ಬೆಂಗಳೂರು: ರಾಜ್ಯದ 15 ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸುವ ಹಿನ್ನೆಲೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (DSEL) ಶಿಕ್ಷಕರಿಗೆ ಇಂಗ್ಲಿಷ್ ಬೋಧನೆಗಾಗಿ ತರಬೇತಿ ನೀಡಿದರೂ, ಅದು ಕೇವಲ ಐದು ದಿನಗಳಷ್ಟೇ ನಡೆದಿದ್ದು ಶಿಕ್ಷಕರಿಗೆ ಬೇಸರ ತರಿಸಿದೆ.
ಈ ತರಬೇತಿಯಲ್ಲಿ ಭಾಗವಹಿಸಿದ ಶಿಕ್ಷಕರು, ಐದು ದಿನಗಳಲ್ಲಿ ಭಾಷೆಯನ್ನು ಕಲಿಯಲು ಹಾಗೂ ವಿದ್ಯಾರ್ಥಿಗಳಿಗೆ ಬೋಧಿಸಲು ಹೇಗೆ ಸಾಧ್ಯ ಎಂದು ಕೇಳುತ್ತಾರೆ. ರಾಜ್ಯಾದ್ಯಂತ ಶಾಲೆಗಳು ಆರಂಭವಾಗಲು ಇನ್ನು ಒಂದೂವರೆ ತಿಂಗಳಿರುವ ಸಂದರ್ಭದಲ್ಲಿ ಶಿಕ್ಷಕರು ಈ ಆತಂಕ ವ್ಯಕ್ತಪಡಿಸಿದ್ದಾರೆ. “ಸರ್ಕಾರದ ವೆಬ್‌ಸೈಟ್‌ನಲ್ಲಿ 15 ದಿನಗಳ ತರಬೇತಿ ಎಂದು ಹೇಳಲಾಗಿದ್ದರೂ, ವಾಸ್ತವದಲ್ಲಿ ಕೇವಲ ಐದು ದಿನಗಳಷ್ಟೇ ತರಬೇತಿ ನೀಡಲಾಗಿದೆ ಎನ್ನುತ್ತಾರೆ ಶಿಕ್ಷಕರು.
ಬೆಳಗಾವಿ ಜಿಲ್ಲೆಯ ಸರ್ಕಾರಿ ಶಾಲೆಯ ಶಿಕ್ಷಕರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್(The New Indian Express) ಪ್ರತಿನಿಧಿ ಜೊತೆ ಮಾತನಾಡಿ, ಕೆಲ ಸರ್ಕಾರಿ ಶಿಕ್ಷಕರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಆಯ್ಕೆ ಮಾಡಿ ನಮಗೆ ಇಂಗ್ಲಿಷ್ ಕಲಿಸಲು ತರಬೇತಿ ನೀಡಲಾಗಿದೆ.
ಅವರಲ್ಲಿ ಕೆಲವರಿಗೆ ಇಂಗ್ಲಿಷ್ ಬೋಧನೆ ಹಿನ್ನೆಲೆಯೇ ಇರಲಿಲ್ಲ. ಅವರು ಕನ್ನಡ ಶಿಕ್ಷಕರಾಗಿದ್ದು, ತರಗತಿಯಲ್ಲಿ ಭಾಷೆಯ ಬಳಕೆ ಕುರಿತು ನಮಗೆ ಸರಿಯಾಗಿ ಕಲಿಸಲು ಸಿದ್ಧರಾಗಿರಲಿಲ್ಲ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ತರಬೇತಿ ಸಾಮಗ್ರಿಯನ್ನು ಸಿದ್ಧಪಡಿಸಿದ್ದು, ಅದು ತುಂಬಾ ದೊಡ್ಡದಾಗಿದೆ. ಅದನ್ನು ಓದಿ ಅರ್ಥಮಾಡಿಕೊಳ್ಳಲು ಕನಿಷ್ಠ ಎರಡು ದಿನ ಬೇಕಾಗುತ್ತದೆ ಎಂದು ವಾಸ್ತವ ಪರಿಸ್ಥಿತಿ ಹೇಳಿದರು.
ಇದೇ ವೇಳೆ ತಾಲೂಕು ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿದ್ದ ಮತ್ತೊಬ್ಬ ಶಿಕ್ಷಕರು, ತರಬೇತಿ ಸಮರ್ಪಕವಾಗಿರಲಿಲ್ಲ. ನಾವು ಎಸ್‌ಎಸ್‌ಎಲ್‌ಸಿ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಿದ್ದ ಜೊತೆಗೆ ಜನಗಣತಿ ತರಬೇತಿಗೂ ಹಾಜರಾಗಬೇಕಾಯಿತು. ವಿದ್ಯಾರ್ಥಿಗಳಿಗೆ ಬೋಧಿಸುವುದನ್ನು ಬಿಟ್ಟು, ಹಲವಾರು ಶಿಕ್ಷಕರಿಗೆ ಇಂಗ್ಲಿಷ್‌ನಲ್ಲಿ ಸರಳ ವಾಕ್ಯವನ್ನೂ ರಚಿಸಲು ತಿಳಿದಿಲ್ಲ. ಹೀಗಾಗಿ ಐದು ದಿನಗಳ ತರಬೇತಿ ಯಾವುದೇ ಪ್ರಯೋಜನಕಾರಿಯಾಗುವುದಿಲ್ಲ ಎಂದು ಹೇಳಿದರು.
ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಕೂಡ ಐದು ದಿನಗಳಲ್ಲಿ ಯಾವುದೇ ಭಾಷೆಯ ಮೂಲಭೂತ ಅಂಶಗಳನ್ನು ಕಲಿಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಸರ್ಕಾರವು ಇಂಗ್ಲಿಷ್ ಹಿನ್ನೆಲೆಯ ಶಿಕ್ಷಕರನ್ನು ನೇಮಕ ಮಾಡಬೇಕು. ಇಲ್ಲವಾದರೆ ವಿದ್ಯಾರ್ಥಿಗಳಲ್ಲಿ ಭಾಷಾ ಕಲಿಕೆಯ ಗುಣಮಟ್ಟ ಕುಸಿದು, ಅವರ ಫಲಿತಾಂಶಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.