ಬೆಂಗಳೂರು: ಪರಿಶಿಷ್ಟ ಜಾತಿ ಒಳ ಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಬಂಜಾರ, ಭೋವಿ, ಕೊರಚ, ಕೊರಮ ಸ್ಪೃಶ್ಯ ಸಮುದಾಯಗಳು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿವೆ. ಸ್ಪೃಶ್ಯ ಜಾತಿಗಳಾದ ಬಂಜಾರ, ಬೋವಿ, ಕೊರಮ, ಕೊರಚ ಜಾತಿಗಳನ್ನು C ವರ್ಗಕ್ಕೆ ಸೇರ್ಪಡೆ ಮಾಡಿ ಶೇ.5 ರಷ್ಟು ಮೀಸಲಾತಿ ನೀಡಲಾಗಿದೆ. ಆದರೇ, ಹೀಗೆ ಮೀಸಲಾತಿ ಹಂಚಿಕೆ ಮಾಡಿದ್ದರಿಂದ ಸ್ಪೃಶ್ಯ ಜಾತಿಗಳಿಗೆ ಅನ್ಯಾಯ ಆಗಿದೆ ಎಂದು ಇಂದು ಸ್ಪೃಶ್ಯ ಜಾತಿಗಳ ಜನರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ರೊಚ್ಚಿಗೆದ್ದ ಪ್ರತಿಭಟನೆಕಾರರು ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಮಹಿಳೆಯೊಬ್ಬರು ಸ್ಥಳದಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಇನ್ನು ಮಹಾರಾಣಿ ಕಾಲೇಜು ಬಳಿ ಪ್ರತಿಭಟನಾಕಾರರು ರಸ್ತೆ ತಡೆದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ರಸ್ತೆ ತಡೆಯಿಂದಾಗಿ ಕೆ.ಆರ್.ಸರ್ಕಲ್ ಬಳಿ ಫುಲ್ ಟ್ರಾಫಿಕ್ ಜಾಮ್ ಆಗಿದ್ದು, ವಾಹನಗಳು ಕಿಲೋ ಮೀಟರ್ ಉದ್ದ ನಿಂತಲ್ಲೇ ನಿಂತುಕೊಂಡಿವೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಎಡಗೈ ಸಮುದಾಯಕ್ಕೆ ಶೇ. 6 ರಷ್ಟು, ಬಲ ಸಮುದಾಯಕ್ಕೆ ಶೇ. 6 ರಷ್ಟು ಹಾಗೂ ಸ್ಪೃಶ್ಯ ಸಮುದಾಯಕ್ಕೆ ಶೇ.5ರಷ್ಟು ಮೀಸಲಾತಿ ಕಲ್ಪಿಸಲು ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಸ್ಟ್ 20ರಂದು ವಿಧಾನಸೌಧದಲ್ಲಿ ಘೋಷಿಸಿದ್ದರು. ನ್ಯಾ.ನಾಗಮೋಹನ್ ದಾಸ್ ವರದಿಯ ಶಿಫಾರಸುಗಳನ್ನು ಕೆಲ ಮಾರ್ಪಾಡುಗಳೊಂದಿಗೆ ಒಳ ಮೀಸಲಾತಿ ಕಲ್ಪಿಸಲಾಗಿದೆ. A, B, C ಎಂದು ವರ್ಗೀಕರಣ ಮಾಡಿ ಮೀಸಲಾತಿ ಹಂಚಲಾಗಿದ್ದು, ಈ ಮೂಲಕ ದಶಗಳ ಹೋರಾಟಕ್ಕೆ ನಮ್ಮ ಸರ್ಕಾರ ನ್ಯಾಯ ಒದಗಿಸಿದೆ ಎಂದು ಸಿಎಂ ತಿಳಿಸಿದರು. ಆದರೆ ಒಳಮೀಸಲಾಯಿಯಿಂದ ನಮಗೆ ಅನ್ಯಾಯವಾಗುತ್ತದೆ ಎಂದು ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳು ಆಕ್ರೋಶ ವ್ಯಕ್ತಪಡಿಸಿದ್ದವು.
ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ 101 ಜಾತಿಗಳನ್ನು ಐದು ಗುಂಪುಗಳಾಗಿ ವರ್ಗೀಕರಿಸಿ, ಲಭ್ಯ ಶೇಕಡಾ 17 ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಮಾನದಂಡಗಳ ಅನ್ವಯ ಹಂಚಿಕೆ ಮಾಡುವಂತೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ನೇತೃತ್ವದ ಏಕಸದಸ್ಯ ಆಯೋಗ, ಆರು ಶಿಫಾರಸುಗಳನ್ನೂ ಮಾಡಿತ್ತು. ಅಲ್ಲದೆ ಆಯೋಗವು ಸುಮಾರು 1,765 ಪುಟಗಳ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತ್ತು.