ಬೆಂಗಳೂರು: ನಗರದಲ್ಲಿ ಬುಧವಾರ ಸಂಜೆ ಸುರಿದ ಭಾರೀ ಮಳೆ ಮತ್ತು ಬಿರುಗಾಳಿಗೆ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದುಬಿದ್ದು ಘೋರ ದುರಂತ ಸಂಭವಿಸಿದೆ.
ಘಟನೆಯಲ್ಲಿ 6 ವರ್ಷದ ಮಗು ಸೇರಿ ಒಟ್ಟು 7 ಮಂದಿ ದಾರುಣ ಸಾವನ್ನಪ್ಪಿದ್ದು, ಮೃತಪಟ್ಟವರ ಅಧಿಕೃತ ಮಾಹಿತಿಯನ್ನು ಸರ್ಕಾರ ಬಿಡುಗಡೆ ಮಾಡಿದೆ.
ದುರ್ಘಟನೆಯಲ್ಲಿ ಬೆಂಗಳೂರು ಮೂಲದವರು ಮಾತ್ರವಲ್ಲದೆ, ಕೇರಳದ ಪ್ರವಾಸಿಗರು ಹಾಗೂ ಅಂತರರಾಜ್ಯ ಕಾರ್ಮಿಕರು ದಾರುಣ ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ಜೆಸಿ ನಗರದ ಮೊಹಮ್ಮದ್ ಅಬ್ದುಲ್ (52), ಡಿ.ಜೆ.ಹಳ್ಳಿಯ ಫಯಾಜ್ ಅಹ್ಮದ್ (39), ಕೆ.ಜೆ.ಹಳ್ಳಿಯ ಮುಸಾವಿರ್ ಬೇಗಂ (6), ಕೇರಳದ ಎರ್ನಾಕುಲಂನ ಸ್ಮಿತಾ (47), ಲತಾ (57), ಕಾರ್ ಸ್ಟಿಕ್ಕರಿಂಗ್ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ನಸೀಮುಲ್ಲಾ (19), ಉತ್ತರ ಪ್ರದೇಶದ ವ್ಯಾಪಾರಿ ಸಲಾವುದ್ದೀನ್ ಅನ್ಸಾರಿ (36) ಎಂದು ಗುರ್ತಿಸಲಾಗಿದೆ,
ನಿನ್ನೆ ಸಂಜೆ (ಏ.29) ಸುಮಾರು 5 ಗಂಟೆಯ ಸುಮಾರಿಗೆ ನಗರದಲ್ಲಿ ದಿಢೀರ್ ಗುಡುಗು ಸಹಿತ ಭಾರಿ ಮಳೆ ಮತ್ತು ಆಲಿಕಲ್ಲು ಮಳೆ ಆರಂಭವಾಯಿತು. ಮಳೆಯಿಂದ ತಪ್ಪಿಸಿಕೊಳ್ಳಲು ಪಾದಚಾರಿಗಳು ಮತ್ತು ಬೀದಿ ಬದಿಯ ವ್ಯಾಪಾರಿಗಳು ಬೌರಿಂಗ್ ಆಸ್ಪತ್ರೆಯ ಹಳೆಯ ಕಾಂಪೌಂಡ್ ಗೋಡೆಯ ಕೆಳಗೆ ಆಶ್ರಯ ಪಡೆದಿದ್ದರು.
ಮಳೆಯ ತೀವ್ರತೆಗೆ ದುರ್ಬಲವಾಗಿದ್ದ ಗೋಡೆಯು ಏಕಾಏಕಿ ಕುಸಿದುಬಿದ್ದಿತ್ತು, ಪರಿಣಾಮ ಗೋಡೆಯ ಕೆಳಗಿದ್ದವರು ಅವಶೇಷಗಳಡಿ ಸಿಲುಕಿಕೊಂಡರು. ಸ್ಥಳೀಯರು ಮತ್ತು ತುರ್ತು ಸೇವಾ ಸಿಬ್ಬಂದಿ ತಕ್ಷಣವೇ ರಕ್ಷಣಾ ಕಾರ್ಯ ನಡೆಸಿದರೂ, ಏಳು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅಲ್ಲದೆ, ತನಿಖೆ ನಡೆಸುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.