ಬೆಂಗಳೂರು: ರಾಜ್ಯದಲ್ಲಿ ಸೈಬರ್ ಅಪರಾಧ ಸೇರಿ ವಿವಿಧ ರೀತಿಯ ಅಪರಾಧಗಳ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿರುವುದು ಆತಂಕಕಾರಿ ಸಂಗತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳವಳ ವ್ಯಕ್ತಪಡಿಸಿದ್ದು, ಇಂತಹ ಅಪರಾಧಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಗುರುವಾರ ಸೂಚನೆ ನೀಡಿದರು.
ಕೊರಮಂಗಲದ ಪೆರೇಡ್ ಗ್ರೌಂಡ್‌ನಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಅಥವಾ ಅಕ್ರಮ ಚಟುವಟಿಕೆಗಳು ಸಂಬಂಧಿತ ಅಧಿಕಾರಿಗಳ ಗಮನಕ್ಕೆ ಬರದೇ ನಡೆಯಲು ಸಾಧ್ಯವಿಲ್ಲ. ಆರೋಪಿಗಳಿಗೆ ನೆರವು ನೀಡುವ ಪೊಲೀಸರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಅಪರಾಧಗಳ ನಿಯಂತ್ರಣ ಹಾಗೂ ಶಿಕ್ಷೆ ನೀಡುವ ವಿಷಯದಲ್ಲಿ ಕರ್ನಾಟಕ ಮುಂದಿದೆ, ಈ ಸಾಧನೆಗಾಗಿ ಪೊಲೀಸ್ ಇಲಾಖೆಯನ್ನು ಅಭಿನಂದಿಸಿದರು. ಆದರೂ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಪರಾಧಗಳನ್ನು ತಡೆಯಲು ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ವಿಶೇಷವಾಗಿ ಸೈಬರ್ ಅಪರಾಧಗಳ ನಿಯಂತ್ರಣಕ್ಕಾಗಿ ಆಧುನಿಕ ತಂತ್ರಜ್ಞಾನ ಬಳಕೆ ಅಗತ್ಯವೆಂದು ಸೂಚಿಸಿದರು.
ಪೊಲೀಸರು 24 ಗಂಟೆಯೂ ಕರ್ತವ್ಯನಿಷ್ಠೆಯಿಂದ ಕೆಲಸ ಮಾಡುತ್ತಿರುವುದರಿಂದ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ವಾತಾವರಣ ಇದೆ. ಮಹಿಳೆಯರು, ಮಕ್ಕಳು ಹಾಗೂ ದುರ್ಬಲ ವರ್ಗಗಳ ರಕ್ಷಣೆಗೆ ನಮ್ಮ ಸರ್ಕಾರ ಆದ್ಯತೆ ನೀಡುತ್ತಿದೆ. ಪೊಲೀಸ್ ಇಲಾಖೆಯೂ ಇದೇ ದಿಕ್ಕಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.
ಇದೇ ವೇಳೆ ರಾಜ್ಯದ ಆರ್ಥಿಕ ಬೆಳವಣಿಗೆ, ಜಿಡಿಪಿ ವೃದ್ಧಿ ಮತ್ತು ಕಾನೂನು ಸುವ್ಯವಸ್ಥೆ ನಡುವೆ ನೇರ ಸಂಬಂಧವಿದೆ ಎಂದು ಉಲ್ಲೇಖಿಸಿದ ಸಿಎಂ, ಪೊಲೀಸ್ ಇಲಾಖೆ ಈ ಅಂಶವನ್ನು ಮನಗಂಡು ಕಾರ್ಯನಿರ್ವಹಿಸಿದರೆ ರಾಜ್ಯದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡಬಹುದು ಎಂದು ಅಭಿಪ್ರಾಯಪಟ್ಟರು.
ಕರ್ನಾಟಕವನ್ನು ಡ್ರಕ್ಸ್ ಮುಕ್ತ ರಾಜ್ಯವನ್ನಾಗಿ ಮಾಡುವುದು ನಮ್ಮ ಸರ್ಕಾರದ ಗುರಿ. ಇದೇ ಗುರಿಯನ್ನು ಪೊಲೀಸ್ ಇಲಾಖೆಯೂ ಹೊಂದಿರಬೇಕು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಮಾತನಾಡಿ, ರಾಜ್ಯದ ಪೊಲೀಸ್ ವ್ಯವಸ್ಥೆ ದೇಶದಲ್ಲೇ ಅತ್ಯುತ್ತಮವಾಗಿದ್ದು, ಇಂಡಿಯಾ ಜಸ್ಟಿಸ್ ರಿಪೋರ್ಟ್ ಪ್ರಕಾರ ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.
ರಾಜ್ಯದ ಎಲ್ಲ ಪೊಲೀಸ್ ಠಾಣೆಗಳೂ ರಾಯಚೂರು ಜಿಲ್ಲೆಯ ಕವಿತಾಳ ಪೊಲೀಸ್ ಠಾಣೆಯಂತೆ ಅತ್ಯುತ್ತಮವಾಗಬೇಕು ಎಂದು ಸರ್ಕಾರ ಬಯಸುತ್ತಿದೆ ಎಂದರು. “ನಾವು ಕರ್ನಾಟಕವನ್ನು ದೇಶದಲ್ಲೇ ಮೊದಲ ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡಿದ್ದೇವೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವಾರು ಪೊಲೀಸ್ ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಪದಕ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಡಿಜಿ ಮತ್ತು ಐಜಿಪಿ ಎಂ.ಎ. ಸಲೀಂ ಸೇರಿದಂತೆ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.