ಸಚಿವ ಎಂಬಿ ಪಾಟೀಲ್ ಮತ್ತಿತರರು 
ರಾಜ್ಯ

KSDL ಅಭೂತಪೂರ್ವ ಸಾಧನೆ: ಇದೇ ಮೊದಲ ಬಾರಿಗೆ 2,016 ಕೋಟಿ ರೂ. ವಹಿವಾಟು! ಲಾಭ ಎಷ್ಟು ಗೊತ್ತಾ?

ಇದು ಸಂಸ್ಥೆಯ ಪಾಲಿಗೆ ಚಾರಿತ್ರಿಕ ಮೈಲುಗಲ್ಲಾಗಿದ್ದು, ಸಾರ್ವಜನಿಕ ಉದ್ದಿಮೆಗಳ ಸಾಧನೆಯಲ್ಲಿ ಕಿರೀಟಪ್ರಾಯವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮಂಗಳವಾರ ಹೇಳಿದ್ದಾರೆ.

ಬೆಂಗಳೂರು: 110 ವರ್ಷಗಳ ಇತಿಹಾಸವಿರುವ, ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (KSDL) 2025-26ನೇ ಹಣಕಾಸು ವರ್ಷದಲ್ಲಿ ಇದೇ ಮೊದಲ ಬಾರಿಗೆ 2,016 ಕೋಟಿ ರೂ. ವಹಿವಾಟು ನಡೆಸಿದ್ದು, 507 ಕೋಟಿ ರೂ. ಲಾಭ ಗಳಿಸಿದೆ.

ಇದು ಸಂಸ್ಥೆಯ ಪಾಲಿಗೆ ಚಾರಿತ್ರಿಕ ಮೈಲುಗಲ್ಲಾಗಿದ್ದು, ಸಾರ್ವಜನಿಕ ಉದ್ದಿಮೆಗಳ ಸಾಧನೆಯಲ್ಲಿ ಕಿರೀಟಪ್ರಾಯವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮಂಗಳವಾರ ಹೇಳಿದ್ದಾರೆ.

ಸಂಸ್ಥೆಯ ಈ ಅಪೂರ್ವ ಸಾಧನೆಯ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ ಮೈಸೂರು ಸ್ಯಾಂಡೆಲ್ ನ ಸಾಧನೆಯ ಶಿಖರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಂಸ್ಥೆಯು ಮೊದಲ ಒಂದು ಸಾವಿರ ಕೋಟಿ ರೂ.ಗಳ ವಹಿವಾಟನ್ನು ತಲುಪಲು 105 ವರ್ಷ ತೆಗೆದುಕೊಂಡಿತ್ತು. ಆದರೆ, ಅಲ್ಲಿಂದ 2 ಸಾವಿರ ಕೋಟಿ ರೂ. ಮಟ್ಟವನ್ನು ಕೇವಲ ನಾಲ್ಕು ವರ್ಷಗಳಲ್ಲಿ ತಲುಪಿದೆ. ಅದರಲ್ಲೂ 2022-23 ರಲ್ಲಿ 1,375 ಕೋಟಿ ರೂ. ವಹಿವಾಟು ನಡೆಸಿದ್ದ ಸಂಸ್ಥೆಯು, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕಳೆದ ಮೂರು ವರ್ಷಗಳಲ್ಲಿ 2,016 ಕೋಟಿ ರೂ. ತಲುಪಿದೆ. ಇಷ್ಟು ಅಲ್ಪಾವಧಿಯಲ್ಲಿ ಕೆ.ಎಸ್.ಡಿ.ಎಲ್ ವಹಿವಾಟು 641 ಕೋಟಿ ರೂ.ಗಳನ್ನು ಹೆಚ್ಚಳ ಕಂಡಿದೆ ಎಂದರು

ಮೊದಲು ಸಂಸ್ಥೆಯು ಕೇವಲ 34 ಉತ್ಪನ್ನಗಳನ್ನು ಹೊಂದಿತ್ತು. ಮೂರು ವರ್ಷಗಳಲ್ಲಿ ನಾವು 57 ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ. ಈಗ ಒಟ್ಟು 94 ಉತ್ಪನ್ನಗಳಿವೆ. ಯಾವುದೇ ಹೊಸ ನೇಮಕಾತಿ ಇಲ್ಲದೆ, ಯಂತ್ರೋಪಕರಣಗಳ ಖರೀದಿ ಇಲ್ಲದೆ ಇದನ್ನೆಲ್ಲ ಸಾಧಿಸಲಾಗಿದೆ. ಬಂದಿರುವ 507 ಕೋಟಿ ರೂ. ಲಾಭದಲ್ಲಿ ಸರಕಾರಕ್ಕೆ 157 ಕೋಟಿ ರೂ. ಲಾಭಾಂಶ (ಡಿವಿಡೆಂಡ್) ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಕೋಟಿ ರೂ ಹಸ್ತಾಂತರಿಸಲಾಗುವುದು. ಹೋದ ವರ್ಷ 135 ಕೋಟಿ ರೂ. ಕೊಡಲಾಗಿತ್ತು. ಇದರಲ್ಲಿ ಈಗ 22 ಕೋಟಿ ರೂ. ಹೆಚ್ಚಳವಾಗಿದೆ ಎಂದು ಅವರು ವಿವರಿಸಿದರು.

ಒಟ್ಟಾರೆಯಾಗಿ ಸಂಸ್ಥೆಯ ವಹಿವಾಟನ್ನು 2028ರ ಹೊತ್ತಿಗೆ 3 ಸಾವಿರ ಕೋಟಿ ರೂ. ಮತ್ತು 2030ರ ಹೊತ್ತಿಗೆ 5 ಸಾವಿರ ಕೋಟಿ ರೂ.ಗಳಿಗೆ ಕೊಂಡೊಯ್ಯುವ ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ವಿಜಯಪುರದಲ್ಲಿ 50 ಎಕರೆಯಲ್ಲಿ ನೂತನ ಉತ್ಪಾದನಾ ಘಟಕ ಆರಂಭವಾಗಲಿದ್ದು, ಇದಕ್ಕೆ 229 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಅವರು ತಿಳಿಸಿದರು.

ರೈತರಿಗೆ ಉತ್ತೇಜನ: ಸಂಸ್ಥೆಯ ಹೆಮ್ಮೆಯ ಉತ್ಪನ್ನವಾದ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆಗೆ ಗಂಧದ ಎಣ್ಣೆಯೇ ಮೂಲವಸ್ತುವಾಗಿದೆ. ಇದರ ಸುಗಮ ಪೂರೈಕೆಗೆ ಸಂಸ್ಥೆಯು ರೈತರೊಂದಿಗೆ ಕೈಜೋಡಿಸಿದ `ಗ್ರೋ ಮೋರ್ ಸ್ಯಾಂಡಲ್’ ಕಾರ್ಯಕ್ರಮ ರೂಪಿಸಿದೆ. ಇದರಡಿಯಲ್ಲಿ 10 ವರ್ಷಗಳಲ್ಲಿ 10 ಸಾವಿರ ಎಕರೆ ಗಂಧದ ನೆಡುತೋಪು ಬೆಳೆಸಲಾಗುವುದು. ಇದಕ್ಕಾಗಿ ರೈತರಿಗೆ ಪ್ರತೀ ಗಂಧದ ಗಿಡಕ್ಕೆ 3 ವರ್ಷಗಳಿಗೆ 500 ರೂ. ಪ್ರೋತ್ಸಾಹಧನ ನೀಡಲಾಗುವುದು. ಜತೆಗೆ ಬೆಂಗಳೂರಿನ ಜಿಕೆವಿಕೆ ಮತ್ತು ವಿಜಯಪುರದ ಕೃಷಿ ವಿದ್ಯಾಲಯಗಳ ಸಹಯೋಗದಲ್ಲಿ ಶ್ರೀಗಂಧದ ಅಧ್ಯಯನ ಪೀಠ ತೆರೆಯಲಾಗುವುದು ಎಂದು ಪಾಟೀಲ ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಸಂಸ್ಥೆಯು ರೈತರಿಂದಲೇ ನೇರವಾಗಿ 174 ಟನ್ ಗಂಧ ಖರೀದಿಸಿದ್ದು, 6.08 ಕೋಟಿ ರೂ.ಗಳನ್ನು ನೇರ ಪಾವತಿ ಮಾಡಿದೆ. ಬೆಂಗಳೂರು, ಡಾಬಸಪೇಟೆ, ಮೈಸೂರು ಮತ್ತು ಶಿವಮೊಗ್ಗದಲ್ಲಿ ಖಾಲಿ ಜಾಗ ಹೊಂದಿದ್ದು, ಇವುಗಳ ಸದ್ಬಳಕೆಗೆ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಇದು ಸಾಧ್ಯವಾದರೆ ಸಂಸ್ಥೆಯ ಪಾಲಿಗೆ ಆರ್ಥಿಕ ಹರಿವಿನ ಶಾಶ್ವತ ಸಂಪನ್ಮೂಲವೊಂದು ಸೃಷ್ಟಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಂಸ್ಥೆಯ ಅಧ್ಯಕ್ಷ ಸಿ ಎಸ್ ಅಪ್ಪಾಜಿ ನಾಡಗೌಡ ಮಾತನಾಡಿ, ಆಸ್ಟ್ರೇಲಿಯಾ ಸೇರಿದಂತೆ ದೇಶ ವಿದೇಶಗಳಿಗೆ ಹೋಗಿ ಸಾಬೂನು ಮಾರಾಟ ವಿಸ್ತರಣೆಗೆ ಪ್ರಯತ್ನ ಮಾಡಿದ್ದೇವೆ. ಆಧುನಿಕ ಮಾರಾಟ ವ್ಯವಸ್ಥೆ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟಿದ್ದು ಇವತ್ತಿನ ಸಾಧನೆಗೆ ಕಾರಣವಾಯಿತು ಎಂದು ನಾಡಗೌಡ ಹೇಳಿದರು.

ಮುಂದಿನ ದಿನಗಳಲ್ಲಿ ಯುನೈಟೆಡ್ ಎಮಿರೇಟ್ಸ್ ದೇಶಗಳಲ್ಲಿಯೂ ಮಾರುಕಟ್ಟೆ ವಿಸ್ತರಣೆ ಮಾಡಲು ಯೋಜನೆ ರೂಪಿಸುತ್ತಿದ್ದೇವೆ. ಸೋಪು ಮಾತ್ರವಲ್ಲದೆ, ಕಾಸ್ಮೆಟಿಕ್, ಸುಗಂಧ ದ್ರವ್ಯ ವಿಭಾಗದಲ್ಲೂ ಉತ್ಪನ್ನಗಳನ್ನು ಮಾರುಕಟ್ಟೆ ವಿಸ್ತರಣೆ ಮಾಡುತ್ತೇವೆ ಎಂದು ಹೇಳಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪಿಕೆಎಂ ಪ್ರಶಾಂತ್ ಮಾತಮಾಡಿ, ಸಂಸ್ಥೆಯ ನೌಕರರಿಗೆ 4.83 ಕೋಟಿ ರೂಪಾಯಿಯನ್ನು ವೇತನ ಒಪ್ಪಂದದ ಮೂಲಕ ನೀಡಲಾಗಿದೆ. 20 ಕೋಟಿ ರೂಪಾಯಿ ಕ್ಯಾಂಪಸ್ ಸಂರಕ್ಷಣೆ ವಿನಿಯೋಗಿಸಲಾಗಿದೆ ಎಂದರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈಶಾನ್ಯ ರಾಜ್ಯಗಳು 'ಭಾರತದ ಅಷ್ಟಲಕ್ಷ್ಮಿ'ಯರಿದ್ದಂತೆ, 'Act East', 'Act Fast' ನೀತಿಗೆ ಹೆಚ್ಚಿನ ಒತ್ತು: ಪ್ರಧಾನಿ ಮೋದಿ

ಹೆಸರಿನಲ್ಲಿ ಅಹಿಂಸೆ, ಮಾತಿನಲ್ಲಿ ಕನ್ನಡಿಗರಿಗೆ ಹಿಂಸೆ, ಚೇತನ್ ಗೆ ನಿಖಿಲ್ ಖಡಕ್ ತಿರುಗೇಟು!

ಕಲ್ಮಾ ಪಠಿಸುವಂತೆ ಅಮೆರಿಕದಿಂದ ಬಂದ ಉಗ್ರ ಒತ್ತಾಯ; ಒಪ್ಪದಿದ್ದಕ್ಕೆ ಭದ್ರತಾ ಸಿಬ್ಬಂದಿಗೆ ಇರಿದು ಹತ್ಯೆಗೆ ಯತ್ನ; ISIS ನಂಟು!

Delhi Liquor Scam: ನ್ಯಾ.ಸ್ವರ್ಣ ಕಾಂತ ಶರ್ಮಾ ಮುಂದೆ ವಿಚಾರಣೆಗೆ ಹಾಜರಾಗಲ್ಲ: ಕೇಜ್ರಿವಾಲ್ ಬೆನ್ನಲ್ಲೇ ಕೋರ್ಟ್ ಬಹಿಷ್ಕರಿಸಿದ ಸಿಸೋಡಿಯಾ..!

ಇದೀಗ ಮತ್ತೊಂದು ಕ್ಷೇತ್ರದಲ್ಲಿ ಬೆಂಗಳೂರು ದೇಶದಲ್ಲಿಯೇ ನಂಬರ್ 1: ಮಾಹಿತಿ ಹಂಚಿಕೊಂಡ ಸಚಿವ ಪ್ರಿಯಾಂಕ್ ಖರ್ಗೆ!

SCROLL FOR NEXT