ಬೆಂಗಳೂರು: ದೆಹಲಿ ಗಲಭೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಉಮರ್ ಖಾಲಿದ್ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ವಿರೋಧಿಸಿ, ಪ್ರತಿಭಟನೆಗೆ ಮುಂದಾದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ ಘಟನೆ ಮಂಗಳವಾರ ನಡೆದಿದೆ.
ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್ ಸಮೀಪ ಘಟನೆ ನಡೆದಿದೆ. 'ಉಮರ್ ಖಾಲಿದ್ ಮತ್ತು ಅವರ ಪ್ರಪಂಚ' ಪುಸ್ತಕ ಚರ್ಚೆ ಆರಂಭಕ್ಕೂ ಮುನ್ನ ಸಂಜೆ ಸುಮಾರು 5:15ರ ವೇಳೆಗೆ ಯುವ ಮೋರ್ಚಾ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದರು.
ಕಾರ್ಯಕ್ರಮವನ್ನು ನಿಲ್ಲಿಸುವಂತೆ ಅವರು ಈಗಾಗಲೇ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದರು. ಆದರೆ, ಸ್ಥಳಕ್ಕೆ ಬಂದ ತಕ್ಷಣವೇ ಪೊಲೀಸರು ಸುಮಾರು 50 ಮಂದಿಯನ್ನು ವಶಕ್ಕೆ ಪಡೆದರು.
ಈ ನಡುವೆ ಕಾರ್ಯಕ್ರಮದಲ್ಲಿ ಪುಸ್ತಕದ ಸಂಪಾದಕರಾದ ಅನಿರ್ಬನ್ ಭಟ್ಟಾಚಾರ್ಯ, ಬನಜ್ಯೋತ್ಸ್ನಾ ಲಹಿರಿ ಮತ್ತು ಶುದ್ಧಭ್ರತ ಸೇನ್‌ಗುಪ್ತಾ ಅವರು ಉಮರ್ ಖಾಲಿದ್ ಜೊತೆಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಜೈಲಿನಿಂದ ಖಾಲಿದ್ ಬರೆದ ಲೇಖನಗಳು ಹಾಗೂ ಅವರ ಬಗ್ಗೆ ಸ್ನೇಹಿತರು ಮತ್ತು ಕುಟುಂಬದವರು ಬರೆದ ಬರಹಗಳನ್ನು ಈ ಪುಸ್ತಕ ಒಳಗೊಂಡಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಜಾನಕಿ ನಾಯರ್ ಮತ್ತು ನಟ-ನಿರ್ಮಾಪಕ ಪ್ರಕಾಶ್ ರಾಜ್ ಭಾಗವಹಿಸಿದ್ದರು.
ಖಾಲಿದ್ ಅವರ ದೀರ್ಘ ಬಂಧನವು ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಪ್ರತಿಫಲನವಾಗಿದೆ ಎಂದು ಗುಹಾ ಅಭಿಪ್ರಾಯಪಟ್ಟರು.
ಇದೇ ವೇಳೆ, ಪ್ರಕಾಶ್ ರಾಜ್ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವಾಗ, ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸ್ವಾತಂತ್ರ್ಯದ ಕುರಿತಾಗಿ ತಮ್ಮ ನಿಲುವು ವ್ಯಕ್ತಪಡಿಸಿದರು.