ಬೆಂಗಳೂರು: ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಜಾರಿ ವಿಭಾಗದ (ದಕ್ಷಿಣ ವಲಯ) ಅಧಿಕಾರಿಗಳು ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಲ್ಲಿ ದಾಳಿ ನಡೆಸಿ ಸೂಕ್ತ ದಾಖಲೆಗಳಿಲ್ಲದ ವಿವಿಧ ಬ್ರ್ಯಾಂಡ್‌ಗಳ 850ಕ್ಕೂ ಹೆಚ್ಚು ಚೀಲಗಳ ಪಾನ್ ಮಸಾಲಾ ಹಾಗೂ ತಂಬಾಕು ಪದಾರ್ಥಗಳನ್ನು ವಶಕ್ಕೆ ಪಡೆದಿದ್ದಾರೆ.
ಜಿಎಸ್‌ಟಿ ನಿಯಮಗಳ ಪ್ರಕಾರ ಬಿಲ್ಲುಗಳಿಲ್ಲದೆ ಸಾಗಿಸಲಾಗುತ್ತಿದ್ದ ದೊಡ್ಡ ಪ್ರಮಾಣದ ತಂಬಾಕು ಪದಾರ್ಥ ವಶಪಡಿಸಿಕೊಳ್ಳಲಾಗಿದೆ.
ಕಮಲಾ ಪಸಂದ್ ಪಾನ್ ಮಸಾಲಾ, ಹ್ಯಾನ್ಸ್ ಚಾಪ್, ಚೈನಿ ಫಿಲ್ಟರ್ ತಂಬಾಕು ಹಾಗೂ ಶಿಖರ್ ಪಾನ್ ಮಸಾಲಾ ಬ್ರ್ಯಾಂಡ್'ಗಳ ಪಾನ್ ಮಸಾಲಾ ಹಾಗೂ ತಂಬಾಕು ಪದಾರ್ಥಗಳನ್ನು ದೆಹಲಿಯಿಂದ ಬೆಂಗಳೂರಿಗೆ ರೈಲಿನ ಮೂಲಕ ಸಾಗಿಸಲಾಗಿತ್ತು. ಅವುಗಳನ್ನು ಸರಕು ವಾಹನಗಳಲ್ಲಿ ಹಾಗೂ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಚೀಲಗಳಲ್ಲಿ ತುಂಬಿ ಇಡಲಾಗಿತ್ತು. ಇದನ್ನು ಅಧಿಕಾರಿಗಳ ಪತ್ತೆ ಮಾಡಿದ್ದು, ಪರಿಶೀಲನೆಯ ಸಂದರ್ಭದಲ್ಲಿ 1 ಕೋಟಿ ರು. ಮೌಲ್ಯದ ಒಟ್ಟು 850ಕ್ಕೂ ಅಧಿಕ ಚೀಲಗಳ ಪಾನ್ ಮಸಾಲಾ ಹಾಗೂ ತಂಬಾಕು ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿಎಸ್‌ಟಿ ನಿಯಮಾವಳಿ ಉಲ್ಲಂಘನೆಯ ಸ್ವರೂಪವನ್ನು ಖಚಿತಪಡಿಸಲು ವಾಣಿಜ್ಯ ತೆರಿಗೆ ಇಲಾಖೆ ಪರಿಶೀಲನಾ ಪ್ರಕ್ರಿಯೆ ಮುಂದುವರಿಸಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.