ಬೆಂಗಳೂರು: ಹಣ ವರ್ಗಾವಣೆ, ಅಕ್ರಮ ನಿವೇಶನ ಹಂಚಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಅವರನ್ನು ಮಂಗಳವಾರ ಬಂಧನಕ್ಕೊಳಪಡಿಸಿದೆ.
ಮುಡಾ ಕೇಸ್‌ನಲ್ಲಿ ವಿಚಾರಣೆಗೆಂದು ಸೆಪ್ಟೆಂಬರ್ 16ರಂದು ಬೆಂಗಳೂರಿನ ಶಾಂತಿನಗರದಲ್ಲಿ ಇಡಿ ಕಚೇರಿಗೆ ದಿನೇಶ್ ಕುಮಾರ್ ಆಗಮಿಸಿದ್ದರು. ಈ ವೇಳೆ ಇಡಿ ಅಧಿಕಾರಿಗಳು ವಿಚಾರಣೆ ಮಾಡಿ, ದಿನೇಶ್ ಅವರನ್ನ ಬಂಧನಕ್ಕೊಳಪಡಿಸಿದ್ದಾರೆ.
ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ, ಈ ದಾಖಲೆಗಳ ಮೂಲಕ ಸೈಟ್ ಗಳನ್ನು ಮರುಹಂಚಿಕೆ ಮಾಡಿ ದಿನೇಶ್ ಕುಮಾರ್ ಅವರು ಲಾಭ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಈ ಹಣದಿಂದ ಆಸ್ತಿ ಗಳಿಕೆ ಮಾಡಿರುವುದಕ್ಕೆ ದಾಖಲೆ ಪತ್ತೆಯಾಗಿದೆ ಎಂದು ವರದಿ ಆಗಿದೆ.
2022ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಜಿ.ಟಿ.ದಿನೇಶ್ ಕುಮಾರ್ ಅಧಿಕಾರ ಸ್ವೀಕರಿಸಿದ್ದರು. ದಿನೇಶ್ ಕುಮಾರ್ ವಿರುದ್ಧ ಮುಡಾದಲ್ಲಿ 50:50 ಅನುಪಾತದಡಿ ಸೈಟ್ ಹಂಚಿಕೆಯಲ್ಲಿ ಅಕ್ರಮ ಆರೋಪ ಕೇಳಿ ಬಂದ ಹಿನ್ನೆಲೆ ಸರ್ಕಾರ ಅವರನ್ನು ವರ್ಗಾವಣೆ ಮಾಡಿತ್ತು. ನಂತರ ಹಾವೇರಿ ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರ್ ಆಗಿ ನೇಮಿಸಲಾಯಿತು, ಆದರೆ, ಸಾರ್ವಜನಿಕ ಟೀಕೆಗಳ ನಂತರ ಆದೇಶವನ್ನು ರದ್ದುಗೊಳಿಸಲಾಗಿತ್ತು.
ಈ ಹಿಂದೆ, ಕರ್ನಾಟಕ ಲೋಕಾಯುಕ್ತ ಪೊಲೀಸರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಮತ್ತು ದಿನೇಶ್ ಕುಮಾರ್ ಇಬ್ಬರ ವಿರುದ್ಧವೂ ತನಿಖೆ ನಡೆಸಲು ಸರ್ಕಾರದಿಂದ ಪ್ರಾಸಿಕ್ಯೂಷನ್ ಅನುಮತಿಯನ್ನು ಕೋರಿದ್ದರು. ಆದರೆ, ದಿನೇಶ್ ವಿರುದ್ಧ ಮಾತ್ರ ಪ್ರಾಸಿಕ್ಯೂಷನ್'ಗೆ ಅನುಮತಿ ನೀಡಲಾಗಿತ್ತು. ಇದರಂತೆ ತನಿಖಾ ಸಂಸ್ಥೆಗಳು ತನಿಖೆಯನ್ನು ಮುಂದುವರೆಸಿತ್ತು.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಇಡಿ ಈಗಾಗಲೇ ದಿನೇಶ್ ಅವರಿಗೆ ಸೇರಿದ ಹಲವಾರು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
ದಿನೇಶ್ ಕುಮಾರ್ ಸುದ್ದಿಗೆ ಬರುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಅಕ್ಟೋಬರ್ 28 ರಂದು, ಇಡಿ ಅಧಿಕಾರಿಗಳು ಬಾಣಸವಾಡಿಯ ದೀಪಿಕಾ ರಾಯಲ್ ಅಪಾರ್ಟ್‌ಮೆಂಟ್‌ನಲ್ಲಿರುವ ಅವರ ನಿವಾಸದ ಮೇಲೆ ದಾಳಿ ಮಾಡಿದ್ದರು ಈ ವೇಳೆ ವಾಕಿಂಗ್ ಹೋಗಿದ್ದ ದಿನೇಶ್ ಅವರು ಮನೆಗೆ ಹಿಂತಿರುಗಿರಲಿಲ್ಲ ಎಂದು ಆರೋಪಿಸಲಾಗಿದೆ. ನಂತರ ವಿಚಾರಣೆಗಾಗಿ ಇಡಿ ಮುಂದೆ ಹಾಜರಾಗಿದ್ದರು ಎಂದು ತಿಳಿದುಬಂದಿದೆ.