ಸಿದ್ದರಾಮಯ್ಯ ಸಚಿವ ಸಂಪುಟ ಸಭೆ 
ರಾಜ್ಯ

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತಗಳ್ಳತನ ಮೂಲಕ ವ್ಯವಸ್ಥಿತವಾಗಿ ಬುಡಮೇಲುಗೊಳಿಸಲಾಗುತ್ತಿದೆ: ಸಿದ್ದರಾಮಯ್ಯ

ಕಲಬುರಗಿ ಜಿಲ್ಲೆಯ ಆಳಂದ ಮತಕ್ಷೇತ್ರದ ಪ್ರಕರಣವು ಕೇವಲ ಈ ಒಂದು ಕ್ಷೇತ್ರಕ್ಕೆ ಸೀಮಿತವಾದುದ್ದಲ್ಲ, ಇದು ದೇಶಾದ್ಯಂತ ವ್ಯಾಪಿಸಿರುವ ಬೃಹತ್‌ ಚುನಾವಣಾ ಅಕ್ರಮ ಜಾಲದ ಒಂದು ಕೊಂಡಿಯಷ್ಟೇ.

ಬೆಂಗಳೂರು: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೇಗೆ ಮತಗಳ್ಳತನದ ಮೂಲಕ ವ್ಯವಸ್ಥಿತವಾಗಿ ಬುಡಮೇಲುಗೊಳಿಸಲಾಗುತ್ತಿದೆ ಎಂಬ ಕರಾಳ ಸತ್ಯವನ್ನು ಮತ್ತೊಮ್ಮೆ ರಾಹುಲ್‌ ಗಾಂಧಿ ಅವರು ದೇಶದ ಜನರೆದುರು ತೆರೆದಿಟ್ಟಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ.

2023 ರ ವಿಧಾನಸಭಾ ಚುನಾವಣೆಗೆ ಮುನ್ನ ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 6,000 ಮತದಾರರ ಹೆಸರನ್ನು ಅಳಿಸಲು ಪ್ರಯತ್ನಿಸಲಾಗಿದೆ ಎಂಬ ಚುನಾವಣಾ ಆಯೋಗದ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಆರೋಪ ಕುರಿತು ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ನಮ್ಮ ನಾಯಕ ರಾಹುಲ್ ಗಾಂಧಿ ಅವರು ಬಯಲು ಮಾಡಿರುವ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದ ಸತ್ಯಾಂಶಗಳು ಅತ್ಯಂತ ಆಘಾತಕಾರಿಯಾಗಿವೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೇಗೆ ಮತಗಳ್ಳತನದ ಮೂಲಕ ವ್ಯವಸ್ಥಿತವಾಗಿ ಬುಡಮೇಲುಗೊಳಿಸಲಾಗುತ್ತಿದೆ ಎಂಬ ಕರಾಳ ಸತ್ಯವನ್ನು ಮತ್ತೊಮ್ಮೆ ರಾಹುಲ್‌ ಗಾಂಧಿ ಅವರು ದೇಶದ ಜನರೆದುರು ತೆರೆದಿಟ್ಟಿದ್ದಾರೆಂದು ಹೇಳಿದ್ದಾರೆ.

ಕಲಬುರಗಿ ಜಿಲ್ಲೆಯ ಆಳಂದ ಮತಕ್ಷೇತ್ರದ ಪ್ರಕರಣವು ಕೇವಲ ಈ ಒಂದು ಕ್ಷೇತ್ರಕ್ಕೆ ಸೀಮಿತವಾದುದ್ದಲ್ಲ, ಇದು ದೇಶಾದ್ಯಂತ ವ್ಯಾಪಿಸಿರುವ ಬೃಹತ್‌ ಚುನಾವಣಾ ಅಕ್ರಮ ಜಾಲದ ಒಂದು ಕೊಂಡಿಯಷ್ಟೇ. ಇದೇ ಮಾದರಿಯಲ್ಲಿ ಇಡೀ ದೇಶದಲ್ಲಿ ಚುನಾವಣಾ ಪ್ರಕ್ರಿಯೆಯ ದುರುಪಯೋಗದ ಮೂಲಕ ಭಾರತೀಯರನ್ನು ಅವರ ಮತದಾನದ ಹಕ್ಕಿನಿಂದ ವಂಚಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

2022ರ ಫೆಬ್ರವರಿಯಿಂದ 2023ರ ಫೆಬ್ರವರಿ ವರೆಗೆ ಆಳಂದ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಅಪ್ಲಿಕೇಷನ್‌ ಮೂಲಕ ಫಾರ್ಮ್‌ 7ರ ಅಡಿ ಮತದಾರರ ಹೆಸರುಗಳನ್ನು ಅಳಿಸಿಹಾಕುವಂತೆ ಒಟ್ಟು 6,018 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಕೇವಲ 24 ಅರ್ಜಿಗಳು ಅಸಲಿಯಾಗಿದ್ದು, ಉಳಿದ 5,994 ಅರ್ಜಿಗಳು ನಕಲಿ ಎಂಬುದು ತನಿಖೆಯ ಮೂಲಕ ತಿಳಿದುಬಂದಿದೆ.

ಮತದಾರರ ಮಾಹಿತಿ ಕಳವು, ನಕಲಿ ಲಾಗಿನ್‌ ಗಳು ಹಾಗೂ ಹೊರರಾಜ್ಯದ ಮೊಬೈಲ್‌ ಸಂಖ್ಯೆಗಳ ಮೂಲಕ ಬೇನಾಮಿ ಅರ್ಜಿಗಳ ಸಲ್ಲಿಕೆ ಮಾಡಲಾಗಿದೆ. ಕುಟುಂಬವೊಂದರ ಅರಿವಿಗೆ ಬಾರದೆಯೇ ಇಡೀ ಕುಟುಂಬದ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡುವಂತೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಬಗ್ಗೆ ದೂರು ದಾಖಲಾಗಿದ್ದು, ಸಿಐಡಿ ತನಿಖೆ ನಡೆಸುತ್ತಿದೆ.

ಈ ಪ್ರಕರಣದಲ್ಲಿ ಭಾಗಿಯಾದವರು ಯಾರು? ಮತ್ತು ಯಾವ ಸ್ಥಳದಿಂದ ಈ ಎಲ್ಲಾ ಕೃತ್ಯಗಳು ನಡೆದಿದ್ದವು? ಎಂದು ಪತ್ತೆಹಚ್ಚಲು ಟೆಕ್ನಿಕಲ್‌ ಮಾಹಿತಿಗಳಾದ ಐಪಿ ಅಡ್ರೆಸ್‌, ಬಳಕೆಯಾದ ಡಿವೈಸ್‌ ಗಳು ಮತ್ತು ಒಟಿಪಿ ಪಡೆದವರ ವಿವರಗಳನ್ನು ಕಳೆದ 18 ತಿಂಗಳಗಳಿಂದ ರಾಜ್ಯದ ಸಿಐಡಿ ತನಿಖಾ ಸಂಸ್ಥೆಯವರು ನಿರಂತರವಾಗಿ ಚುನಾವಣಾ ಆಯೋಗದ ಬಳಿ ಕೇಳುತ್ತಿದ್ದಾರೆ. ಆದರೆ, ಚುನಾವಣಾ ಆಯೋಗವು ಈ ಮಾಹಿತಿಯನ್ನು ಒದಗಿಸಲು ನಿರಾಕರಿಸುತ್ತಾ ಬಂದಿದೆ.

ಇಂದು ಚುನಾವಣಾ ಆಯೋಗವು ಈ ಬೇಡಿಕೆಗಳಿಗೆ ಸೂಕ್ತ ಮಾಹಿತಿಯನ್ನು ಒದಗಿಸಿ ಸ್ಪಂದಿಸುವ ಬದಲು ನಿರ್ಧಿಷ್ಟ ಪ್ರಕ್ರಿಯೆಗೊಳಪಡದೆ ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಡುವುದು ಅಸಾಧ್ಯವೆಂದು ಹೇಳಿ ಈ ಎಲ್ಲಾ ಆರೋಪಗಳನ್ನು “ಆಧಾರ ರಹಿತ ಮತ್ತು ಅಸತ್ಯ” ಎಂದು ತಳ್ಳಿಹಾಕಿದೆ. ಸಿಐಡಿ ಕಡೆಯಿಂದ 18 ನಿರಂತರ ಮನವಿಗಳ ಹೊರತಾಗಿಯೂ ಚುನಾವಣಾ ಆಯೋಗ ಡಿಜಿಟಲ್‌ ಸಾಕ್ಷ್ಯಗಳನ್ನು ನೀಡದಿರಲು ಕಾರಣವೇನು ಎಂಬ ಪ್ರಶ್ನೆ ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ.

ರಾಹುಲ್‌ ಗಾಂಧಿ ಅವರು ಮುಂದಿಟ್ಟಿರುವ ಸಾಕ್ಷ್ಯಗಳ ಆಧಾರದಲ್ಲಿ ನೋಡುವುದಾದರೆ ಇದು ಸ್ಥಳೀಯವಾಗಿ ನಡೆದ ಅಕ್ರಮವಲ್ಲ ಎಂಬುದಂತು ಸ್ಪಷ್ಟ. ಪ್ರತಿ ಬೂತ್‌ ನ ಮೊದಲ ಮತದಾರನ ಹೆಸರಲ್ಲಿ ಅರ್ಜಿ ಸಲ್ಲಿಕೆಯಾಗಿದೆ, ನಕಲಿ ಫೋನ್‌ ನಂಬರ್‌ ಗಳು ಸೇರ್ಪಡೆಗೊಂಡಿವೆ ಮತ್ತು ಕಾಂಗ್ರೆಸ್‌ ಪ್ರಾಬಲ್ಯವಿರುವ ಬೂತ್‌ ಗಳಲ್ಲಿಯೇ ಮತದಾರರ ಹೆಸರು ಡಿಲೀಟ್‌ ಮಾಡುವ ಪ್ರಕ್ರಿಯೆಯು ಕೇಂದ್ರೀಕೃತವಾಗಿ ನಡೆದಿದೆ. ಇದೇ ಮಾದರಿಯನ್ನು ಅನುಸರಿಸಿ ಮಹಾರಾಷ್ಟ್ರ, ಹರಿಯಾಣ, ಉತ್ತರ ಪ್ರದೇಶ ಹಾಗೂ ಇತ್ತೀಚೆಗೆ ಬೆಂಗಳೂರು ಸೆಂಟ್ರಲ್‌ ಕ್ಷೇತ್ರದ ಮಹದೇವಪುರ ಮತಕ್ಷೇತ್ರದಲ್ಲಿ ಕೂಡ ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ.

ಆಳಂದ ಮತಕ್ಷೇತ್ರ ದೊಡ್ಡ ಅಕ್ರಮದ ಸಣ್ಣ ಕುರುಹಿರಬಹುದೇ? 2018 ರಲ್ಲಿ ಇದೇ ಕ್ಷೇತ್ರದಲ್ಲಿ ಬಿಜೆಪಿ ಅತ್ಯಂತ ಅಲ್ಪ ಅಂತರದಲ್ಲಿ ಚುನಾವಣೆ ಜಯಿಸಿತ್ತು. 2023ರಲ್ಲಿ ಸುಮಾರು 6,000 ಹೆಸರನ್ನು ಡಿಲೀಟ್‌ ಮಾಡುವ ಪ್ರಯತ್ನ ನಡೆದಿತ್ತು. 2024ರಲ್ಲಿ ಬಿಜೆಪಿ ಮತ್ತದೇ ಪ್ರಯತ್ನಕ್ಕೆ ಕೈಹಾಕಿತ್ತು. ದೇಶಾದ್ಯಂತ ಇಂತಹ ಎಷ್ಟು ಅಕ್ರಮಗಳು ಗಮನಕ್ಕೆ ಬಾರದೆಯೇ ನಡೆದಿರಬಹುದು? ಎಷ್ಟು ಫಲಿತಾಂಶಗಳು ಇದರಿಂದ ಅದಲು ಬದಲಾಗಿರಬಹುದು? ಎಂಬ ಬಗ್ಗೆ ಕೂಡ ಪ್ರಶ್ನೆಗಳು ಸಹಜವಾಗಿ ಮೂಡುತ್ತಿದೆ.

ಸತ್ಯ ಅತ್ಯಂತ ಕಟುವಾಗಿದೆ ಜೊತೆಗೆ ಸರಳವೂ ಆಗಿದೆ. ಬಿಜೆಪಿ ಮತಗಳ್ಳತನದ ಅಕ್ರಮ ಎಸಗುತ್ತದೆ, ಚುನಾವಣಾ ಆಯೋಗವು ಅಗತ್ಯ ಮಾಹಿತಿಯನ್ನು ಒದಗಿಸಲು ನಿರಾಕರಿಸುವ ಮೂಲಕ ತನಿಖೆಗೆ ತಡೆಯೊಡ್ಡುತ್ತದೆ. ದುರಂತವೆಂದರೆ ಪ್ರಜಾಪ್ರಭುತ್ವದ ರಕ್ಷಣೆ ಮಾಡಬೇಕಿದ್ದ ಚುನಾವಣಾ ಆಯೋಗವು ಮತಗಳ್ಳರ ರಕ್ಷಣೆಗೆ ನಿಂತಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಅಗತ್ಯವಿರುವ ಐಪಿ ಅಡ್ರೆಸ್‌, ಬಳಕೆಯಾದ ಡಿವೈಸ್‌ ಗಳು ಹಾಗೂ ಒಟಿಪಿ ಪಡೆದವರ ವಿವರ ಮುಂತಾದ ಮಾಹಿತಿಯನ್ನು ಒಂದು ವಾರದ ಒಳಗಾಗಿ ಸಿಐಡಿ ತನಿಖಾ ಸಂಸ್ಥೆಗೆ ಒದಗಿಸಬೇಕು ಎಂದು ಚುನಾವಣಾ ಆಯೋಗವನ್ನು ಕರ್ನಾಟಕದ ಜನತೆಯ ಪರವಾಗಿ ಆಗ್ರಹಿಸುತ್ತೇನೆ. ಇದನ್ನು ಒದಗಿಸಲು ಚುನಾವಣಾ ಆಯೋಗವು ವಿಫಲವಾದಲ್ಲಿ, ಚುನಾವಣಾ ಅಕ್ರಮಗಳ ಮೂಲಕ ಪ್ರಜಾಪ್ರಭುತ್ವವನ್ನು ದ್ವಂಸಗೈಯ್ಯುತ್ತಿರುವ ದುಷ್ಟರ ರಕ್ಷಣೆಗೆ ಆಯೋಗ ನಿಂತಿದೆ ಎಂಬುದು ಸಾಬೀತಾಗುತ್ತದೆ.

ಇದು ನಾಡಿನ ಪ್ರತಿ ಮತದಾರನ, ಯುವ ಜನರ ಮತದಾನದ ಹಕ್ಕಿನ ಪಾವಿತ್ರ್ಯತೆ ಮತ್ತು ಭವಿಷ್ಯದ ಪ್ರಶ್ನೆ. ಮತಗಳ್ಳತನ ಯಶಸ್ವಿಯಾಗಲು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಪಕ್ಷ ಬಿಡುವುದಿಲ್ಲ. ಪಾರದರ್ಶಕ, ನಿಷ್ಪಕ್ಷಪಾತ ಚುನಾವಣೆ ಪ್ರಕ್ರಿಯೆಯ ಹೊಣೆಗಾರಿಕೆಯನ್ನು ಸಂಬಂಧಪಟ್ಟವರು ವಹಿಸಿಕೊಳ್ಳುವವರೆಗೆ ಮತ್ತು ದೇಶದ ಪ್ರಜಾಪ್ರಭುತ್ವಕ್ಕೆ ರಕ್ಷಣೆ ದೊರೆಯುವವರೆಗೆ ನಾವು ನಮ್ಮ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Cash for query: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಸಂಕಷ್ಟ; ಆರೋಪ ಪಟ್ಟಿ ಸಲ್ಲಿಸಲು ಸಿಬಿಐಗೆ ಲೋಕಪಾಲ ಅನುಮತಿ!

9 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಶಾಲಾ ಶಿಕ್ಷಕ, BJP ನಾಯಕ ಪದ್ಮರಾಜನ್ ಗೆ ಸಾಯೋವರೆಗೂ ಜೈಲು!

ಬಿಹಾರ ಚುನಾವಣೆ ಸೋಲಿನ ಬೆನ್ನಲ್ಲೇ 'ಮಹಾಘಟಬಂಧನ್' ಗೆ ತಿಲಾಂಜಲಿ; ಏಕಾಂಗಿ ಸ್ಪರ್ಧೆಗೆ ಕಾಂಗ್ರೆಸ್ 'ಮಹಾ' ನಿರ್ಧಾರ!

ಬಿಹಾರದಲ್ಲಿ ಟೈಗರ್‌ ಅಬಿ ಜಿಂದಾ ಹೈ (ನೇರ ನೋಟ)

ಬಿಹಾರ ಚುನಾವಣೆ: 3 ಲಕ್ಷ ಮತಗಳ ಏರಿಕೆ ಬಗ್ಗೆ ಕಾಂಗ್ರೆಸ್ ನಿಂದ ಮತ್ತೆ ಕಿರಿಕ್; ಚುನಾವಣಾ ಆಯೋಗ ಹೇಳಿದ್ದೇನು?

SCROLL FOR NEXT