ಬೆಂಗಳೂರು: ಅವಧಿ ಮುಗಿದಿರೋ ಮದ್ಯದ ಅಂಗಡಿಗಳನ್ನ ಹರಾಜು ಮೂಲಕ ಹಂಚಿಕೆ ಮಾಡುವ ಪ್ರಕ್ರಿಯೆ ಶುರುವಾಗಿದೆ. ಕರಡು ನಿಯಮ ಬಿಡುಗಡೆ ಮಾಡಲಾಗಿದ್ದು, ಶೀಘ್ರದಲ್ಲೇ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಾಜು ಪ್ರಕ್ರಿಯೆಗೆ ತಯಾರಿ ಆಗುತ್ತಿದೆ. ಹರಾಜು ಪ್ರಕ್ರಿಯೆಯಲ್ಲಿ ಮೀಸಲಾತಿ ಕೊಡಬೇಕು ಎಂದು ಅಂದುಕೊಳ್ಳಲಾಗಿದೆ. ಈಗಾಗಲೇ ಹರಾಜು ಪ್ರಕ್ರಿಯೆಯ ಕರಡು ನಿಯಮ ಸಿದ್ಧವಾಗಿದ್ದು, ಸಹಿ ಕೂಡಾ ಆಗಿದೆ. ಆದಷ್ಟೂ ಬೇಗ ಹರಾಜು ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದಿದ್ದಾರೆ.
ಸಾಮಾನ್ಯವಾಗಿ ಹರಾಜು ಹಾಕಬೇಕಾ? ಮೀಸಲಾತಿ ಕೊಡಬೇಕಾ ಅಂತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ನಾಳೆ ಚರ್ಚೆ ಮಾಡ್ತೀನಿ. ಹರಾಜು ಪ್ರಕ್ರಿಯೆಯಿಂದ 2 ಸಾವಿರ ಕೋಟಿ ರೂ. ಲಾಭ ಬರಬಹುದು ಅಂತ ನಿರೀಕ್ಷೆ ಇದೆ ಎಂದು ಸಚಿವರು ತಿಳಿಸಿದರು.
ಮೀಸಲಾತಿ ಕೊಟ್ಟರೆ ನೆರವಾಗುತ್ತದೆ ಅಂತ ಚರ್ಚೆ ನಡೆಯುತ್ತಿದೆ. ಅಂತಿಮವಾಗಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಹೊಸ ಲೈಸೆನ್ಸ್ ಕೊಡಲ್ಲ. ಈಗ ಯಾವುದು ಇದೆಯೋ ಅದಕ್ಕೆ ಮಾತ್ರ ಹರಾಜು ಮೂಲಕ ಲೈಸೆನ್ಸ್ ಕೊಡ್ತೀವಿ ಎಂದು ಸ್ಪಷ್ಟಪಡಿಸಿದ್ದಾರೆ.