ಬೆಂಗಳೂರಿನಲ್ಲಿಂದು ಸಿಎಂ ಡಿ ಕೆ ಶಿವಕುಮಾರ್ 'ತ್ಯಾಜ್ಯ ಮುಕ್ತ ಬೆಂಗಳೂರು' ಅಭಿಯಾನಕ್ಕೆ ಚಾಲನೆ ನೀಡಿದರು.  
ರಾಜ್ಯ

'ಬೆಂಗಳೂರು ಸರ್ಕಾರದ ಆಸ್ತಿ ಅಲ್ಲ, ಜನರ ಆಸ್ತಿ, ಅದನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳಿ': 'ತ್ಯಾಜ್ಯದಿಂದ ಸ್ವಾತಂತ್ರ್ಯ' ಅಭಿಯಾನಕ್ಕೆ ಚಾಲನೆ ನೀಡಿದ CM ಡಿ ಕೆ ಶಿವಕುಮಾರ್-Video

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ನಿಗಮಗಳು, ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆ ಹಾಗೂ ಇತರೆ ಸರ್ಕಾರಿ ಸಂಸ್ಥೆಗಳ ಸಹಯೋಗದಲ್ಲಿ ಒಂದು ತಿಂಗಳ ಕಾಲ ಅಭಿಯಾನ ನಡೆಯಲಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಶನಿವಾರ ಬೆಂಗಳೂರಿನಲ್ಲಿ 'ತ್ಯಾಜ್ಯದಿಂದ ಸ್ವಾತಂತ್ರ್ಯ' ಅಭಿಯಾನಕ್ಕೆ ಚಾಲನೆ ನೀಡಿ, ನಗರ ಸ್ವಚ್ಛತೆಯನ್ನು ಸುಧಾರಿಸಲು ಹಲವು ಮಹತ್ವದ ಕ್ರಮಗಳನ್ನು ಘೋಷಿಸಿದರು. ಅಕ್ರಮವಾಗಿ ತ್ಯಾಜ್ಯ ಸುರಿಯುವ ವಾಹನಗಳನ್ನು ವಶಪಡಿಸಿಕೊಳ್ಳುವುದು, ಖಾಲಿ ನಿವೇಶನಗಳಿಗೆ ಕಠಿಣ ನಿಯಮ ಜಾರಿಗೊಳಿಸುವುದು ಹಾಗೂ ನಗರದ ಹಸಿರು ಹೊದಿಕೆಯನ್ನು ಹೆಚ್ಚಿಸಲು ಶೀಘ್ರದಲ್ಲೇ "ಐತಿಹಾಸಿಕ" ಯೋಜನೆ ಘೋಷಿಸುವುದಾಗಿ ಅವರು ತಿಳಿಸಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ನಿಗಮಗಳು, ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಹಾಗೂ ಇತರೆ ಸರ್ಕಾರಿ ಸಂಸ್ಥೆಗಳ ಸಹಯೋಗದಲ್ಲಿ ಒಂದು ತಿಂಗಳ ಕಾಲ ನಡೆಯಲಿರುವ ಈ ಅಭಿಯಾನದ ಉದ್ದೇಶ, ನಗರವನ್ನು ನಿರ್ಮಾಣ ಮತ್ತು ಕಟ್ಟಡ ಅವಶೇಷಗಳು, ಜಡ ತ್ಯಾಜ್ಯ ಹಾಗೂ ಇತರೆ ಕಸದ ರಾಶಿಗಳಿಂದ ಮುಕ್ತಗೊಳಿಸುವುದಾಗಿದೆ.

ಇಂದು ಬೆಳಗ್ಗೆ ಹೆಬ್ಬಾಳ ಜಂಕ್ಷನ್ ಸಮೀಪ ಗಾರೆ ತೊಟ್ಟಿಯಲ್ಲಿ ಮಣ್ಣು ಹೊತ್ತು ಅಭಿಯಾನಕ್ಕೆ ಸಿಎಂ ಡಿ ಕೆ ಶಿವಕುಮಾರ್ ಚಾಲನೆ ನೀಡಿದರು.

"ಬೆಂಗಳೂರು ಸರ್ಕಾರದ ಆಸ್ತಿ ಅಲ್ಲ. ಬೆಂಗಳೂರು ನಿಮ್ಮ ಆಸ್ತಿ. ನಿಮ್ಮ ಆಸ್ತಿಯನ್ನು ಕಾಪಾಡುವ ಉದ್ದೇಶದಿಂದಲೇ ಈ ಮಹತ್ವದ ಅಭಿಯಾನವನ್ನು ಆರಂಭಿಸಿದ್ದೇವೆ," ಎಂದು ಹೇಳಿದರು.

ಅಕ್ರಮ ತ್ಯಾಜ್ಯ ವಿಲೇವಾರಿಗೆ ಕಠಿಣ ಕ್ರಮ

ನಿರ್ಮಾಣ ಅವಶೇಷಗಳು ಹಾಗೂ ತ್ಯಾಜ್ಯವನ್ನು ಅಕ್ರಮವಾಗಿ ಸುರಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿರುವುದಾಗಿ ಸಿಎಂ ಹೇಳಿದರು.

ಅನುಮತಿ ಇಲ್ಲದೆ ನಿರ್ಮಾಣ ತ್ಯಾಜ್ಯವನ್ನು ಸುರಿದರೆ ಅಥವಾ ನಿಗದಿತ ಸ್ಥಳ ಹೊರತುಪಡಿಸಿ ಬೇರೆಡೆ ವಿಲೇವಾರಿ ಮಾಡಿದರೆ ಅಂತಹ ವಾಹನಗಳನ್ನು ವಶಪಡಿಸಿಕೊಳ್ಳಬೇಕು ಎಂದು ಅವರು ಸೂಚಿಸಿದರು.

ಈ ಹಿಂದೆ ಸಿಸಿಟಿವಿ ಕಣ್ಗಾವಲು ಮತ್ತು ನೊಟೀಸ್ ಗಳಿಂದ ಸುಮಾರು 15 ದಿನಗಳ ಕಾಲ ಅಕ್ರಮ ತ್ಯಾಜ್ಯ ವಿಲೇವಾರಿ ನಿಯಂತ್ರಣಕ್ಕೆ ಬಂದಿತ್ತಾದರೂ, ಬಳಿಕ ಮತ್ತೆ ಉಲ್ಲಂಘನೆಗಳು ಆರಂಭವಾಗಿವೆ ಎಂದು ಅವರು ಹೇಳಿದರು.

ಖಾಲಿ ನಿವೇಶನಗಳಿಗೆ ಹೊಸ ನಿಯಮ

ಖಾಲಿ ನಿವೇಶನಗಳ ನಿರ್ವಹಣೆ ಕುರಿತು ಮಾತನಾಡಿದ ಡಿ ಕೆ ಶಿವಕುಮಾರ್, ಬಡಾವಣೆ ಅಭಿವೃದ್ಧಿ ಪ್ರಾಧಿಕಾರ (BDA) ಹಾಗೂ ನಗರ ನಿಗಮಗಳ ನಿವೇಶನ ಮಾಲೀಕರು ಐದು ವರ್ಷಗಳೊಳಗೆ ಮನೆ ನಿರ್ಮಿಸಬೇಕು ಹಾಗೂ ಅಷ್ಟರೊಳಗೆ ನಿವೇಶನವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಈಗಾಗಲೇ ಸೂಚಿಸಲಾಗಿದೆ ಎಂದರು.

ಐದು ವರ್ಷಗಳೊಳಗೆ ಮನೆ ನಿರ್ಮಿಸದಿದ್ದರೆ ದುಪ್ಪಟ್ಟು ತೆರಿಗೆ ವಿಧಿಸುವುದು ಅಥವಾ ನಿವೇಶನವನ್ನು ಸರ್ಕಾರಕ್ಕೆ ವಾಪಸ್ ಪಡೆಯುವಂತಹ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಅವರು ಹೇಳಿದರು.

ಖಾಲಿ ನಿವೇಶನಗಳನ್ನು ಕೇವಲ ಹೂಡಿಕೆಯಾಗಿ ಉಳಿಸಿಕೊಳ್ಳಬಾರದು ಎಂದು ಮನವಿ ಮಾಡಿದ ಅವರು, ಸಣ್ಣ ಮನೆ ಆದರೂ ಕಟ್ಟಿಕೊಳ್ಳಿ. ನಂತರ ಬೇಕಾದರೆ ಅದನ್ನು ಕೆಡವಿ ದೊಡ್ಡ ಮನೆ ಕಟ್ಟಬಹುದು. ಆದರೆ ಕೇವಲ ಹೂಡಿಕೆಯಾಗಿ ಖಾಲಿ ಬಿಟ್ಟರೆ ಅಲ್ಲಿ ಉಂಟಾಗುವ ಸ್ವಚ್ಛತೆ ಮತ್ತು ಇತರ ಸಮಸ್ಯೆಗಳಿಗೆ ಸರ್ಕಾರವನ್ನು ಹೊಣೆ ಮಾಡಲಾಗುವುದಿಲ್ಲ ಎಂದರು.

ಆಗಸ್ಟ್ 15ರೊಳಗೆ ಖಾಸಗಿ ಖಾಲಿ ನಿವೇಶನಗಳ ಸ್ವಚ್ಛತೆ ಕಡ್ಡಾಯ

ಖಾಸಗಿ ಖಾಲಿ ನಿವೇಶನಗಳ ಮಾಲೀಕರು ಆಗಸ್ಟ್‌ 15ರೊಳಗೆ ತಮ್ಮ ಜಾಗದಲ್ಲಿರುವ ಕಸ, ಕಟ್ಟಡ ಅವಶೇಷಗಳು ಹಾಗೂ ಬೆಳೆದಿರುವ ಪೊದೆಗಳನ್ನು ತೆರವುಗೊಳಿಸಬೇಕು ಎಂದು ಸೂಚಿಸಲಾಗಿದೆ. ಗಡುವಿನೊಳಗೆ ಸ್ವಚ್ಛಗೊಳಿಸದಿದ್ದರೆ ಸಂಬಂಧಿತ ನಿಗಮವೇ ಸ್ವಚ್ಛತೆ ನಡೆಸಿ, ಅದರ ವೆಚ್ಚವನ್ನು ಮಾಲೀಕರಿಂದ ವಸೂಲಿ ಮಾಡುವುದರ ಜೊತೆಗೆ ನಿಯಮಾನುಸಾರ ದಂಡವೂ ವಿಧಿಸಲಾಗುತ್ತದೆ.

'ಹಸಿರು ಬೆಂಗಳೂರು'ಗೆ ಐತಿಹಾಸಿಕ ಘೋಷಣೆ

ನಗರದ ಹಸಿರು ಹೊದಿಕೆಯನ್ನು ಹೆಚ್ಚಿಸುವ ಕುರಿತು ಸರ್ಕಾರ ಮಹತ್ವದ ಯೋಜನೆ ರೂಪಿಸುತ್ತಿದೆ ಎಂದು ತಿಳಿಸಿದ ಮುಖ್ಯಮಂತ್ರಿ, "ಹಸಿರೀಕರಣದ ಬಗ್ಗೆ ನನ್ನ ಮನಸ್ಸಿನಲ್ಲಿ ದೊಡ್ಡ ಯೋಜನೆಯಿದೆ. ಈ ಕಾರ್ಯಕ್ರಮದಲ್ಲಿ ಅದನ್ನು ಘೋಷಿಸುವುದಿಲ್ಲ. ಆದರೆ ನಮ್ಮ ಸರ್ಕಾರದ 100 ದಿನಗಳ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹಸಿರೀಕರಣಕ್ಕೆ ಸಂಬಂಧಿಸಿದ ಐತಿಹಾಸಿಕ ಘೋಷಣೆ ಮಾಡುತ್ತೇನೆ ಎಂದರು.

'ಟೀಕೆಗಳು ಬರುತ್ತವೆ, ಕೆಲಸವೇ ಉತ್ತರ'

ನಗರದ ಸ್ವಚ್ಛತೆ ಕುರಿತು ವ್ಯಕ್ತವಾಗುತ್ತಿರುವ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಟೀಕೆಗಳು ಸದಾ ಇರುತ್ತವೆ. ಆದರೆ ನಮ್ಮ ಕೆಲಸ ಶಾಶ್ವತವಾಗಿರುತ್ತದೆ. ಕೆಲಸ ಪೂರ್ಣಗೊಂಡ ಬಳಿಕ ಟೀಕೆಗಳು ತಾನಾಗಿಯೇ ನಿಲ್ಲುತ್ತವೆಎಂದರು.

ಅಧಿಕಾರಿಗಳ ಮೇಲಿನ ಹಲ್ಲೆ ಸಹಿಸುವುದಿಲ್ಲ

ಶಿವಾಜಿನಗರದಲ್ಲಿ ನಡೆದ ಅಧಿಕಾರಿಗಳ ಮೇಲಿನ ಹಲ್ಲೆಯನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವುದು ಸರ್ಕಾರ, ಶಾಸಕರು ಹಾಗೂ ಸಚಿವರ ಮೇಲಿನ ಹಲ್ಲೆಯಷ್ಟೇ ಗಂಭೀರ. ಇಂತಹ ಗೂಂಡಾಗಿರಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಪಾದಚಾರಿ ಮಾರ್ಗ ತೆರವು, ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ

ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸುವ ನಿರ್ಧಾರವನ್ನು ಸರ್ವಪಕ್ಷ ಶಾಸಕರೊಂದಿಗೆ ಚರ್ಚಿಸಿ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಅವರು, ಬೀದಿ ವ್ಯಾಪಾರಿಗಳಿಗೆ ಪ್ರತ್ಯೇಕವಾಗಿ ನಿಗದಿತ ಸ್ಥಳಗಳನ್ನು ಒದಗಿಸಲಾಗುವುದು ಎಂದರು.

ಬೀದಿ ವ್ಯಾಪಾರಿಗಳು ಇರಬೇಕು ಅಥವಾ ಇರಬಾರದು ಎಂದು ನಾನು ಹೇಳುತ್ತಿಲ್ಲ. ಆದರೆ ಪಾದಚಾರಿಗಳು ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ವ್ಯಾಪಾರ ನಡೆಸಲು ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದರು.

1,616 ಸ್ಥಳಗಳಲ್ಲಿ 22,730 ಮೆಟ್ರಿಕ್ ಟನ್ ತ್ಯಾಜ್ಯ ತೆರವು

ಈ ಅಭಿಯಾನದಲ್ಲಿ ಜಿಬಿಎ ವ್ಯಾಪ್ತಿಯ ಐದು ನಗರ ನಿಗಮಗಳು, ಬಿಎಸ್‌ಡಬ್ಲ್ಯುಎಂಎಲ್, ಬೆಂಗಳೂರು ಜಲಮಂಡಳಿ, ಬೆಸ್ಕಾಂ, ಬಿಎಂಆರ್‌ಸಿಎಲ್, ಭಾರತೀಯ ರೈಲ್ವೆ, ಕೆ-ರೈಡ್, ಎನ್‌ಎಚ್‌ಎಐ, ಬಿಡಿಎ, ಕೆಐಎಡಿಬಿ ಸೇರಿದಂತೆ ಹಲವು ಸಂಸ್ಥೆಗಳು ಭಾಗವಹಿಸಲಿವೆ.

ನಗರದ 1,616 ಸ್ಥಳಗಳಲ್ಲಿ ಒಟ್ಟು 22,730 ಮೆಟ್ರಿಕ್ ಟನ್ ನಿರ್ಮಾಣ ತ್ಯಾಜ್ಯ ಹಾಗೂ ಇತರೆ ಕಸ ಪತ್ತೆಯಾಗಿದ್ದು, ಅದನ್ನು ತೆರವುಗೊಳಿಸಲು 70 ಟಿಪ್ಪರ್‌ಗಳನ್ನು ನಿಯೋಜಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಏರ್ಪೋರ್ಟ್ to ಸೆಮಿಕಂಡಕ್ಟರ್‌, ಆಂಧ್ರಕ್ಕೆ ಬಂಪರ್ ಗಿಫ್ಟ್: ವಿಮಾನ ನಿಲ್ದಾಣ ಉದ್ಘಾಟನೆ ಸೇರಿ 17,900 ಕೋಟಿ ರೂ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಕಿಶ್ತ್ವಾರ್ ನಲ್ಲಿ ಮೇಘಸ್ಫೋಟ: ಭಾರಿ ಮಳೆ-ಪ್ರವಾಹ, ವ್ಯಾಪಕ ಹಾನಿ, ಹೆದ್ದಾರಿ ಬಂದ್

'ಇತರರ ಪ್ರಭಾವಕ್ಕೆ ಒಳಗಾಗಿ ಹಾಗೆ ಮಾತನಾಡಿದೆ, ಕ್ಷಮಿಸಿ': ದೆಹಲಿ ಪ್ರತಿಭಟನೆಯಲ್ಲಿ PM ಮೋದಿ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ ಬಾಲಕಿ-Video

'ನನ್ನ ಜೊತೆಗೆ ತಾಯಿಯನ್ನೂ ನಿಂದಿಸಿದರು, ಆದರೂ 'ನಮ್ಮ ದಾರಿತಪ್ಪಿದ ಮಕ್ಕಳನ್ನು' ಕ್ಷಮಿಸಬೇಕು: ಮತ್ತೊಂದು ವಿಡಿಯೊ ಹಂಚಿಕೊಂಡ PM ಮೋದಿ'-Video

My friend, ಸ್ವಲ್ಪ ಜವಾಬ್ದಾರಿ ತೆಗೆದುಕೊಳ್ಳಿ: ಪ್ರಧಾನಿ ಮೋದಿಯ ಹೊಸ ವಿಡಿಯೋ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಕಿಡಿ! Video