ಉಡುಪಿ: ಅಕ್ಟೋಬರ್ ನಿಂದ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಶುಕ್ರವಾರ ಹೇಳಿದರು.
ಉಡುಪಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ ಫಲಾನುಭವಿಗಳ ಇತ್ತೀಚಿನ ಸಮೀಕ್ಷೆಯ ವೇಳೆ 7.70 ಲಕ್ಷ ಪಡಿತರ ಚೀಟಿಗಳನ್ನು ಅನರ್ಹರೆಂದು ಗುರುತಿಸಲಾಗಿದೆ. ಕರ್ನಾಟಕದಲ್ಲಿ ಈ 7.70 ಲಕ್ಷ ಪಡಿತರ ಚೀಟಿದಾರರನ್ನು ಬಿಪಿಎಲ್ ವರ್ಗದಿಂದ ಎಪಿಎಲ್‌ಗೆ ಬದಲಾಯಿಸಲಾಗುತ್ತದೆ ಎಂದು ಹೇಳಿದರು.
ಹಿಂದಿನ ಸರ್ಕಾರಗಳು ಯಾವುದೇ ಪರಿಶೀಲನೆ ಇಲ್ಲದೆ ಜನರಿಗೆ ಬಿಪಿಎಲ್ ಕಾರ್ಡ್ ಗಳನ್ನು ನೀಡುತ್ತಲೇ ಇದ್ದವು. ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ರಾಜ್ಯಗಳು ಶೇ.50ಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ್ ಗಳನ್ನು ಹೊಂದಿಲ್ಲ. ಆದರೆ, ನಮ್ಮ ರಾಜ್ಯ ಶೇ.75ಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ್ ಗಳನ್ನು ಹೊಂದಿದೆ. ಅಭಿವೃದ್ಧಿ ಹೊಂದಿದ ರಾಜ್ಯವಾಗಿದ್ದರೂ ಕರ್ನಾಟಕವು 1.28 ಕೋಟಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ದಾರರನ್ನು ಹೊಂದಿದೆ.
ಹೀಗಾಗಿಯೇ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆ ನಡೆಯುತ್ತಿದೆ. ಪಡಿತರ ಚೀಟಿಗಳನ್ನು ಬಿಪಿಎಲ್ ನಿಂದ ಎಪಿಎಲ್ ಗೆ ತಪ್ಪಾಗಿ ಬದಲಾಯಿಸಿದ್ದರೆ, ಅಂತಹ ಫಲಾನುಭವಿಗಳು ಬಿಪಿಎಲ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಬಹುದು. ಅವರಿಗೆ ಒಂದು ದಿನದೊಳಗೆ ಆಹಾರ ಧಾನ್ಯಗಳನ್ನು ಪೂರೈಸಲಾಗುವುದು. ಈ ಪರಿಷ್ಕರಣೆ ಕಾರ್ಯ ಪೂರ್ಣಗೊಂಡ ಬಳಿಕೃ ಪಡಿತರ ಚೀಟಿಗಳಿಗೆ ಹೊಸ ಅರ್ಜಿಗಳಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.