ಬಾಗಲಕೋಟೆ: ಹಣಕಾಸಿನ ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಆರ್ಥಿಕ ಪರಿಸ್ಥಿತಿಯ ನೈಜ ಚಿತ್ರಣವನ್ನು ಜನರಿಗೆ ತಿಳಿಸುವ ಪುಣ್ಯದ ಕೆಲಸ ಮಾಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದು ಮೂರು ವರ್ಷಗಳಾಗಿವೆ. ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುತ್ತೇವೆ ಎoದು ಭರವಸೆ ನೀಡಿದ್ದೀರಿ. ಅದು ಮರೆತು ಹೋಯಿತೇ? ಎಂದು ಕೇಳಿದರು.
2 ಲಕ್ಷ 86 ಸಾವಿರಕ್ಕೂ ಹೆಚ್ಚು ಹುದ್ದೆಗಳು ನೇಮಕಾತಿ ಮಾಡದೇ ನಾಡಿನ ಯುವಜನತೆ ಬೀದಿಗಿಳಿದು ಹೋರಾಟ ಮಾಡುವ ದುಸ್ಥಿತಿಗೆ ತಾವು ತಂದಿದ್ದೀರಿ. ಯುವಜನತೆ ತಮ್ಮ ಬಳಿ ಅಹವಾಲು ಮಂಡಿಸಲು ರಾಜ್ಯ ಹೈಕೋರ್ಟ್ ಮಧ್ಯಸ್ಥಿಕೆ ವಹಿಸಬೇಕಾಯಿತು ಎಂದು ಗಮನ ಸೆಳೆದರು.
ಧಾರವಾಡದಲ್ಲಿ ನ್ಯಾಯಕ್ಕಾಗಿ ಲಕ್ಷಾಂತರ ಯುವಜನತೆ ಒತ್ತಾಯಿಸಿದಾಗ ಲಾಠಿಪ್ರಹಾರ ಮಾಡಿದ್ದೀರಿ. ಯಾಕೆ ಸತ್ಯ ಮರೆಮಾಚುತ್ತಿದ್ದೀರಿ ಎಂದು ಪ್ರಶ್ನಿಸಿದರು. ಗ್ಯಾರಂಟಿಗಳಿಗೆ ಹಣ ಕ್ರೋಡೀಕರಿಸಲು ಸಾಧ್ಯವಾಗದೇ ಹೈಕೋರ್ಟಿನ ಕುಂಟು ನೆಪ, ಮೀಸಲಾತಿ ನೆಪ ಹೇಳಿಕೊಂಡು ನೇಮಕಾತಿಯನ್ನು ಮುಂದೂಡುತ್ತಿರುವುದು ತಾವಲ್ಲವೇ ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.
ಇದು ರಾಜ್ಯದ ಆರ್ಥಿಕ ಪರಿಸ್ಥಿತಿಯ ಕೈಗನ್ನಡಿಯಲ್ಲವೇ?: ಮಂಡ್ಯ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ಪಿಂಚಣಿ ಕೊಡುವುದನ್ನೂ 10 ತಿಂಗಳಿಂದ ನಿಲ್ಲಿಸಿದ್ದಾರೆ. ಇದು ರಾಜ್ಯದ ಆರ್ಥಿಕ ಪರಿಸ್ಥಿತಿಯ ಕೈಗನ್ನಡಿಯಲ್ಲವೇ ಎಂದು ಪ್ರಶ್ನೆ ಹಾಕಿದರು. ಅತಿಥಿ ಉಪನ್ಯಾಸಕರಿಗೆ 2 ತಿಂಗಳಿಂದ ಸಂಬಳ ನೀಡದೇ ಇರುವುದು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಎತ್ತಿ ತೋರಿಸುವುದಿಲ್ಲವೇ ಎಂದು ವಿಜಯೇಂದ್ರ ಪ್ರಶ್ನಿಸಿದರು.
ರಾಜ್ಯದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಕಾನೂನು- ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹೊಂದಿರುವ ಪೊಲೀಸ್ ಇಲಾಖೆಗೆ 15- 20 ದಿನ, ಒಂದು ತಿಂಗಳಾದರೂ ಸಂಬಳ ಕೊಡುವುದಕ್ಕೆ ಆಗುತ್ತಿಲ್ಲ. ಇದು ಆರ್ಥಿಕ ಪರಿಸ್ಥಿತಿ ಯಾವ ಮಟ್ಟಿಗೆ ಹೋಗಿದೆ ಎಂಬುದನ್ನು ತೋರಿಸುವುದಿಲ್ಲವೇ ಎಂದು ಕೇಳಿದರು.
ತುಂಗಭದ್ರಾ ಅಣೆಕಟ್ಟಿನ ಗೇಟ್ ಕುಸಿಯಿತು. ನಾವು ತೆಲಂಗಾಣ, ಆಂಧ್ರವನ್ನು ಕಾಯುವುದಿಲ್ಲ. ರಾಜ್ಯ ಸರಕಾರವೇ ಹಣ ಹಾಕಿ 21 ಗೇಟ್ ಕೂರಿಸಲಿದೆ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿಕೆ ಕೊಟ್ಟಿದ್ದರು. ಆಂಧ್ರವು ಗೇಟ್ ದುರಸ್ತಿಗೆ ಹಣ ಕೊಟ್ಟಿತು. ಸಂಬಳಕ್ಕಾಗಿ 20 ಕೋಟಿ ಹೆಚ್ಚುವರಿಯಾಗಿ ಕೊಟ್ಟರೆ, ಆ ಹಣದಿಂದ ರಾಜ್ಯ ಸರಕಾರ ಕೊಟ್ಟ 10 ಕೋಟಿ ಹಿಂಪಡೆಯುವ ಕೆಲಸ ಮಾಡಿದೆ. ಇದು ವಾಸ್ತವಿಕ ಸತ್ಯ. ಇದನ್ನು ಅರ್ಥ ಮಾಡಿಕೊಳ್ಳಲು ಆರ್ಥಿಕ ತಜ್ಞರಾಗಬೇಕಿಲ್ಲ ಎಂದು ಮುಖ್ಯಮಂತ್ರಿಗಳ ಗಮನ ಸೆಳೆದರು.
ಬಾಗಲಕೋಟೆಯಲ್ಲಿ 5 ದಿನ ಬಿಡಾರ ಹೂಡುವ ಪರಿಸ್ಥಿತಿ ಯಾಕೆ?
ಅಭಿವೃದ್ಧಿ- ಗ್ಯಾರಂಟಿ ಕುರಿತು ನಿಮಗೆ ಆತ್ಮವಿಶ್ವಾಸ ಇದ್ದಿದ್ದರೆ, ಮುಖ್ಯಮಂತ್ರಿಗಳೇ ನೀವು ಬಾಗಲಕೋಟೆಯಲ್ಲಿ 5 ದಿನ ಬಿಡಾರ ಹೂಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು. ಸಚಿವಸಂಪುಟದ ಪಟಾಲಂನೊಂದಿಗೆ ಸೂಟ್‍ಕೇಸ್ ಹಿಡಿದುಕೊಂಡು ಕೂರುವ ದಾರಿದ್ರ್ಯ ಬರುತ್ತಿರಲಿಲ್ಲ ಎಂದು ಟೀಕಿಸಿದರು. ಈಗಲೂ ಕಾಲಮಿಂಚಿಲ್ಲ. ರಾಜ್ಯದ ಹಣಕಾಸಿನ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಒತ್ತಾಯಿಸಿದರು.