ಬೆಂಗಳೂರು: ಕಾರಾಗೃಹದಲ್ಲಿರುವ ವಿಚಾರಣಾಧೀನ ಹಾಗೂ ಸಜಾ ಕೈದಿಗಳಿಗೆ ಕದ್ದುಮುಚ್ಚಿ ಮೊಬೈಲ್ ಪೂರೈಕೆ ಸೇರಿದಂತೆ ಇತ್ತೀಚಿಗಿನ ನಟ ದರ್ಶನ್‌ಗೆ ದೊರಕುತ್ತಿದ್ದ ರಾಜಾತಿಥ್ಯ ವಿಚಾರವಾಗಿ ಪರಪ್ಪನ ಅಗ್ರಹಾರ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. ಇದೀಗ ಪರಪ್ಪನ ಅಗ್ರಹಾರ ಮತ್ತೆ ಸುದ್ದಿಯಲ್ಲಿದ್ದು ಜೈಲು ವಾರ್ಡನ್ನಿಂದಲೇ ಕೈದಿಗಳಿಗೆ ಮಾದಕ ವಸ್ತುಗಳ ಪೂರೈಕೆ ಮಾಡಲಾಗಿದೆ ಎಂಬುದು ಬಹಿರಂಗಗೊಂಡಿದೆ.
ಕೈದಿಗಳಿಗೆ ಮಾದಕ ವಸ್ತುಗಳ ಪೂರೈಕೆ ಮಾಡಿದ್ದ ಜೈಲಿನ ವಾರ್ಡನ್ ಕಲ್ಲಪ್ಪ ಹೆಚ್ ಅಬಾಚಿ ಎಂಬಾತನನ್ನು ಬಂಧನಕ್ಕೊಳಪಡಿಸಲಾಗಿದೆ. ಈತನಿಂದ 1 ಲಕ್ಷ ರೂ. ಮೌಲ್ಯದ 100 ಗ್ರಾಂ ಆಶಿಶ್ ಆಯಿಲ್ ಜಪ್ತಿ ಮಾಡಲಾಗಿದೆ.
ಮಾಜಿ ಸೈನಿಕನಾಗಿರುವ ಕಲ್ಲಪ್ಪ, ಭಾರತೀಯ ಸೇನೆಯಿಂದ ಸ್ವಯಂಪ್ರೇರಿತ ನಿವೃತ್ತಿ ಪಡೆದು 2018 ರಲ್ಲಿ ಮಾಜಿ ಸೈನಿಕ ಕೋಟಾದಡಿಯಲ್ಲಿ ಕಾರಾಗೃಹ ಸೇವೆಗೆ ಸೇರ್ಪಡೆಗೊಂಡಿದ್ದ. ಈತ ಈ ಹಿಂದೆ ಧಾರವಾಡ ಜೈಲಿನಲ್ಲಿ ವಾರ್ಡರ್ ಆಗಿ ಸೇವೆ ಸಲ್ಲಿಸಿದ್ದು, ಮೂರು ತಿಂಗಳ ಹಿಂದಷ್ಟೇ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆಗೊಂಂಡಿದ್ದ ಎಂದು ತಿಳಿದುಬಂದಿದೆ.
ಭಾನುವಾರ ರಾತ್ರಿ ಜೈಲಿನ ಡ್ಯೂಟಿಗೆ ಬರುವ ವೇಳೆ ಸಿಐಎಸ್ಎಫ್ ಸಿಬ್ಬಂದಿಗಳಿಂದ ಪ್ರವೇಶ ದ್ವಾರದ ಬಳಿ ಕಲ್ಲಪ್ಪ ಅವರನ್ನು ಪರಿಶೀಲನೆ ಮಾಡಲಾಗಿದ್ದು, ಈ ವೇಳೆ ಜೇಬಿನಲ್ಲಿ ತಂಬಾಕು ಮತ್ತು ಆಶಿಶ್ ಆಯಿಲ್ ಪತ್ತೆ ಆಗಿದೆ.
ಬಳಿಕ ಕಲ್ಲಪ್ಪನನ್ನು ಬಂಧಿಸಿದ ಪೊಲೀಸರು ಆತನಿಂದ 100 ಗ್ರಾಂ ಆಶಿಶ್ ಆಯಿಲ್ ಜಪ್ತಿ ಮಾಡಿದ್ದಾರೆ. ಇದೀಗ ಈತನ ವಿರುದ್ಧ ಎನ್'ಡಿಪಿಎಸ್ ಕಾಯ್ದೆ ಮತ್ತು ಕರ್ನಾಟಕ ಕಾರಾಗೃಹ ಕಾಯ್ದೆಯ ಸೆಕ್ಷನ್ 42 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಕಲ್ಲಪ್ಪ ಯಾರಿಗಾಗಿ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಎಂಬುದನ್ನು ಪತ್ತೆ ಮಾಡಲು ವಿಚಾರಣೆ ನಡೆಸಲಾಗುತ್ತಿದೆ. ಬಂಧನದ ನಂತರ ಆರೋಪಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಜೈಲು ಮೂಲಗಳು ತಿಳಿಸಿವೆ.