ಮಹತ್ವದ ಬೆಳವಣಿಗೆಯೊಂದರಲ್ಲಿ, ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟಿಸುವುದನ್ನು ವಿರೋಧಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ. ಬಾನು ಮುಷ್ತಾಕ್ ಅವರು ಈ ಹಿಂದೆ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡಿದ್ದು, ಅವರಿಂದ ದಸರಾ ಉದ್ಘಾಟನೆ ಮಾಡಿಸಬಾರದು ಎಂದು ಆಗ್ರಹಿಸಿ ಸುಪ್ರೀಂ ಕೋರ್ಟ್‌ಗೆ ಸರ್ಜಿ ಸಲ್ಲಿಸಲಾಗಿತ್ತು. ಈ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ, ಅರ್ಜಿಯನ್ನು ವಜಾಗೊಳಿಸಿದೆ. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಬಿಪಿ ಸುರೇಶ್, "ಹಿಂದೂಯೇತರ ವ್ಯಕ್ತಿಗಳಿಂದ ನಾಡದೇವತೆಗೆ ಪೂಜೆ ಮಾಡಿಸುವುದು ಸರಿಯಲ್ಲ" ಎಂದು ಪ್ರತಿಪಾದಿಸಿದರು. ಆದರೆ ಪೀಠವು ಈ ವಾದವನ್ನು ಕೋರ್ಟ್ ಒಪ್ಪಿಲ್ಲ ಇದಕ್ಕೂ ಮೊದಲು ಬಾನು ಮುಷ್ತಾಕ್ ದಸರಾ ಉದ್ಘಾಟನೆ ವಿರೋಧಿಸಿ, ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರತಾಪ್ ಸಿಂಹ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತ್ತು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಜಾತಿಗಣತಿ ಸಮೀಕ್ಷೆ ಆರಂಭವಾಗಲು ಕೇವಲ ಎರಡು ದಿನಗಳಷ್ಟೇ ಬಾಕಿ ಇದ್ದು, ಈ ನಡುವಲ್ಲೇ ಸಮೀಕ್ಷೆ ಬಗ್ಗೆ ಸಚಿವರಲ್ಲಿಯೇ ಭಿನ್ನಮತ ವ್ಯಕ್ತವಾಗಿದೆ. ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಬಗ್ಗೆ ಚರ್ಚೆ ನಡೆದಿದಿದ್ದು, ಈ ವೇಳೆ ಸಮೀಕ್ಷಾ ಪಟ್ಟಿಯಲ್ಲಿ 331 ಹೊಸ ಜಾತಿಗಳ ಸೇರ್ಪಡೆಗೊಳಿಸುವುದನ್ನು ಸಚಿವರ ಒಂದು ವರ್ಗ ವಿರೋಧ ವ್ಯಕ್ತಪಡಿಸಿದೆ. ಸಮೀಕ್ಷೆ ಕುರಿತು ಎಲ್ಲಾ ಜಾತಿಗಳಲ್ಲೂ ತೀವ್ರ ಗೊಂದಲವಿದೆ. ಈ ಗೊಂದಲ ಬಗೆಹರಿಸುವವರೆಗೂ ಸಮೀಕೆಗೆ ಮುಂದಾಗಬಾರದು ಎಂದು ಸಚಿವರು ಆಗ್ರಹಿಸಿದ್ದಾರೆ. ಏತನ್ಮಧ್ಯೆ, ಜಾತಿ ಸಮೀಕ್ಷೆಯನ್ನು ಮುಂದೂಡುವುದಿಲ್ಲ, ಬಿಜೆಪಿಯವರು ರಾಜಕೀಯವಾಗಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಗುರುವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ರಾಜಧಾನಿ ಬೆಂಗಳೂರಿನ ಜನಜೀವನ ಅಸ್ತವ್ಯಸ್ತಗೊಂಡಿದ್ದು,ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡು, ಸಂಚಾರ ದಟ್ಟಣೆ ಉಂಟಾಗಿ, ಜನರು ಪರದಾಡುವಂತಾಗಿದೆ. ಬೆಂಗಳೂರು ನಗರದಲ್ಲಿ 66 ಮಿಮೀ ಮಳೆಯಾಗಿರುವುದಾಗಿ ಸ್ವಯಂಚಾಲಿತ ಹವಾಮಾನ ಕೇಂದ್ರ ಮಾಹಿತಿ ನೀಡಿದೆ. ದೊಡ್ಡಬಳ್ಳಾಪುರದಲ್ಲಿ 60 ಮಿ.ಮೀ, ರಾಮನಗರದ ಚಂದೂರಾಯನಹಳ್ಳಿಯಲ್ಲಿ 46 ಮಿ.ಮೀ, ಬೆಂಗಳೂರು ಗ್ರಾಮಾಂತರದ ಹೆಸರಘಟ್ಟದಲ್ಲಿ 43 ಮಿ.ಮೀ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಬೆಂಗಳೂರಿಗೆ ಯೆಲ್ಲೂ ಆಲರ್ಟ್ ನೀಡಿದೆ. ಅಲ್ಲಲ್ಲಿ ಗಂಟೆಗೆ 30-40 ಕಿಮೀ ವೇಗದಲ್ಲಿ ಮಿಂಚು ಮತ್ತು ಬಿರುಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ವಿಜಯಪುರ, ಬೀದರ್, ಕಲಬುರಗಿ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೂ ಯೆಲ್ಲೂ ಆಲರ್ಟ್ ಘೋಷಿಸಲಾಗಿದೆ.
ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಕಾನ್ಸ್ಟೇಬಲ್ಗಳು ಸೇರಿದಂತೆ ಮೂವರು ದಾರುಣವಾಗಿ ಮೃತಪಟ್ಟ ಘಟನೆ ಗದಗ ತಾಲೂಕಿನ ಹರ್ಲಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ನಡೆದಿದೆ. ವೇಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿಯಾಗಿ ಬಳಿಕ ಬಸ್ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಭೀಕರತೆಗೆ ಕಾರಿನ ಬಿಡಿಭಾಗಗಳು ಚಲ್ಲಾಪಿಲ್ಲಿಯಾಗಿವೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂ ಬದಲು ಮತಪತ್ರಗಳ ಬಳಸಲು ಅನುವು ಮಾಡುವ ನಿಯಮ ತಿದ್ದುಪಡಿಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಗೊಂದಲ ಉಂಟಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಮತಪತ್ರ ಬಳಸಲು ಕಾಂಗ್ರೆಸ್ ಸರ್ಕಾರ ಈಗಾಗಲೇ ತೀರ್ಮಾನಿಸಿದೆ. ಆ ನಿಟ್ಟಿನಲ್ಲಿ ನಿಯಮ ತಿದ್ದುಪಡಿಗೆ ಮುಂದಾಗಿದೆ. ಈ ಮಧ್ಯೆ ಸುಗ್ರೀವಾಜ್ಞೆ ತರಲು ಸರ್ಕಾರ ಮುಂದಾಗಿತ್ತು. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯೂ ಆಗಿದೆ. ಆದರೆ, ಸುಗ್ರೀವಾಜ್ಞೆ ಅಗತ್ಯತೆಯ ಬಗ್ಗೆ ಗೊಂದಲಗಳು ಶುರುವಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಕೆ ವಿಚಾರವಾಗಿ ಕಾನೂನು ತಿದ್ದುಪಡಿ ಮಾಡುವ ಅವಶ್ಯಕತೆ ಇದೆಯೋ, ಇಲ್ಲವೋ ಎಂಬ ಅಭಿಪ್ರಾಯ ತಿಳಿಸುವಂತೆ ಕಾನೂನು ತಜ್ಞರಿಗೆ ಸೂಚಿಸಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು ಹೇಳಿದ್ದಾರೆ.