ಬೆಂಗಳೂರು: ಬೆಂಗಳೂರು ಜನಪ್ರತಿನಿಧಿಗಳ ವಿಶೇಶ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಜಡ್ಜ್ ಸಂತೋಷ್ ಗಜಾನನ ಭಟ್ ಅವರನ್ನು ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ನಿರ್ದೇಶಕರನ್ನಾಗಿ ನೇಮಕ ಮಾಡಿ ವರ್ಗಾಯಿಸಲಾಗಿದೆ. ಗಜಾನನ ಭಟ್ ಸೇರಿದಂತೆ ರಾಜ್ಯಾದಾದ್ಯಂತ 114 ಜಡ್ಜ್ ಗಳನ್ನು ಏಕಕಾಲಕ್ಕೆ ವರ್ಗಾವಣೆಗೊಳಿಸಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಮಹತ್ವದ ಆದೇಶ ಹೊರಡಿಸಿದ್ದಾರೆ. ವರ್ಗಾವಣೆಗೊಂಡಿರುವ ಎಲ್ಲಾ ನ್ಯಾಯಾಧೀಶರು ಜೂನ್ 1 ರಿಂದಲೇ ಅನ್ವಯವಾಗುವಂತೆ ತಮ್ಮ ಹೊಸ ಕಾರ್ಯಕ್ಷೇತ್ರಗಳಲ್ಲಿ ಜವಾಬ್ದಾರಿ ವಹಿಸಿಕೊಳ್ಳಲು ಸೂಚಿಸಲಾಗಿದೆ.
ಸಂತೋಷ್ ಗಜಾನನ ಭಟ್ ಅವರ ವರ್ಗಾವಣೆಯಿಂದ ತೆರವಾದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಸ್ಥಾನಕ್ಕೆ ಪ್ರಸ್ತುತ ಮಂಡ್ಯದ 1ನೇ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದ ಕೆ.ಬಿ ಶಿವಪ್ರಸಾದ್ ಅವರನ್ನು ನೇಮಿಸಲಾಗಿದೆ. ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಆಗಿದ್ದ ಕೆ.ಎಸ್. ಭರತ್ ಕುಮಾರ್ ಅವರನ್ನು ಬೆಂಗಳೂರಿನ ಪ್ರಧಾನ ಜಿಲ್ಲಾ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದ್ದು ಅವರ ಸ್ಥಾನಕ್ಕೆ ಎಂ. ಚಂದ್ರಶೇಖರ ರೆಡ್ಡಿ ಅವರನ್ನು ನೇಮಿಸಿ ಹೈಕೋರ್ಟ್ ಆದೇಶಿಸಿದೆ.