ಹೈಕೋರ್ಟ್  
ರಾಜ್ಯ

ಜಾತಿ ಗಣತಿಗೆ ತಡೆ ನೀಡಲು ಹೈಕೋರ್ಟ್ ನಕಾರ; ರಾಜ್ಯ ಸರ್ಕಾರಕ್ಕೆ ಬಿಗ್ ರಿಲೀಫ್

ಆದರೆ ರಾಜ್ಯ ಸರ್ಕಾರದ ಜಾತಿಗಣತಿ ಸಮೀಕ್ಷೆ ನಡೆಸಲು ಕೆಲವು ಷರತ್ತುಗಳನ್ನು ಹೈಕೋರ್ಟ್ ವಿಧಿಸಿದ್ದು, ದತ್ತಾಂಶವನ್ನು ರಾಜ್ಯ ಸರ್ಕಾರ ಸೇರಿ ಯಾರಿಗೂ ಬಹಿರಂಗಪಡಿಸಬಾರದು ಎಂದು ಸೂಚಿಸಿದೆ.

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ(ಜಾತಿ ಗಣತಿ)ಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ಗುರುವಾರ ನಿರಾಕರಿಸಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಜಾತಿ ಗಣತಿಗೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರನ್ನೊಳಗೊಂಡ ವಿಭಾಗೀಯ ಪೀಠ, ಎರಡು ದಿನ ವಿವರವಾದ ವಾದಗಳನ್ನು ಆಲಿಸಿತು. ಅಂತಿಮವಾಗಿ ಇಂದು ಜಾತಿ ಗಣತಿಗೆ ತಡೆ ನೀಡಲು ನಿರಾಕರಿಸಿ ಮಧ್ಯಂತರ ಆದೇಶ ಹೊರಡಿಸಿದೆ.

ಆದರೆ ರಾಜ್ಯ ಸರ್ಕಾರದ ಜಾತಿಗಣತಿ ಸಮೀಕ್ಷೆ ನಡೆಸಲು ಕೆಲವು ಷರತ್ತುಗಳನ್ನು ಹೈಕೋರ್ಟ್ ವಿಧಿಸಿದ್ದು, ದತ್ತಾಂಶವನ್ನು ರಾಜ್ಯ ಸರ್ಕಾರ ಸೇರಿ ಯಾರಿಗೂ ಬಹಿರಂಗಪಡಿಸಬಾರದು. ದತ್ತಾಂಶದ ಗೌಪ್ಯತೆಯನ್ನು ಹಿಂದುಳಿದ ವರ್ಗಗಳ ಆಯೋಗ ರಕ್ಷಿಸಬೇಕು ಎಂದು ಸೂಚಿಸಿದೆ.

ಜನರು ಸ್ವಯಂಪ್ರೇರಣೆಯಿಂದ ಮಾಹಿತಿ ನೀಡಿದರಷ್ಟೇ ಪಡೆಯಬೇಕು. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಮಾಹಿತಿ ನೀಡುವಂತೆ ಯಾವುದೇ ಒತ್ತಡ ಹಾಕಬಾರದು ಎಂದು ಹೈಕೋರ್ಟ್ ಮಹತ್ವದ ಷರತ್ತು ವಿಧಿಸಿ, ವಿಚಾರಣೆಯನ್ನು ಡಿಸೆಂಬರ್ ಎರಡನೇ ವಾರಕ್ಕೆ ಮುಂದೂಡಿದೆ.

ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಈ ಅರ್ಜಿಗಳು ಯಾವುದೇ ಸಾಂವಿಧಾನಿಕ ನಿಬಂಧನೆಗಳನ್ನು ಅಥವಾ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ, 1995 ರ ನಿರ್ದಿಷ್ಟ ವಿಭಾಗಗಳನ್ನು ಗುರಿಯಾಗಿಸಿಕೊಂಡಿಲ್ಲ. ಆದರೆ ವಾಸ್ತವವಾಗಿ ಸರ್ಕಾರ ಅಧಿಕಾರ ಚಲಾಯಿಸುವುದನ್ನು ತಡೆಯಲು ಪ್ರಯತ್ನಿಸುತ್ತಿವೆ ಎಂದು ಹೇಳಿದರು.

ಅರ್ಜಿದಾರರು ಎತ್ತಿರುವ ಆಕ್ಷೇಪಣೆಗಳು, ಸಮೀಕ್ಷೆಯು "ಅವೈಜ್ಞಾನಿಕ" ಎಂಬ ಸಾಮಾನ್ಯ ಆರೋಪಗಳಾಗಿವೆ. ಸಮೀಕ್ಷೆಯ ವರದಿಯನ್ನು ಸಾರ್ವಜನಿಕಗೊಳಿಸಿದ ನಂತರ ಮಾತ್ರ ಇದನ್ನು ಪರಿಶೀಲಿಸಬಹುದು ಎಂದು ಅವರು ಸಮರ್ಥಿಸಿಕೊಂಡರು.

ರಾಜ್ಯ ಸರ್ಕಾರಗಳು ಕಲ್ಯಾಣ ಯೋಜನೆಗಳಿಗೆ ದತ್ತಾಂಶ ಸಂಗ್ರಹಿಸುವ ಅಧಿಕಾರ ಹೊಂದಿವೆ ಎಂದು ಪ್ರತಿಪಾದಿಸಲು ಸುಪ್ರೀಂ ಕೋರ್ಟ್‌ನ ಪುಟ್ಟಸ್ವಾಮಿ ತೀರ್ಪನ್ನು ಸಹ ಸಿಂಘ್ವಿ ಉಲ್ಲೇಖಿಸಿದರು. ಆ ಮಾಹಿತಿಯನ್ನು ಖಾಸಗಿ ಸಂಸ್ಥೆಗಳೊಂದಿಗೆ ಹಂಚಿಕೊಂಡರೆ ಮಾತ್ರ "ಹಕ್ಕಿನ ಉಲ್ಲಂಘನೆ"ಯಾಗುತ್ತದೆ ಎಂದು ಒತ್ತಿ ಹೇಳಿದರು.

ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್, ಸಾಂವಿಧಾನಿಕ ಚೌಕಟ್ಟಿನಲ್ಲಿ ಕೇಂದ್ರ ಸರ್ಕಾರ 2027ರಲ್ಲಿ ಜನಗಣತಿ ಆರಂಭಿಸಲಿದೆ. ಜನಗಣತಿ ಜೊತೆಗೆ ಜಾತಿ ಗಣತಿಯನ್ನು ನಡೆಸಲಾಗುವುದು ಮತ್ತು ಇದು ಮಾತ್ರ ಜನಸಂಖ್ಯಾ ದತ್ತಾಂಶದ ಅಧಿಕೃತ ಮೂಲವೆಂದು ಪರಿಗಣಿಸಲಾಗುತ್ತದೆ ಎಂದು ವಾದಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

India-Pakistan ಯುದ್ಧವನ್ನು ನಾನು ತಡೆಯದೇ ಹೋಗಿದ್ದರೆ 3.5 ಕೋಟಿ ಜನರು ಸಾಯುತ್ತಿದ್ದರು: ಡೊನಾಲ್ಡ್ ಟ್ರಂಪ್

ಪ್ರಧಾನಿ ಮೋದಿ ಎರಡು ದಿನಗಳ ಇಸ್ರೇಲ್‌ ಪ್ರವಾಸ ಆರಂಭ; ಸಂಸತ್ತು ನೆಸ್ಸೆಟ್ ಭಾಷಣ ಮಾಡುವ ಮೊದಲ ಭಾರತ ಪ್ರಧಾನಿ-Video

Epstein ties ಆರೋಪದ ಕುರಿತು ಮೌನ ಮುರಿದ ಬಿಲ್ ಗೇಟ್ಸ್; ಉದ್ಯಮಿ ಹೇಳಿದ್ದೇನು?

ಹಾರ್ನ್ ಮಾಡುವ ವಿಚಾರಕ್ಕೆ ಗಲಾಟೆ: 65ರ ವೃದ್ಧನ ಮೇಲೆ ಮನಸೋ ಇಚ್ಛೆ ಹಲ್ಲೆ, ರೌಡಿಶೀಟ್ ಗೆ ಪೊಲೀಸರ ಸಿದ್ಧತೆ? Video

Ranji Trophy final: ಕರ್ನಾಟಕದ ಕೆವಿ ಅನೀಶ್‌ಗೆ ಡಿಚ್ಚಿ ಹೊಡೆದ ಜಮ್ಮು ಮತ್ತು ಕಾಶ್ಮೀರದ ನಾಯಕ, Video

SCROLL FOR NEXT