ಬೆಂಗಳೂರು: ಬಿಜೆಪಿ ತನ್ನ ಆಡಳಿತ ಅವಧಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಸಲು ಅವಕಾಶ ಕಲ್ಪಿಸಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಕೆ ಬಗ್ಗೆ ಕೇಳಿದಾಗ, “ಬಿಜೆಪಿ ಅಧಿಕಾರದಲ್ಲಿದ್ದಾಗ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಸಬಹುದು ಎಂದು ಕಾನೂನು ತಂದಿದೆ.
ಚುನಾವಣಾ ಆಯೋಗದ ಉಪಕಾನೂನಿನಲ್ಲಿ ಮತಪತ್ರ ಬಳಸಲು ಅವಕಾಶ ಕಲ್ಪಿಸಲಾಗಿದೆ. ಜಿಬಿಎ ಕಾಯ್ದೆ ಜಾರಿಗೆ ತರುವಾಗ, ಬಿಜೆಪಿ ಮಾಡಿದ್ದ ಕಾಯ್ದೆಯನ್ನೇ ಮುಂದುವರಿಸಿದ್ದೇನೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಸುವುದರಲ್ಲಿ ತಪ್ಪೇನು ಇಲ್ಲ. ಈ ವಿಚಾರವಾಗಿ ಕಾನೂನು ಸಚಿವರು ಪ್ರಸ್ತಾವನೆ ಸಲ್ಲಿಸಿದ್ದಾರೆ” ಎಂದು ತಿಳಿಸಿದರು.
ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೆಂಟ್ ಮೇರಿಸ್ ಹೆಸರಿಡಬೇಕು ಎಂಬ ಸಿಎಂ ಸಿದ್ದರಾಮಯ್ಯ ಅವರ ಪ್ರಸ್ತಾವನೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, “ಮೆಟ್ರೋ ನಿಲ್ದಾಣಗಳಿಗೆ ಹೆಸರಿಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಈ ವಿಚಾರವಾಗಿ ನಾವು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ” ಎಂದು ತಿಳಿಸಿದರು.
ಗೃಹಸಚಿವ ಪರಮೇಶ್ವರ್ ಅವರು ಎಬಿವಿಪಿ ಆಯೋಜಿಸಿದ್ದ ರಾಣಿ ಅಬ್ಬಕ್ಕ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ನನಗೆ ಮಾಹಿತಿ ಇಲ್ಲ. ಇದರ ಬಗ್ಗೆ ಮಾಹಿತಿ ಪಡೆದು ನಂತರ ಪ್ರತಿಕ್ರಿಯೆ ನೀಡುತ್ತೇನೆ” ಎಂದರು.
ಖರ್ಗೆ ಅವರು ಹಿರಿಯ ನಾಯಕರು. ಯಾರೆಲ್ಲಾ ಹುದ್ದೆ ಹಾಗೂ ಜವಾಬ್ದಾರಿ ತೆಗೆದುಕೊಂಡಿದ್ದಾರೆ ಅವರು ಪಕ್ಷಕ್ಕೆ ನಿಷ್ಠರಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ಕಾರ್ಯಕರ್ತರಾಗಿ, ಪಕ್ಷದ ಪದಾಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡವರು ಅದಕ್ಕಾಗಿ ಸಮಯ ಮೀಸಲಿಡಬೇಕು. ಈ ಹುದ್ದೆಗಳು ಹೇಳಿಕೊಳ್ಳುವುದಕ್ಕೆ ಪಡೆಯುವಂತಹದ್ದಲ್ಲ. ಇದು ಪಕ್ಷ ಸಂಘಟನೆಗೆ ಹಾಗೂ ಪಕ್ಷದ ಆಚಾರ ವಿಚಾರಗಳನ್ನು ಜನರಿಗೆ ಮನವರಿಕೆ ಮಾಡಲು ನೀಡಲಾಗುವುದು” ಎಂದು ತಿಳಿಸಿದರು.
ಮದ್ದೂರಿನಲ್ಲಿ ದ್ವೇಷ ಭಾಷಣ ಹಿನ್ನೆಲ್ಲೆಯಲ್ಲಿ ಬಿಜೆಪಿ ನಾಯಕ ಸಿ.ಟಿ ರವಿ ಅವರ ವಿರುದ್ಧ ಎಫ್ಐಆರ್ ದಾಖಲಾಗಿರುವ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ನನಗೆ ಹೆಚ್ಚು ಮಾಹಿತಿ ಇಲ್ಲ. ಅವರು ಮಾತು, ಭಾಷೆ, ನಡತೆಯೇ ಅವರ ಪದ್ಧತಿ, ಸಂಸ್ಕೃತಿಯನ್ನು ತೋರುತ್ತದೆ” ಎಂದು ತಿಳಿಸಿದ್ದಾರೆ.