ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲೂ ಟಿಕೆಟ್ನ ಬೆಲೆ 200 ರೂಪಾಯಿಗೆ ನಿಗದಿಪಡಿಸಿ ಸಿದ್ದರಾಮಯ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಸರ್ಕಾರದ ದರ ನಿಗದಿ ಪ್ರಶ್ನಿಸಿ ಮಲ್ಟಿಪ್ಲೆಕ್ಸ್ ಹಾಗೂ ಹೊಂಬಾಳೆ ಫಿಲ್ಮ್ಸ್ ಹೈಕೋರ್ಟ್ ಮೊರೆ ಹೋಗಿತ್ತು. ಪರಭಾಷಾ ಸಿನಿಮಾಗಳ ಹಾವಳಿ, ಮಿತಿ ಮೀರಿದ ಟಿಕೆಟ್ ದರದ ವಿರುದ್ಧ ಇಡೀ ಇಂಡಸ್ಟ್ರಿ ಏಕರೂಪ ಟಿಕೆಟ್ ದರ ನಿಗದಿ ಮಾಡಬೇಕು ಎಂದು ದಶಕಗಳಿಂದ ಹೋರಾಟ ನಡೆಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಏಕರೂಪದ ಟಿಕೆಟ್ ದರ ನಿಗದಿ ಮಾಡಿತ್ತು. ಇದಕ್ಕೆ ತೀವ್ರ ವಿರೋಧವೂ ವ್ಯಕ್ತವಾಗಿತ್ತು. ಬಿಗ್ ಬಜೆಟ್ ಸಿನಿಮಾಗಳಿಗೆ ಇದರಿಂದ ತೊಂದರೆ ಆಗುತ್ತದೆ ಎಂಬ ಚರ್ಚೆ ಶುರುವಾಗಿತ್ತು. ಹೊಂಬಾಳೆ ಫಿಲ್ಮ್ಸ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ರವಿ ಹೊಸಮನಿ ನೇತೃತ್ವದ ಪೀಠವು, ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದ್ದು ವಿಚಾರಣೆಯನ್ನ ಮುಂದೂಡಿದೆ. ಹೀಗಾಗಿ ಅ.2ರಂದು ಬಿಡುಗಡೆಯಾಗಲಿದ್ದು ಬಿಗ್ ಬಜೆಟ್ ಚಿತ್ರ ಕಾಂತರಕ್ಕೆ ಇದ್ದ ಆತಂಕ ನಿವಾರಣೆ ಆದಂತಾಗಿದೆ.
ದಸರಾ ಉತ್ಸವದ ಅಂಗವಾಗಿ ವೈಮಾನಿಕ ಪ್ರದರ್ಶನದೊಂದಿಗೆ ಮೈಸೂರಿನ ಜನರನ್ನು ರಂಜಿಸಲು ಭಾರತೀಯ ವಾಯುಪಡೆ ಸಜ್ಜಾಗಿದೆ. ಮೈಸೂರಿನ ಬನ್ನಿಮಂಟಪ ಮೈದಾನದಲ್ಲಿ ಸಾರಂಗ್ ಹೆಲಿಕಾಪ್ಟರ್ ಗಳು ಪ್ರದರ್ಶನ ನೀಡಲಿವೆ. ಸೆಪ್ಟೆಂಬರ್ 25ರಂದು ಪೂರ್ಣ ಪ್ರಮಾಣದ ಪೂರ್ವಾಭ್ಯಾಸ ನಡೆಯಲಿದ್ದು ಸೆಪ್ಟೆಂಬರ್ 27ರಂದು ಮುಖ್ಯ ಪ್ರದರ್ಶನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಲಕ್ಷಿಕಾಂತ್ ರೆಡ್ಡಿ ತಿಳಿಸಿದ್ದಾರೆ. ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಚಾಲನೆಗೆ ಬಾನು ಮುಷ್ತಾಕ್ ಆಯ್ಕೆ ಮಾಡಿದ್ದಕ್ಕೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಎಲ್ಲಾ ಅಡೆತಡೆಗಳು ಮೀರಿ ನಿನ್ನೆ ದಸರಾ ಉತ್ಸವಕ್ಕೆ ವಿದ್ಯುಕ್ತ ಚಾಲನೆಯೂ ಸಿಕ್ಕಿತ್ತು. ಆದರೆ ಇದೀಗ ಚಾಮುಂಡಿ ಬೆಟ್ಟದಲ್ಲಿ ಸೂತಕದ ಛಾಯೆ ಆವರಿಸಿದೆ. ಚಾಮುಂಡೇಶ್ವರಿ ದೇಗುಲದ ಅರ್ಚಕ ರಾಜು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅರ್ಚಕನ ನಿಧನದಿಂದಾಗಿ ಇಂದಿನ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದಿಲ್ಲ. ಆದರೆ ನಾಳೆಯಿಂದ ಎಂದಿನಂತೆ ನವರಾತ್ರಿ ಪೂಜೆಗಳು ನಡೆಯಲಿವೆ ಎಂದು ದೇಗುಲದ ಮೂಲಗಳು ತಿಳಿಸಿವೆ.
ಬೆಂಗಳೂರಿನ ಹೊರ ವರ್ತುಲ ರಸ್ತೆ(ORR) ಕಾರಿಡಾರ್‌ನಲ್ಲಿ, ವಿಶೇಷವಾಗಿ ಇಬ್ಲೂರು ಜಂಕ್ಷನ್ ಬಳಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ನಿಮ್ಮ ಕ್ಯಾಂಪಸ್ ಮೂಲಕ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಪ್ರೋ ಸಂಸ್ಥಾಪಕ-ಅಧ್ಯಕ್ಷ ಅಜೀಂ ಪ್ರೇಮ್‌ಜಿ ಅವರಿಗೆ ಪತ್ರ ಬರೆದು ಕೇಳಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಸೆಪ್ಟೆಂಬರ್ 19 ರಂದು ಬರೆದ ಪತ್ರದಲ್ಲಿ, ಬೆಂಗಳೂರು ಪ್ರಸ್ತುತ ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಪೀಕ್ ಅವರ್ ಸಂಚಾರ ದಟ್ಟಣೆಯು ಒಂದಾಗಿದ್ದು, ಇದು ಚಲನಶೀಲತೆ, ಉತ್ಪಾದಕತೆ ಮತ್ತು ನಗರ ಜೀವನದ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ, ಪರಸ್ಪರ ಒಪ್ಪಿದ ನಿಯಮಗಳು ಮತ್ತು ಅಗತ್ಯ ಭದ್ರತಾ ಪರಿಗಣನೆಗಳಿಗೆ ಒಳಪಟ್ಟು ವಿಪ್ರೋ ಕ್ಯಾಂಪಸ್ ಮೂಲಕ ಸೀಮಿತ ವಾಹನ ಸಂಚಾರಕ್ಕೆ ಅವಕಾಶ ನೀಡಿದರೆ ಸುಮಾರು ಶೇ.30 ರಷ್ಟು ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಎಂದು ಸೂಚಿಸುತ್ತದೆ" ಎಂದು ಸಿಎಂ ವಿವರಿಸಿದ್ದಾರೆ.
ಧರ್ಮಸ್ಥಳದ ಬುರುಡೆ ಪ್ರಕರಣ ಹಾಗೂ ಸೌಜನ್ಯ ಪ್ರಕರಣದಲ್ಲಿ ಹೋರಾಟ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಮಂಗಳೂರಿನಿಂದ ಗಡಿಪಾರು ಮಾಡಿ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದಾರೆ. ಮಹೇಶ್ ತಿಮರೋಡಿ ವಿರುದ್ಧ ಸುಮಾರು 32 ವಿವಿಧ ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಮಹೇಶ್ ಶೆಟ್ಟಿ ತಿಮರೋಡಿಯನ್ನು ಗಡಿಪಾರು ಮಾಡುವಂತೆ ಆಗ್ರಹಗಳು ವ್ಯಕ್ತವಾಗಿದ್ದವು. ಇದೀಗ ಮಂಗಳೂರಿನಿಂದ ರಾಯಚೂರಿನ ಮಾನ್ವಿ ತಾಲೂಕಿಗೆ ಮಹೇಶ್ ಶೆಟ್ಟಿ ತಿಮರೋಡಿಯನ್ನು ಒಂದು ವರ್ಷಗಳ ಕಾಲ ಗಡಿಪಾರು ಮಾಡಲಾಗಿದೆ.
ನೆರೆಯ ತೆಲಂಗಾಣಕ್ಕೆ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಟ್ರಕ್‌ಗೆ ಐನಾಪುರ ಪಟ್ಟಣದಲ್ಲಿ ಕಳೆದ ರಾತ್ರಿ ಸ್ಥಳೀಯರು ಬೆಂಕಿ ಹಚ್ಚಿದ್ದಾರೆ. ರಾಯ್‌ಬಾಗ್ ತಾಲ್ಲೂಕಿನ ಕುಡಚಿ ಪಟ್ಟಣದಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಟ್ರಕ್ ಅನ್ನು ಕಾಗವಾಡ ತಾಲ್ಲೂಕಿನ ಸಿದ್ದೇಶ್ವರ ದೇವಸ್ಥಾನದ ಬಳಿ ತಡೆದು ನಿಲ್ಲಿಸಿದ ಸ್ಥಳಿಯರು ಪರಿಶೀಲನೆ ನಡೆಸಿದಾಗ ವಾಹನದೊಳಗೆ ಗೋಮಾಂಸ ಇರುವುದು ಪತ್ತೆಯಾಗಿದೆ. ಇದರಿಂದ ಆಕ್ರೋಶಗೊಂಡು ಟ್ರಕ್‌ಗೆ ಬೆಂಕಿ ಹಚ್ಚಿದ್ದಾರೆ. ವಾಹನವು ಸಂಪೂರ್ಣವಾಗಿ ಸುಟ್ಟುಹೋಗಿದ್ದು ಗೋಹತ್ಯೆ ನಿಷೇಧ ಕಾಯ್ದೆ ಮತ್ತು ದರೋಡೆ ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಲಾಗಿದೆ.