕ್ಷಿತವಾಗಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಸಾಮಾಜಿಕ ಮಾಧ್ಯಮಗಳ ನಿರ್ಬಂಧವನ್ನು ವಿರೋಧಿಸಿ ಸರ್ಕಾರದ ವಿರುದ್ಧ ನಡೆಯುತ್ತಿರುವ ಯುವ ಜನರ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದೆ. ಪ್ರಧಾನಿ ಕೆಪಿ ಶರ್ಮಾ ಓಲಿ ರಾಜೀನಾಮೆ ನೀಡಿದ ನಂತರ ಮಂಗಳವಾರ ನೇಪಾಳದಲ್ಲಿ ರಾಜಕೀಯ ಪರಿಸ್ಥಿತಿ ಉಲ್ಬಣಗೊಂಡಿತ್ತು. ಪ್ರತಿಭಟನಾಕಾರರು ಹಿರಿಯ ನಾಯಕರ ನಿವಾಸಗಳಿಗೆ ಬೆಂಕಿ ಹಚ್ಚಿದ್ದು ಸಂಸತ್ ಭವನವನ್ನು ಧ್ವಂಸ ಮಾಡಿದ್ದಾರೆ. ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರು ಸುರಕ್ಷಿತವಾಗಿದ್ದಾರೆ. ರಾಜ್ಯ ಸರ್ಕಾರದ ಅಧಿಕಾರಿಗಳು ವಿದೇಶಾಂಗ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದು ಕನ್ನಡಿಗರನ್ನು ಸುರಕ್ಷಿತವಾಗಿ ಮರಳಿ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಕಾಂಗ್ರೆಸ್ ಶಾಸಕ 2 ದಿನ ED ವಶಕ್ಕೆ

ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಕಬ್ಬಿಣದ ಅದಿರು ರಫ್ತು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರ-ಅಂಕೋಲಾದ ಕಾಂಗ್ರೆಸ್ ಶಾಸಕ ಸತೀಶ್ ಕೃಷ್ಣ ಸೈಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ಬಂಧಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸಿಐಅರ್ ದಾಖಲಿಸಿಕೊಂಡಿದ್ದ ಇ.ಡಿ ಸಹ ತನಿಖೆ ಆರಂಭಿಸಿತ್ತು. ಇದೇ ಆಗಸ್ಟ್‌ 13 ಮತ್ತು 14ರಂದು ಸತೀಶ್ ಅವರ ಕಾರವಾರ ಮತ್ತು ಬೆಂಗಳೂರಿನ ಮನೆಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ರೂ.13 ಕೋಟಿಯಷ್ಟು ನಗದು ಮತ್ತು ಚಿನ್ನಾಭರಣ ವಶಕ್ಕೆ ಪಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸತೀಶ್‌ ಅವರಿಗೆ ಸಮನ್ಸ್‌ ಜಾರಿ ಮಾಡಿತ್ತು. ಮಂಗಳವಾರ ಸೈಲ್ ಅವರು ಇಡಿಯ ಶಾಂತಿನಗರ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು. ಆದಾಗ್ಯೂ, ಅವರು ತನಿಖೆಗೆ ಸಹಕರಿಸದ ಕಾರಣ, ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಇಂದು ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್, ಶಾಸಕರನ್ನು ಸೆಪ್ಟೆಂಬರ್ 12ರವರೆಗೆ ಎರಡು ದಿನಗಳ ಕಾಲ ಇಡಿ ಅಧಿಕಾರಿಗಳ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ.

ಮಂಗಳೂರಿನಲ್ಲಿ ಅಗ್ನಿ ಅವಘಡ

ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಕಾರ್ಯಚರಿಸುತ್ತಿದ್ದ ಆರೋಮಾಝೆನ್ ಸುಗಂಧ ದ್ರವ್ಯ ತಯಾರಿಕಾ ಕಂಪೆನಿಯಲ್ಲಿ ಇಂದು ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು ಕಂಪನಿ ಸಂಪೂರ್ಣ ಸುಟ್ಟುಕರಕಲಾಗಿದೆ. ಅದೃಷ್ಟವಶಾತ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದ್ದು, ಅಪಾರ ನಷ್ಟ ಸಂಭವಿಸಿದೆ. ಅಗ್ನಿ ಅವಘಡದ ಕುರಿತು ಮಾಹಿತಿ ಸಿಗುತ್ತಿದ್ದಂತೆ ಎಂಸಿಎಫ್‌, ಎನ್‌ಎಂ ಪಿಎ, ಮತ್ತು ಕದ್ರಿಯ ಅಗ್ನಿ ಶಾಮಕ ದಳ ವಾಹನಗಳು ಸ್ಥಳಕ್ಕೆ ಬಂದು ಬೆಂಕಿ ನಂದಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Asia Cup 2025: UAE ವಿರುದ್ಧ ಭಾರತಕ್ಕೆ 9 ವಿಕೆಟ್ ಗಳ ಜಯ

ನೇಪಾಳ ಬಿಕ್ಕಟ್ಟು: ಭಾರತದಲ್ಲಿ ಕಟ್ಟೆಚ್ಚರ; ಸಹಾಯವಾಣಿ ಆರಂಭ; ಕಠ್ಮಂಡುವಿಗೆ ವಿಮಾನ, ಬಸ್ ಸೇವೆ ರದ್ದು!

ಮಂಗಳೂರು: ನಕಲಿ ಆಧಾರ್ ಕಾರ್ಡ್‌ ತಯಾರಿಸಿ ಸರ್ಕಾರಿ ಇಲಾಖೆಗಳು, ನ್ಯಾಯಾಲಯಗಳಿಗೆ ವಂಚನೆ; ವ್ಯಕ್ತಿಯ ಬಂಧನ

2,929 ಕೋಟಿ ರೂ ವಂಚನೆ ಆರೋಪ: Anil Ambani ವಿರುದ್ಧ ಹೊಸ ಪ್ರಕರಣ ದಾಖಲು

ಗುಜರಾತ್ ಫ್ಲೋರೋ ಕೆಮಿಕಲ್ ಕಂಪನಿಯಲ್ಲಿ ವಿಷಕಾರಿ ಅನಿಲ ಸೋರಿಕೆ: ಓರ್ವ ಸಾವು, 12 ಮಂದಿ ಆಸ್ಪತ್ರೆಗೆ ದಾಖಲು

SCROLL FOR NEXT