ದೆಹಲಿ: ರಾಜ್ಯ ಸರಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮೇಲೆ ಯಾರಿಗೂ ಸಂಶಯ ಬೇಡ. ಇದು ಕೇವಲ ಜಾತಿಗಳ ಗಣತಿಯಲ್ಲ, ಸಾಮಾಜಿಕ ನ್ಯಾಯ ಒದಗಿಸುವ ಸಮೀಕ್ಷೆ. ಜನರಿಗೆ ನೆರವಾಗುವ ಸಮೀಕ್ಷೆ. ಇದರ ಬಗ್ಗೆ ಎಲ್ಲಾ ಸಮುದಾಯದವರು ಎಚ್ಚೆತ್ತುಕೊಂಡು, ಇದರ ಉಪಯೋಗ ಪಡೆಯಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ದೆಹಲಿಯ ಕರ್ನಾಟಕ ಭವನದಲ್ಲಿ ಭಾನುವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಾತಿಗಣತಿ ವಿಚಾರವಾಗಿ ಕ್ರೈಸ್ತ ಜಾತಿಗಳನ್ನು ಹಿಂದುಳಿದ ವರ್ಗಗಳ ಆಯೋಗ ಕೈಬಿಡಲು ನಿರ್ಧರಿಸಿದೆ. "ಕಳೆದ ಸಮೀಕ್ಷೆ ನಡೆಸಿ 10 ವರ್ಷ ಕಳೆದಿರುವ ಕಾರಣ, ಮರುಸಮೀಕ್ಷೆ ಮಾಡಲಾಗುತ್ತಿದೆ. ಈ ಬಾರಿ ಮಾಹಿತಿ ನೀಡಲು ಎಲ್ಲಾ ಸಮಾಜದವರಿಗೂ ಸಂಪೂರ್ಣ ಅವಕಾಶ ನೀಡಿದ್ದೇವೆ. ಎಲ್ಲಾ ಸಮಾಜದವರು ಈ ಸಮೀಕ್ಷೆ ವಿಚಾರದಲ್ಲಿ ಜಾಗೃತರಾಗಿ, ತಪ್ಪದೇ ಭಾಗವಹಿಸಬೇಕು" ಎಂದರು.
"ಕರ್ನಾಟಕದ 7 ಕೋಟಿ ಕನ್ನಡಿಗರು, ಪ್ರಪಂಚದ ಯಾವುದೇ ದೇಶದಲ್ಲಿರುವ ಕನ್ನಡಿಗರು ಆನ್ಲೈನ್ ಮೂಲಕ ತಮ್ಮ ಮಾಹಿತಿ ಸಲ್ಲಿಸಬಹುದು. ಜೊತೆಗೆ ನೀವು ಆಕ್ಷೇಪ ಸಲ್ಲಿಸಲು ಅವಕಾಶ ಕಲ್ಪಿಸಿದ್ದೇವೆ. ನಿಮ್ಮ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲೇ ಪಡೆಯುವ ಅವಕಾಶವಿದೆ. ನೀವು ನಿಮ್ಮ ಕುಟುಂಬದವರ ವಿವರ ಬರೆಸಿ ಎಂದು ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷನಾಗಿ ನಾನು ಎಲ್ಲಾ ಸಮಾಜದವರ ಬಳಿ ಮನವಿ ಮಾಡಿಕೊಳ್ಳುತ್ತೇನೆ" ಎಂದು ಹೇಳಿದರು.
"ಎಲ್ಲರಿಗೂ ನ್ಯಾಯ ಒದಗಿಸಿ ಕೊಡಬೇಕು ಎಂದು ನಮ್ಮ ಸರ್ಕಾರ ಈ ತೀರ್ಮಾನ ಮಾಡಿದೆ. ವೀರಶೈವ ಸಮಾಜಕ್ಕೆ ತೊಂದರೆಯಾಗಲಿದೆ ಎಂದು ರಂಭಾಪುರಿ ಶ್ರೀಗಳು ಆತಂಕಪಡುವ ಅಗತ್ಯವಿಲ್ಲ. ನೀವು ನಿಮ್ಮ ಸಮುದಾಯದ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿ. ಅದೇ ರೀತಿ ಎಲ್ಲರೂ ತಮ್ಮ ತಮ್ಮ ಸಮುದಾಯಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು" ಎಂದು ಕರೆ ನೀಡಿದರು.
ಹಿಂದೂ ಜಾತಿಗಳ ಜತೆ ಕ್ರೈಸ್ತ ಸಮುದಾಯದ ಹೆಸರು ಸೇರ್ಪಡೆ ಹಿಂಪಡೆದಿರುವ ಬಗ್ಗೆ ಕೇಳಿದಾಗ, "ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಮುಖ್ಯಮಂತ್ರಿಗಳೇ ಸಭೆಯಲ್ಲಿ ಈ ವಿಚಾರ ಪ್ರಸ್ತಾವನೆ ಮಾಡಿದರು. ಈ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದ ಜೊತೆ ಚರ್ಚೆ ಮಾಡಿ ಗೊಂದಲ ಸರಿಪಡಿಸುವುದಾಗಿ ಅವರು ತಿಳಿಸಿದ್ದಾರೆ. ಈ ಜಾತಿಗಳನ್ನು ಸೇರಿಸಿರುವ ಬಗ್ಗೆ ನೋಡಿದಾಗ ನನಗೂ ಸ್ವಲ್ಪ ಗಾಬರಿಯಾಗಿತ್ತು. ನಾವು ಆಯೋಗದವರನ್ನು ಕರೆಸಿ ಇರುವ ಗೊಂದಲಗಳ ಬಗ್ಗೆ ಗಮನಕ್ಕೆ ತಂದಿದ್ದೇವೆ" ಎಂದು ತಿಳಿಸಿದರು.
ಜಾತಿ ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಶಾಸಕ ಅಶ್ವಥ್ ನಾರಾಯಣ ಅವರ ಆರೋಪದ ಬಗ್ಗೆ ಕೇಳಿದಾಗ, "ಅಶ್ವಥ್ ನಾರಾಯಣ ಅವರಿಗೆ ಕೇವಲ ರಾಜಕಾರಣ ಬೇಕು. ನಮಗೆ ರಾಜಕಾರಣ ಬೇಡ. ನಮಗೆ ಜನರ ಬದುಕು ಮುಖ್ಯ. ಅದಕ್ಕಾಗಿ ನಾವು ಕಾರ್ಯನಿರ್ವಹಿಸುತ್ತೇವೆ. ಅಶ್ವತ್ ನಾರಾಯಣ ಅವರಿಗೂ ನಾವು ಅವಕಾಶ ಕೊಟ್ಟಿದ್ದೇವೆ. ಅವರು ಈ ಬಗ್ಗೆ ಚೆನ್ನಾಗಿ ಪ್ರಚಾರ ಮಾಡಲಿ, ಜನರಲ್ಲಿ ಜಾಗೃತಿ ಮೂಡಿಸಲಿ" ಎಂದರು.
"ಈ ಸಮೀಕ್ಷೆ ಮಾಡುವವರು ಶಿಕ್ಷಕರು. ಯಾವುದೇ ಶಿಕ್ಷಕರು ಮೋಸ ಮಾಡುವುದಿಲ್ಲ. ಸರ್ಕಾರ ದಾಖಲು ಮಾಡಿಕೊಂಡ ಮಾಹಿತಿ ಎಲ್ಲರ ಮೊಬೈಲ್ ಗೆ ರವಾನೆಯಾಗಲಿದೆ. ಮಾಹಿತಿ ಹೆಚ್ಚುಕಮ್ಮಿಯಾಗಿದ್ದಾರೆ, ಸರಿಪಡಿಸಿಕೊಳ್ಳಬಹುದು. ಬೇಕಾದರೆ ಜಯಪ್ರಕಾಶ್ ಹೆಗಡೆ, ಕಾಂತರಾಜ ಆಯೋಗದ ದಾಖಲೆಗಳ ಮಾಹಿತಿಯನ್ನು ನೀಡುತ್ತೇವೆ. ಅದನ್ನೂ ಪರಿಶೀಲಿಸಬಹುದು" ಎಂದು ತಿರುಗೇಟು ನೀಡಿದರು. ಸೋನಿಯಾ ಗಾಂಧಿ ಅವರನ್ನು ಖುಷಿ ಪಡಿಸಲು ಹಿಂದೂ ಜಾತಿಗಳ ಜತೆ ಕ್ರೈಸ್ತ ಧರ್ಮ ಸೃಷ್ಟಿಸಲಾಗಿತ್ತು ಎಂಬ ಆರೋಪದ ಬಗ್ಗೆ ಕೇಳಿದಾಗ, "ಆರ್. ಅಶೋಕ್ ಅವರು ತಮ್ಮ ನಾಯಕರನ್ನು ಮೆಚ್ಚಿಸಲು ಈ ರೀತಿ ಮಾತನಾಡುತ್ತಿದ್ದಾರೆ. ಎಂದರು.
ಒಕ್ಕಲಿಗ ಸ್ವಾಮೀಜಿಗಳ ಹಾಗೂ ಮುಖಂಡರ ಸಭೆಯಲ್ಲಿ ನಿಮ್ಮ ಅಭಿಪ್ರಾಯ ಭಿನ್ನವಾಗಿದೆ ಎಂದು ಕುಮಾರಸ್ವಾಮಿ ಅವರೂ ಹೇಳಿದ್ದಾರೆ ಎಂದು ಕೇಳಿದಾಗ, "ಯಾರು ಎಲ್ಲಿ ಏನು ಮಾತನಾಡಿದರೋ ಗೊತ್ತಿಲ್ಲ. ಯಾರೂ ಸಹ ನನ್ನ ಬಳಿ ಮಾತನಾಡಿಲ್ಲ. ಕೇವಲ ಒಕ್ಕಲಿಗ ಸಮುದಾಯದ ಬಗ್ಗೆ ಮಾತ್ರ ಆಲೋಚನೆ ಮಾಡಬೇಡಿ. ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಿ. ಹಿಂದುಳಿದ ವರ್ಗಗಳ ರಕ್ಷಣೆಗೆ ನಾವುಗಳು ನಿಲ್ಲಬೇಕು ಎಂದು ನಮ್ಮ ಸಮುದಾಯದ ಸಭೆಯಲ್ಲಿ ಹೇಳಿದ್ದೇನೆ" ಎಂದರು. ಕೇವಲ 15 ದಿನಗಳಲ್ಲಿ ಸಮೀಕ್ಷೆ ಮುಗಿಸಲು ಸಾಧ್ಯವೇ? ಸಮೀಕ್ಷೆಯ ದಿನಾಂಕಗಳಿಗೆ ಶಿಕ್ಷಕರ ವಿರೋಧದ ಬಗ್ಗೆ ಕೇಳಿದಾಗ, "ಶಾಲೆಗಳಿಗೆ ದಸರಾ ರಜೆಯಿದೆ. ಇದರ ಬಗ್ಗೆ ಆಯೋಗ ತೀರ್ಮಾನ ಮಾಡುತ್ತದೆ. ಶಿಕ್ಷಕರು ನಿಮ್ಮ (ಮಾಧ್ಯಮ) ಬಳಿ ಬಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆಯೇ? ಇದುವರೆಗೂ ನಮ್ಮ ಮುಂದೆ ಯಾರೂ ಬಂದಿಲ್ಲ. ಯಾರಾದರೂ ಬರೆದು ಕೊಟ್ಟಿದ್ದಾರೆಯೇ? ಇದು ನಿಮ್ಮ ಅಭಿಪ್ರಾಯ" ಎಂದರು.