ಬೆಂಗಳೂರು: ದುಬೈನಲ್ಲಿ ನಡೆದ ಏಷ್ಯಾ ಕಪ್ 2025 ಟೂರ್ನಿಯ ಹೈವೋಲ್ಟೋಜ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಜಯ ಸಾಧಿಸಿ, ‘ಏಷ್ಯಾ’ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತ ತಂಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಸೇರಿ ಹಲವು ಗಣ್ಯರು ಅಭಿನಂದನೆ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಏಷ್ಯಾಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯಲ್ಲಿ ಅಜೇಯರಾಗುಳಿದು, ಮತ್ತೊಮ್ಮೆ ಪಾಕಿಸ್ತಾನವನ್ನು ಬಗ್ಗುಬಡಿದು ಪ್ರಶಸ್ತಿ ಮುಡಿಗೇರಿಸಿಕೊಂಡ ನಮ್ಮವರ ಆಟ ಬಹುಕಾಲ ನೆನಪಿನಲ್ಲಿ ಉಳಿಯುವಂತದ್ದು ಎಂದು ಹೇಳಿದ್ದಾರೆ.
ಒತ್ತಡದ ಸಮಯದಲ್ಲಿ ಸಂಯಮದ ಆಟ ಆಡಿದ ತಿಲಕ್ ವರ್ಮಾ, ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಕಡಿಮೆ ಮೊತ್ತಕ್ಕೆ ಎದುರಾಳಿಗಳನ್ನು ಕಟ್ಟಿಹಾಕಿದ ಕುಲ್‌ದೀಪ್ ಯಾದವ್ ಮತ್ತು ನಿರ್ಣಾಯಕ ಪಂದ್ಯದಲ್ಲಿ ತಂಡ ತೋರಿದ ಸಂಘಟಿತ ಹೋರಾಟದಿಂದ ಭಾರತ ಗೆದ್ದಿದೆ. ಯುವ ಆಟಗಾರರೇ ತುಂಬಿದ್ದ ಭಾರತೀಯ ತಂಡ ದೊಡ್ಡ ಸಾಧನೆ ಮಾಡಿ, ಇತಿಹಾಸ ಸೃಷ್ಟಿಸಿದೆ ಎಂದು ತಿಳಿಸಿದ್ದಾರೆ.
ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಪೋಸ್ಟ್ ಮಾಡಿ, ಫೈನಲ್‌ನಲ್ಲಿ ಏಷ್ಯಾ ಕಪ್ ಟ್ರೋಫಿಯನ್ನು ಗೆದ್ದ ಭಾರತ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಇದು ನವರಾತ್ರಿಗೆ ಒಂದು ಪರಿಪೂರ್ಣ ಉಡುಗೊರೆ - 9ನೇ ಏಷ್ಯಾ ಕಪ್ ಮನೆಗೆ ಬಂದಿದೆ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಪೋಸ್ಟ್ ಮಾಡಿ, 2025ರ ಏಷ್ಯಾ ಕಪ್ ಗೆದ್ದ ಟೀಮ್ ಇಂಡಿಯಾಗೆ ಹೃದಯಪೂರ್ವಕ ಅಭಿನಂದನೆಗಳು. ಈ ವಿಜಯವು ತಂಡದ ದೃಢತೆ, ಏಕತೆ ಮತ್ತು ಅದ್ಭುತ ಕ್ರೀಡಾಸ್ಫೂರ್ತಿಗೆ ನಿದರ್ಶನ. ಪ್ರತೀ ಭಾರತೀಯನಿಗೂ ಹೆಮ್ಮೆಯ ಕ್ಷಣ ಇದಾಗಿದೆ. ಈ ಗೆಲುವು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಉಜ್ವಲ ಅಧ್ಯಾಯವಾಗಿದೆ. ಜೈ ಹಿಂದ್ ಎಂದು ತಿಳಿಸಿದ್ದಾರೆ.