ಕಾರವಾರ: ರೈಲು ಹಳಿ ಮೇಲೆ ಕುಸಿದು ಬಿದ್ದಿದ್ದ ನೌಕಾಪಡೆ ಅಧಿಕಾರಿಯನ್ನು ರಕ್ಷಿಸಿದ ಕಾರವಾರದ ಆಭರಣ ವ್ಯಾಪಾರಿಯನ್ನು ಭಾರತೀಯ ನೌಕಾಪಡೆ ಸನ್ಮಾನಿಸಿದೆ.
ಆಗಸ್ಟ್ 1, 2025 ರಂದು ಮುಂಬೈಗೆ ತೆರಳುತ್ತಿದ್ದ ಸಾಕೇತ್ ಕಶ್ಯಪ್ ಎಂಬ ನೌಕಾಪಡೆಯ ಅಧಿಕಾರಿ ಆಕಸ್ಮಿಕವಾಗಿ ರೈಲಿನಿಂದ ಜಾರಿ ಬಿದ್ದಿದ್ದರು. ಹಳಿ ಮೇಲೆ ಬಿದ್ದು, ತೀವ್ರ ರಕ್ತಸ್ರಾವದಿಂದ ಗಾಯಗೊಂಡಿದ್ದರು. ಚಿಂತಾಜನಕ ಪರಿಸ್ಥಿತಿಯಲ್ಲಿದ್ದ ಅವರನ್ನು ನಾಗಪ್ರಸಾದ್ ರಾಯ್ಕರ್, ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕರೆದೊಯ್ದು ಚಿಕಿತ್ಸೆ ಒದಗಿಸಿದ್ದರು. ತದನಂತರ ನೌಕಾಪಡೆ ಅಧಿಕಾರಿಗಳು ಮಧ್ಯಪ್ರವೇಶಿಸಿ ಅಧಿಕಾರಿಯನ್ನು ಐಎನ್‌ಎಚ್‌ಎಸ್ ಪತಂಜಲಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು.
ಇದಕ್ಕಾಗಿ ರಾಯ್ಕರ್ ಅವರನ್ನು ಕದಂಬ ನೌಕಾನೆಲೆಗೆ ಆಹ್ವಾನಿಸಲಾಗಿತ್ತು. ಸಾಕೇತ್ ಕುಮಾರ್ ನೇತೃತ್ವದ ಯುದ್ಧನೌಕೆ ಐಎನ್‌ಎಸ್ ತಬರ್ ಕಾರವಾರದಲ್ಲಿ ಬಂದಿಳಿಯಿತು. ನಾಗಪ್ರಸಾದ್ ಅವರನ್ನು ಹಡಗಿನಲ್ಲಿದ್ದ ಅಧಿಕಾರಿ ಸನ್ಮಾನಿಸಿದರು. ಈ ವೇಳೆ ಪ್ರಮಾಣಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ನಾನು ನನ್ನ ಸ್ನೇಹಿತನ ಸ್ಥಳದಿಂದ ಮನೆಗೆ ಹಿಂತಿರುಗುತ್ತಿದ್ದಾಗ, ಖಡ್ವಾಡ ಕ್ರಾಸ್ ಬಳಿಯ ರೈಲ್ವೆ ನಿಲ್ದಾಣದಿಂದ ಯಾರೋ ಹಿಂದಿಯಲ್ಲಿ ಮಾತನಾಡುತ್ತಿರುವುದನ್ನು ಕೇಳಿದೆ. ಒಬ್ಬ ವ್ಯಕ್ತಿ ಹಳಿ ಮೇಲೆ ಬಿದ್ದಿದ್ದು, ತೀವ್ರ ರಕ್ತಸ್ರಾವವಾಗಿರುವುದನ್ನು ನೋಡಿದೆ. ಅವರ ಗುರುತು ತಿಳಿದಿರಲಿಲ್ಲ, ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿದ್ದೆ. ನಂತರ ಅವರು ನೌಕಾ ಅಧಿಕಾರಿ ಸಾಕೇತ್ ಕಶ್ಯಪ್ ಎಂದು ತಿಳಿಯಿತು ಎಂದು ನಾಗ ಪ್ರಸಾದ್ ರಾಯ್ಕರ್ ಹೇಳಿದರು.
ಡೆಪ್ಯೂಟಿ ಕಮಿಷನರ್ ಕಚೇರಿಯಲ್ಲಿ ನೌಕಪಡೆ ಅಧಿಕಾರಿಯೊಬ್ಬರಿಂದ ಆಹ್ವಾನ ಬಂದಿತು. ತದನಂತರ ತಾನು ರಕ್ಷಿಸಿದ ವ್ಯಕ್ತಿ ಕಮಾಂಡಿಂಗ್ ಅಧಿಕಾರಿ ಎಂಬುದು ತಿಳಿಯಿತು ಎಂದು ರಾಯ್ಕರ್ ತಿಳಿಸಿದರು.