ಸಂಗ್ರಹ ಚಿತ್ರ 
ರಾಜ್ಯ

ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾದ ಬೆಂಗಳೂರು: ಧರ್ಮರಾಯಸ್ವಾಮಿ ದೇವಸ್ಥಾನದಿಂದ ವೈಭವದ ಕರಗ ಆರಂಭ; ಲಕ್ಷಾಂತರ ಭಕ್ತರು ಭಾಗಿ

ನಗರದ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಮಧ್ಯರಾತ್ರಿಯ ನಂತರ ಮಹಾರಥೋತ್ಸವ ಹೊರಟ ಕೂಡಲೇ ಗರ್ಭಗುಡಿಯಿಂದ ದ್ರೌಪದಿ ದೇವಿಯ ಕರಗ ಮೆರವಣಿಗೆ ಆರಂಭವಾಯಿತು. ಈ ವೇಳೆ “ಗೋವಿಂದಾ... ಗೋವಿಂದಾ...” ಎಂಬ ನಾಮಸ್ಮರಣೆಯೊಂದಿಗೆ ಸಾಗಿದ ಕರಗದ ದರ್ಶನ ಪಡೆದು ಭಕ್ತರು ಪುನೀತರಾದರು.

ಬೆಂಗಳೂರು: ನಗರದ ಐತಿಹಾಸಿಕ ಮತ್ತು ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಕರಗ ಮಹೋತ್ಸವವು ಚೈತ್ರ ಪೂರ್ಣಿಮೆಯಂದು ಭಕ್ತಿಭಾವದಿಂದ ಭರ್ಜರಿಯಾಗಿ ನಡೆಯಿತು. ಬೆಳದಿಂಗಳ ಬೆಳಕಲ್ಲಿ ಮಲ್ಲಿಗೆ ಹೂಗಳಿಂದ ಅಲಂಕರಿಸಲ್ಪಟ್ಟ ಹೂವಿನ ಕರಗವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಹರಿದುಬಂದರು.

ನಗರದ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಮಧ್ಯರಾತ್ರಿಯ ನಂತರ ಮಹಾರಥೋತ್ಸವ ಹೊರಟ ಕೂಡಲೇ ಗರ್ಭಗುಡಿಯಿಂದ ದ್ರೌಪದಿ ದೇವಿಯ ಕರಗ ಮೆರವಣಿಗೆ ಆರಂಭವಾಯಿತು. ಈ ವೇಳೆ “ಗೋವಿಂದಾ... ಗೋವಿಂದಾ...” ಎಂಬ ನಾಮಸ್ಮರಣೆಯೊಂದಿಗೆ ಸಾಗಿದ ಕರಗದ ದರ್ಶನ ಪಡೆದು ಭಕ್ತರು ಪುನೀತರಾದರು.

ಪಾರಂಪರಿಕವಾಗಿ ವಕುಲ ಸಮುದಾಯದ ಅರ್ಚಕ ಜ್ಞಾನೇಂದ್ರ ಅವರು ಕರಗ ಹೊತ್ತು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಅವರ ಸುತ್ತಮುತ್ತ ವೀರಕುಮಾರರು ಕತ್ತಿಗಳೊಂದಿಗೆ ಭದ್ರತೆ ಒದಗಿಸಿದರು. ಕರಗ ಸಾಗಿದ ಮಾರ್ಗದ ಉದ್ದಕ್ಕೂ ಕಟ್ಟಡಗಳ ಮೇಲಿಂದಲೂ, ರಸ್ತೆ ಬದಿಗಳಲ್ಲೂ ಜನರು ನಿಂತು ದರ್ಶನ ಪಡೆದ ದೃಶ್ಯ ಗಮನಸೆಳೆಯಿತು.

ಬೆಂಗಳೂರು ಮಾತ್ರವಲ್ಲದೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದಲೂ ಭಕ್ತರು ಆಗಮಿಸಿ ಉತ್ಸವದ ವೈಭವ ಹೆಚ್ಚಿಸಿದರು.

ಕಣ್ಮನ ಸೆಳೆದ ದೀಪಾಲಂಕಾರ

ಕರಗ ಉತ್ಸವದ ವೇಳೆ ನಗರ್ತಪೇಟೆ ಸುತ್ತಮುತ್ತ ದೇವಸ್ಥಾನಗಳು, ಕಟ್ಟಡಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಕಂಗೊಳಿಸಿತು. ಮೈಸೂರು ದಸರಾ ಮಾದರಿಯಲ್ಲಿ ಅಲಂಕರಿಸಲಾದ ರಸ್ತೆಗಳಲ್ಲಿ ಬಣ್ಣ ಬಣ್ಣದ ದೀಪಗಳು ಹಬ್ಬದ ವಾತಾವರಣವನ್ನು ಸೃಷ್ಟಿಸಿತು.

ಪ್ರಮುಖ ಬೀದಿಗಳಲ್ಲಿ ಕರಗ ಸಂಚಾರ

ತಿಗಳರಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಾಲಯದಿಂದ ಆರಂಭವಾದ ಮೆರವಣಿಗೆ ವಿವಿಧ ದೇವಸ್ಥಾನಗಳಲ್ಲಿ ಪೂಜೆ ಸ್ವೀಕರಿಸುತ್ತಾ ನಗರ್ತಪೇಟೆ, ಕಬ್ಬನ್‌ಪೇಟೆ, ಅವೆನ್ಯೂ ರಸ್ತೆ, ಕೆ.ಆರ್ ಮಾರುಕಟ್ಟೆ, ಗಾಂಧಿನಗರ ಸೇರಿದಂತೆ ಅನೇಕ ಪ್ರಮುಖ ಭಾಗಗಳಲ್ಲಿ ಸಂಚರಿಸಿತು. ಕೊನೆಗೆ ಬೆಳಿಗ್ಗೆ ಕರಗವು ಮರಳಿ ದೇವಸ್ಥಾನ ತಲುಪಿತು.

ಬಿಗಿ ಪೊಲೀಸ್ ಬಂದೋಬಸ್ತ್

ಭಾರೀ ಜನಸಂದಣಿ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟುನಿಟ್ಟಿನ ಭದ್ರತಾ ಕ್ರಮ ಕೈಗೊಂಡಿದ್ದರು. ಸಂಜೆ ವೇಳೆಯಿಂದಲೇ ದೇವಸ್ಥಾನದ ಸುತ್ತಮುತ್ತ ಜನರು ಜಮಾಯಿಸಿದ್ದರಿಂದ ವಾಹನ ಸಂಚಾರವೂ ಹೆಚ್ಚಾಗಿತ್ತು.

ಇಷ್ಟಾರ್ಥಕ್ಕಾಗಿ ಕರ್ಪೂರ ಹಚ್ಚಿದ ಭಕ್ತರು

ಇಷ್ಟಾರ್ಥ ಸಿದ್ಧಿಗಾಗಿ ಕರ್ಪೂರ ಹಚ್ಚುವುದು ಕರಗದ ವೇಳೆ ಕಂಡು ಬರುವ ವಿಶೇಷ ಸಂಪ್ರದಾಯವಾಗಿದೆ. ಈ ಬಾರಿ ಕೆಲ ಭಕ್ತರು ಆರ್'ಸಿಬಿ ತಂಡದ ಗೆಲುವಿಗಾಗಿ ಪ್ರಾರ್ಥಿಸಿದರೆ, ಇನ್ನೂ ಕೆಲವರು ಗ್ಯಾಸ್ ಸಮಸ್ಯೆ ನಿವಾರಣೆಗೆ ಬೇಡಿಕೊಂಡು ಕರ್ಪೂರ ಹಚ್ಚಿದರು.

ಸೌಹಾರ್ದತೆಗೆ ಸಾಕ್ಷಿಯಾದ ದರ್ಗಾ ಭೇಟಿ

ಪ್ರತಿ ವರ್ಷದಂತೆ ಈ ವರ್ಷವೂ ಕರಗ ಮೆರವಣಿಗೆ ಮಸ್ತಾನ್ ಸಾಬ್ ದರ್ಗಾದಲ್ಲಿ ಧೂಪಾರತಿ ಸ್ವೀಕರಿಸಿದ್ದು, ನಂತರ ಅಣ್ಣಮ್ಮ ದೇವಾಲಯಕ್ಕೆ ತೆರಳಿತು. ಈ ಸಂಪ್ರದಾಯವು ನಗರದ ಕೋಮು ಸೌಹಾರ್ದತೆಯ ಸಂಕೇತವಾಗಿ ಮಿಂಚಿತು.

ಒಟ್ಟಾರೆ, ಕರಗ ಮಹೋತ್ಸವವು ಬೆಂಗಳೂರಿನ ಭಕ್ತಿ, ಪರಂಪರೆ ಮತ್ತು ಸೌಹಾರ್ದತೆಯ ಅದ್ಭುತ ರೂಪವಾಗಿ ಮತ್ತೊಮ್ಮೆ ಜನಮನ ಗೆದ್ದಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಯನಾಡು: ಭೂ ಕುಸಿತದ ರಭಸಕ್ಕೆ ಕೊಚ್ಚಿ ಬಂದ ಟ್ಯಾಂಕರ್! ನದಿಗೆ ಬಿದ್ದ ಖಾಸಗಿ ಬಸ್, ಓರ್ವ ಸಾವು, ಏಳು ಮಂದಿಗೆ ಗಾಯ, ಭಯಾನಕ Video

ಕೇರಳ: ವಯನಾಡ್ ಸುರಂಗ ನಿರ್ಮಾಣ ಸ್ಥಳದಲ್ಲಿ ಭಾರಿ ಭೂ ಕುಸಿತ; ಹಲವರು ಸಿಲುಕಿರುವ ಶಂಕೆ

ರಾಮ ಮಂದಿರ ಟ್ರಸ್ಟ್‌ನಲ್ಲಿ 30 ಕೆಜಿಗೂ ಹೆಚ್ಚು ಚಿನ್ನದ ವಸ್ತುಗಳು, ದಾನ ಮಾಡಿದ ಎಲ್ಲಾ ಬೆಲೆಬಾಳುವ ವಸ್ತುಗಳು ಸುರಕ್ಷಿತ: ಖಜಾಂಚಿ ಗೋವಿಂದ್ ದೇವ್ ಗಿರಿ

ಪ್ರಧಾನಿ ಮೋದಿಗೆ ಮತ್ತೊಂದು ಅಂತಾರಾಷ್ಟ್ರೀಯ ಗೌರವ; Indonesiaದ ಅತ್ಯುನ್ನತ Bintang Adipurna ನಾಗರಿಕ ಪ್ರಶಸ್ತಿ ಪ್ರದಾನ..!

CM Vijay ಭೇಟಿಯನ್ನು ನಾವು ನಿಯಂತ್ರಿಸಬೇಕೆಂದು ಬಯಸುತ್ತೀರಾ?: ಡಿಎಂಕೆ ಗೆ ಸುಪ್ರೀಂ ಕೋರ್ಟ್ ಛೀಮಾರಿ!