ಬೆಂಗಳೂರು: ನಾನು ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಐ ಯಾಮ್ ಎ ಟ್ರೂ ಕಾಂಗ್ರೆಸ್ ಮ್ಯಾನ್'' ಎಂದು ಗೃಹ ಸಚಿವ ಜಿ.ಪರಮೇಶ್ವರ್ ಗುರುವಾರ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಬೆಂಬಲಿತ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ABVP) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಪರಮೇಶ್ವರ್ ವಿವಾದಕ್ಕೆ ಕಾರಣವಾಗಿದ್ದಾರೆ.
ಈ ಕುರಿತು ಸದಾಶಿವನಗರದ ತಮ್ಮ ನಿವಾಸದ ಬಳಿ ಪ್ರತಿಕ್ರಿಯಿಸಿದ ಪರಮೇಶ್ವರ್, ''ನಾನು ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ನಾನು ದಾರಿಯಲ್ಲಿ ಬರುತ್ತಿದ್ದೆ. ಅಲ್ಲಿ ರಾಣಿ ಅಬ್ಬಕ್ಕ ಮೆರವಣಿಗೆ ಹೊರಟಿತ್ತು. ಅಬ್ಬಕ್ಕನಿಗೆ ಹೂ ಹಾಕಿದ್ದೇವಷ್ಟೇ. ಈ ವೇಳೆ ಶಾಸಕ ಷಡಕ್ಷರಿ ನಾನೂ ಒಟ್ಟಿಗೆ ಇದ್ದೆವು. ನಾನು ಯಾವ ಎಬಿವಿಪಿ ಕಾರ್ಯಕ್ರಮವನ್ನೂ ಅಟೆಂಡ್ ಮಾಡಿಲ್ಲ'' ಎಂದು ಸ್ಪಷ್ಟನೆ ನೀಡಿದರು.
ವಿವಾದ ಮಾಡುವುದಾದರೆ ಮಾಡಿಕೊಳ್ಳಲಿ. ನನಗೇನೂ ತೊಂದರೆ ಇಲ್ಲ. ನಾನು ನನ್ನ ಐಡಿಯಾಲಜಿಗೆ ಬದ್ಧತೆ ಇರುವವನು. ಅದನ್ನು ಯಾರೂ ಪ್ರಶ್ನೆ ಮಾಡುವ ಹಾಗಿಲ್ಲ. ಐ ಯಾಮ್ ಎ ಟ್ರೂ ಕಾಂಗ್ರೆಸ್ ಮ್ಯಾನ್. ಐ ಆಮ್ ಎ ಡೈ ಹಾರ್ಡ್ ಕಾಂಗ್ರೆಸ್ ಮ್ಯಾನ್. ನಮಗೂ ರಾಜಕೀಯ ವಿರೋಧಿಗಳು ಇರುತ್ತಾರೆ. ಅವರು ಏನು ಬೇಕಾದರೂ ಮಾಡುತ್ತಿರಬಹುದು. ಪಕ್ಷದ ಒಳಗೆ, ಹೊರಗೂ ಇರಬಹುದು. ಇಂತಹ ಚೀಪ್ ಟ್ರಿಕ್ಸ್ ಜನರಿಗೆ ಗೊತ್ತಾಗುತ್ತದೆ. ಪರಮೇಶ್ವರ್ ಏನು ಅಂತ ಇಡೀ ರಾಜ್ಯಕ್ಕೆ ಗೊತ್ತು. ಕಳೆದ 35 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ರಾಜಕೀಯ ಏನು ಅಂತ ನನಗೂ ಗೊತ್ತಿದೆ. ನಾನು ಅದನ್ನು ಪದೇ ಪದೆ ಸಾಬೀತು ಮಾಡಬೇಕಿಲ್ಲ'' ಎಂದರು.
ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷರು ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಈ ವಿವಾದದ ಬಗ್ಗೆ ನನಗೇನೂ ಗೊತ್ತಿಲ್ಲ. ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು ಹೇಳಿದರು.
ಇತ್ತೀಚಿಗೆ ಡಿಕೆ ಶಿವಕುಮಾರ್ ಕೂಡಾ ವಿಧಾನಸಭೆಯಲ್ಲಿ ಆರ್ ಎಸ್ ಎಸ್ ಪ್ರಾರ್ಥನಾ ಗೀತೆ ಹಾಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು. ಇದಕ್ಕೆ ಪಕ್ಷದೊಳಗೆ ತೀವ್ರ ಟೀಕೆಗಳು ಕೇಳಿಬಂದ ನಂತರ ಕ್ಷಮೆಯಾಚಿಸಿದ್ದರು.