ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಾರಂಭಿಸfo ಹಸಿರು ಬೆಂಗಳೂರು ಕಾರ್ಯಕ್ರಮವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ಹೊಸ ಪಾಲಿಕೆಗಳು ಮುಂದುವರೆಸಲು ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.
2025 ರ ಬಜೆಟ್‌ನಲ್ಲಿ ಗ್ರೀನ್ ಬೆಂಗಳೂರು ಕಾರ್ಯಕ್ರಮದ ಅಡಿಯಲ್ಲಿ ನಗರದಲ್ಲಿ 5 ಲಕ್ಷ ಸಸಿಗಳನ್ನು ನೆಡುವ ಗುರಿಯನ್ನು ನಿಗದಿಪಡಿಸಲಾಗಿತ್ತು. ಇದಕ್ಕಾಗಿ ಬಿಬಿಎಂಪಿಯ ಅರಣ್ಯ ವಿಭಾಗಕ್ಕೆ ಬಜೆಟ್ ಹಂಚಿಕೆ 51.69 ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು.
ಕಾರ್ಯಕ್ರಮದ ಅಡಿಯಲ್ಲಿ ಈವರೆಗೂ 84,100 ಸಸಿಗಳನ್ನು ನೆಡಲಾಗಿದೆ. ಆದರೆ, ಬಿಬಿಎಂಪಿ ಯುಗ ಅಂತ್ಯಗೊಂಡಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ತವಕ್ಕೆ ಬಂದ ಹಿನ್ನೆಲೆಯಲ್ಲಿ ಬಿಬಿಎಂಪಿ ಕೈಗೆತ್ತಿಕ್ಕೊಂಡಿದ್ದ ಕಾರ್ಯಕ್ರಮಗಳ ಕುರಿತು ಗೊಂದಲಗಳು ಶುರುವಾಗಿದೆ.
ಇದೀಗ ಉಪ ಮುಖ್ಯಮಂತ್ರಿಗಳು ಆರಂಭಿಸಿದ್ದ ಗ್ರೀನ್ ಬೆಂಗಳೂರು ಕಾರ್ಯಕ್ರಮವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದುವರೆಸಲು ನಿರ್ಧರಿಸಿದೆ. ಆದರೆ, ಯಾವ ನಿಗಮವು ಎಷ್ಟು ಸಸಿಗಳನ್ನು ನೆಡಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ತಿಳಿದುಬಂದಿದೆ.
ಸ್ಥಳದ ಲಭ್ಯತೆ ಮತ್ತು ಬೇಡಿಕೆಯನ್ನು ಅವಲಂಬಿಸಿ ಸಸಿಗಳ ಸಂಖ್ಯೆಗಳನ್ನು ವಿಂಗಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿಗೆ ಲಭಿಸಿರುವ ಗಾರ್ಡನ್ ಸಿಟಿ ಖ್ಯಾತಿಯನ್ನು ಕಾಪಾಡಿಕೊಳ್ಳಲು 2021 ರಿಂದ ನಗರದಾದ್ಯಂತ 8.1 ಲಕ್ಷ ಸಸಿಗಳನ್ನು ನೆಡಲಾಗಿದೆ. ಈ ಅವಧಿಯಲ್ಲಿ ಅಭಿವೃದ್ಧಿಗಾಗಿ ಒಟ್ಟು 19,313 ಮರಗಳನ್ನು ಕತ್ತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಹೊಸದಾಗಿ ರಚನೆಗೊಂಡಿರುವ 5 ಪಾಲಿಕೆಗಳಿಗೆ ಗಿಡಗಳ ನೆಡುವ ಜವಾಬ್ದಾರಿ ನೀಡಲಾಗಿದೆ. ಕಾರ್ಯಕ್ರಮದ ಅಡಿಯಲ್ಲಿ ನಗರದಲ್ಲಿ ಇನ್ನೂ 4,15,900 ಸಸಿಗಳನ್ನು ನೆಡಬೇಕಾಗಿದೆ. ಹೀಗಾಗಿ ಪ್ರದೇಶದ ಲಭ್ಯತೆ, ಅಗತ್ಯ ಮತ್ತು ಬೇಡಿಕೆಯನ್ನು ನಿರ್ಣಯಿಸಿದ ನಂತರ, ಯಾವ ನಿಗಮ ಎಷ್ಟು ಸಸಿಗಳನ್ನು ನೆಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ನಂತರ ಆಯಾ ಪಾಲಿಕೆಗೆ ಟೆಂಡರ್‌ಗಳನ್ನು ಕರೆಯಲು ಮತ್ತು ಕಾಮಗಾರಿ ಆದೇಶಗಳನ್ನು ನೀಡಲು ಅಧಿಕಾರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಜಿಬಿಎಯ ಅರಣ್ಯ ಕೋಶವು ಐದು ನಿಗಮಗಳಿಗೆ ಹೆಚ್ಚಿನ ಸಿಬ್ಬಂದಿಗಳ ನಿಯೋಜನೆ ಕೋರಿ ರಾಜ್ಯ ಅರಣ್ಯ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ, ಜಿಬಿಎಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೇರಿದಂತೆ, 17 ಸಿಬ್ಬಂದಿಗಳಿದ್ದು, ಅಗತ್ಯವಿರುವ ಸಂಖ್ಯೆ 55 ಆಗಿದೆ.