ಬೆಂಗಳೂರು: ಧಾರವಾಡ ಜಿಲ್ಲೆಯ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧದ ಬಹುಚರ್ಚಿತ ಯೋಗೀಶ್ ಗೌಡ ಕೊಲೆ ಪ್ರಕರಣ ಇದೀಗ ಅಂತಿಮ ಹಂತಕ್ಕೆ ತಲುಪಿದ್ದು, ಶಿಕ್ಷೆಯ ಪ್ರಮಾಣದ ಕುರಿತು ನ್ಯಾಯಾಲಯದ ತೀರ್ಪು ಇಂದು ಪ್ರಕಟವಾಗಲಿದೆ.
ಈ ಹಿನ್ನೆಲೆಯಲ್ಲಿ ಕುಲಕರ್ಣಿ ನ್ಯಾಯಾಲಯದ ಮುಂದೆ ನಿಂತು ದಯೆ ತೋರಿಸುವಂತೆ ಮನವಿ ಮಾಡಿದ್ದು, ತನ್ನ ಕುಟುಂಬ ಪರಿಸ್ಥಿತಿಯನ್ನು ಉಲ್ಲೇಖಿಸಿ ಶಿಕ್ಷೆಯನ್ನು ಕಡಿಮೆ ಮಾಡಲು ವಿನಂತಿಸಿದ್ದಾರೆ.
2016ರಲ್ಲಿ ನಡೆದ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡರ್ ಹತ್ಯೆ ಪ್ರಕರಣವು ರಾಜ್ಯದ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ಆರಂಭದಲ್ಲಿ ಸ್ಥಳೀಯ ಪೊಲೀಸರಿಂದ ತನಿಖೆ ನಡೆದಿದ್ದರೂ, ನಂತರ ಪ್ರಕರಣದ ಗಂಭೀರತೆಯನ್ನು ಗಮನಿಸಿ ಸಿಬಿಐ ತನಿಖೆಗೆ ಹಸ್ತಾಂತರಿಸಲಾಗಿತ್ತು.
ಸಿಬಿಐ ತನಿಖೆಯ ಬಳಿಕ ಕುಲಕರ್ಣಿ ಸೇರಿದಂತೆ 17 ಮಂದಿಯನ್ನು ಆರೋಪಿಗಳಾಗಿ ಗುರುತಿಸಲಾಗಿದ್ದು, ಹಲವು ವರ್ಷಗಳ ವಿಚಾರಣೆಯ ನಂತರ ವಿಶೇಷ ನ್ಯಾಯಾಲಯವು ಇತ್ತೀಚೆಗೆ ಎಲ್ಲರನ್ನು ದೋಷಿಗಳೆಂದು ಘೋಷಿಸಿದೆ.
ವಿಚಾರಣೆ ವೇಳೆ ಸಿಬಿಐ ಗಂಭೀರ ಆರೋಪಗಳನ್ನು ಮಾಡಿದೆ. ಹತ್ಯೆ ಪೂರ್ವಯೋಜಿತವಾಗಿದ್ದು, ರಾಜಕೀಯ ವೈಷಮ್ಯವೇ ಇದರ ಮೂಲ ಕಾರಣ ಎಂದು ತಿಳಿಸಲಾಗಿದೆ.
ಘಟನೆಯ ಸಂದರ್ಭದಲ್ಲಿ ಆರೋಪಿಗಳಲ್ಲಿ ಒಬ್ಬರು ವ್ಯಕ್ತಿಯ ಕಣ್ಣಿಗೆ ಖಾರದ ಪುಡಿ ಎರಚಿ, ಬಳಿಕ ಕ್ರೂರವಾಗಿ ಹತ್ಯೆ ನಡೆಸಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಗಿದೆ. ಈ ಕೃತ್ಯವು ಸಾಮಾನ್ಯ ಕೊಲೆ ಪ್ರಕರಣವಲ್ಲ, ಸಮಾಜಕ್ಕೆ ಭಯ ಹುಟ್ಟಿಸುವಂತಹ ಕ್ರೂರ ಅಪರಾಧ ಎಂದು ವಾದಿಸಿದೆ.
ಇದಕ್ಕೂ ಮೀರಿ, ತನಿಖೆ ಪ್ರಾರಂಭವಾದ ನಂತರ ಆರೋಪಿಗಳು ಸಾಕ್ಷ್ಯಗಳನ್ನು ನಾಶಪಡಿಸಲು ಪ್ರಯತ್ನಿಸಿದ್ದು, ಸಾಕ್ಷಿದಾರರನ್ನು ಹಣದ ಮೂಲಕ ಪ್ರಭಾವಿತಗೊಳಿಸಲು ಯತ್ನಿಸಿದ್ದಾರೆಂದು ಹಾಗೂ ನ್ಯಾಯಾಂಗ ಪ್ರಕ್ರಿಯೆಗೆ ಅಡ್ಡಿಪಡಿಸಲು ರಾಜಕೀಯ ಪ್ರಭಾವವನ್ನು ಬಳಸಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಿದೆ. ಈ ಎಲ್ಲ ಕಾರಣಗಳನ್ನು ಉಲ್ಲೇಖಿಸಿ, ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದೆ.
ಇನ್ನೊಂದೆಡೆ, ಕುಲಕರ್ಣಿ ಹಾಗೂ ಇತರ ಆರೋಪಿಗಳ ಪರ ವಕೀಲರು ಮಾನವೀಯ ಅಂಶಗಳನ್ನು ಮುಂದಿಟ್ಟು ದಯೆ ತೋರಿಸುವಂತೆ ಮನವಿ ಮಾಡಿದ್ದಾರೆ.
ಕುಟುಂಬದ ಜವಾಬ್ದಾರಿಗಳು, ಮಕ್ಕಳ ಭವಿಷ್ಯ, ಹಾಗೂ ತಮ್ಮ ಮೇಲೆ ಅವಲಂಬಿತವಾಗಿರುವವರ ಸ್ಥಿತಿಯನ್ನು ಪರಿಗಣಿಸಬೇಕು ಎಂದು ಕೇಳಿಕೊಂಡಿದ್ದಾರೆ.
ಕುಲಕರ್ಣಿ ತಮ್ಮ ವೈಯಕ್ತಿಕ ಹೇಳಿಕೆಯಲ್ಲಿ, “27 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಎರಡು ಬಾರಿ ಲೋಕಸಭಾ ಚುನಾವಣೆಗೆ ನಿಂತು ಸೋತಿದ್ದೇನೆ. ಮೂರು ಬಾರಿ ಶಾಸಕನಾಗಿದ್ದೇನೆ. ಒಂದು ಬಾರಿ ಸಚಿವನಾಗಿದ್ದೇನೆ. ಇಡೀ ಕ್ಷೇತ್ರದಲ್ಲಿನಾನು ಯಾರಿಗೂ ತೊಂದರೆ ಮಾಡಿದವನಲ್ಲ. ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ರಾಜಕೀಯ ಬೆಳವಣಿಗೆ ಸಹಿಸದೆ ಪಿತೂರಿ ಮಾಡಲಾಗಿದೆ. ರಾಜಕೀಯ ಕಾರಣಕ್ಕೆ ನನ್ನ ವಿಧಿರುಧಿದ್ಧ ಕೇಸ್ ಹಾಕಲಾಗಿದೆ.
ನನಗೆ ಮದುವೆ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಚಿಕ್ಕ ಮಗನಿದ್ದಾನೆ. ನನ್ನ ಮೇಲೆ ಅವಲಂಬಿತರಾದವರಿದ್ದಾರೆ. ಕೃಷಿಕನಾದ ನಾನು ಸಾವಿರಾರು ಹಸುಗಳನ್ನು ಸಾಕುತ್ತಿದ್ದೇನೆ. ಈ ಸಂದರ್ಭದಲ್ಲಿನನ್ನನ್ನು ಶಿಕ್ಷೆಗೆ ಗುರಿಪಡಿಸಿದರೆ ನಮ್ಮ ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಆದ್ದರಿಂದ ಶಿಕ್ಷೆ ಪ್ರಮಾಣ ಕಡಿಮೆ ಮಾಡಬೇಕು ಎಂದು ಕೋರಿದರು.
ನ್ಯಾಯಾಲಯವು ಎಲ್ಲ ದೋಷಿಗಳ ಹೇಳಿಕೆಗಳನ್ನು ಆಲಿಸಿ ದಾಖಲಿಸಿಕೊಂಡಿದ್ದು, ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವ ದಿನವನ್ನು ನಿಗದಿಪಡಿಸಿದೆ. ಈ ತೀರ್ಪು ಕೇವಲ ಆರೋಪಿಗಳ ಭವಿಷ್ಯವನ್ನು ಮಾತ್ರವಲ್ಲ, ರಾಜಕೀಯ ಮತ್ತು ಕಾನೂನು ವಲಯದಲ್ಲಿಯೂ ಮಹತ್ವದ ಪರಿಣಾಮ ಬೀರುವ ಸಾಧ್ಯತೆಯಿದೆ. ವಿಶೇಷವಾಗಿ ರಾಜಕೀಯ ವ್ಯಕ್ತಿಗಳ ವಿರುದ್ಧದ ಗಂಭೀರ ಅಪರಾಧ ಪ್ರಕರಣಗಳಲ್ಲಿ ನ್ಯಾಯಾಂಗದ ನಿಲುವು ಹೇಗಿರಬೇಕು ಎಂಬ ಪ್ರಶ್ನೆಗೆ ಇದು ಪ್ರಮುಖ ಉದಾಹರಣೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಇಂದಿನ ತೀರ್ಪು ತೀವ್ರ ಕುತೂಹಲವನ್ನು ಮೂಡಿಸಿದೆ.