ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳು ಮತ್ತು ನಿಗಮಗಳು/ಮಂಡಳಿಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಒದಗಿಸುವ ಕಾರ್ಯಸಾಧ್ಯತೆಗಳ ಅಧ್ಯಯನ ನಡೆಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಉಪಸಮಿತಿ ರಚಿಸಲು ನಿರ್ಧರಿಸಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು, ಈ ವಿಷಯವನ್ನು ತಿಳಿಸಿದರು.
ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳು ಮತ್ತು ನಿಗಮಗಳು/ಮಂಡಳಿಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಮತ್ತು ಇತರ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಸಾಧಕ-ಬಾಧಕಗಳ ಕುರಿತು ಉಪಸಮಿತಿಯನ್ನು ರಚಿಸಲಾಗುತ್ತಿದ್ದು, ಈ ಸಮತಿಯು ಸಂಪುಟಕ್ಕೆ ವರದಿ ಸಲ್ಲಿಸಿ, ಶಿಫಾರಸುಗಳನ್ನು ಮಾಡಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ರಾಜ್ಯ ಹಾಗೂ ಜಿಲ್ಲಾಮಟ್ಟದ ಸರ್ಕಾರಿ ಕಾರ್ಯ ಕ್ರಮಗಳಲ್ಲಿ ಶಿಸ್ತು ತರುವ ಸಲುವಾಗಿ ವೇದಿಕೆ ಮೇಲೆ ಆಸೀನರಾಗುವ ಅತಿಥಿಗಳಿಗೆ ಕಡಿವಾಣ ವಿಧಿಸಲು ತೀರ್ಮಾನಿಸಲಾಗಿದ್ದು, ಸಂಖ್ಯೆಯನ್ನು 9ಕ್ಕೆ ಸೀಮಿತಗೊಳಿಸಲು ನಿಯಮ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ತೀರಾ ಅನಿವಾರ್ಯವಾದರೆ 13 ಮಂದಿ ಅತಿಥಿಗಳವರೆಗೆ ಅವಕಾಶ ನೀಡಬಹುದು. ಅತಿಥಿಗಳ ಸಂಖ್ಯೆ ನಿರ್ಧಾರ ಅಧಿಕಾರವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹೊಂದಿರತಕ್ಕದ್ದು ಎಂದು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶಿಷ್ಟಾಚಾರ ಪಟ್ಟಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಅಂತಿಮಗೊಳಿಸಲು ಅವಕಾಶ ಕಲ್ಪಿಸಲಾಗುತ್ತದೆ. ಈ ನಿರ್ಧಾರಕ್ಕೂ ಆರ್‌ಸಿಬಿ ತಂಡದ ಸನ್ಮಾನ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.
ಆಹ್ವಾನ ಪತ್ರಿಕೆಯಲ್ಲಿ ಇಲ್ಲದವರೂ ಕಾರ್ಯಕ್ರಮದ ವೇದಿಕೆಯಲ್ಲಿ ಬಂದು ಆಸೀನರಾಗುತ್ತಾರಲ್ಲ ಎಂಬ ಪ್ರಶ್ನೆಗೆ, “ಅದು ಶಿಷ್ಟಾಚಾರದ ವ್ಯಾಪ್ತಿಗೆ ಬರುವುದಿಲ್ಲ; ಅದು ಅಶಿಸ್ತು ಆಗುತ್ತದೆ' ಎಂದಷ್ಟೇ ಹೇಳಿದರು.
ರಾಜ್ಯದಲ್ಲೂ ರಾಜಸ್ಥಾನ ಮಾದರಿಯಲ್ಲಿ ಬಯೋಡೀಸೆಲ್ ಉತ್ಪಾದನೆ, ದಾಸ್ತಾನು ಮತ್ತು ಮಾರಾಟಕ್ಕೆ ಪರವಾನಗಿ ನೀಡುವ 2022ರ ಹೈಸ್ಪೀಡ್ ಡೀಸೆಲ್ ನೊಂದಿಗೆ ಬಯೋ ಡೀಸೆಲ್ (ಬಿ.100) ಮಿಶ್ರಣ ಮಾಡುವ (ಪರವಾನಗಿ) ಕರಡು ಅಧಿಸೂಚನೆಗೆ ಅನುಮೋದನೆ ನೀಡಲಾಗಿದೆ. ಇದರಂತೆ ಸೀಮೆಎಣ್ಣೆಯಂತೆ ನಿರ್ದಿಷ್ಟ ಮುಕ್ತ ಮಾರಾಟ ಮಳಿಗೆಗಳಲ್ಲಿ ಬಯೋ ಡೀಸೆಲ್ ಕೂಡ ದೊರೆಯಲಿದೆ ಎಂದು ಮಾಹಿತಿ ನೀಡಿದರು.
ಅಡುಗೆ ಎಣ್ಣೆಯಿಂದ ಗಣನೀಯ ಪ್ರಮಾಣದಲ್ಲಿ ಬಯೋಡೀಸೆಲ್ ಉತ್ಪಾದನೆ ಮಾಡಲಾಗುತ್ತಿದ್ದು, ಅದನ್ನು ಮುಕ್ತ ಮಾರುಕಟ್ಟೆ ಮಳಿಗೆಗಳಲ್ಲಿ ಮಾರಾಟಕ್ಕೆ ಪರವಾನಗಿ ನೀಡಲಾಗುವುದು. ಈ ಪರವಾನಗಿ ಸೇರಿ ಒಟ್ಟಾರೆ ನಿರ್ವಹಣೆಗೆ ನೋಡಲ್ ಏಜೆನ್ಸಿಯಾಗಿ ಕರ್ನಾಟಕ ರಾಜ್ಯ ಬಯೋ ಡೀಸೆಲ್ ಇಂಧನ ಮಂಡಳಿ ಕೆಲಸ ಮಾಡಲಿದೆ ಎಂದು ಹೇಳಿದರು.