ಬೆಂಗಳೂರು: ಬಹುನಿರೀಕ್ಷಿತ ಡಾ.ಕೆ.ಶಿವರಾಮ ಕಾರಂತ ಬಡಾವಣೆಯ ನಿವೇಶನಗಳಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಅಂತಿಮವಾಗಿ ಆನ್‌ಲೈನ್ ಅರ್ಜಿ ಆಹ್ವಾನಿಸಲು ಸಿದ್ಧವಾಗಿದೆ. ಅದರಂತೆ, ದಶಕಗಳ ವಿಳಂಬದ ಬಳಿಕ ಶಿವರಾಮ ಕಾರಂತ ಬಡಾವಣೆಯ ನಿವೇಶನಗಳಿಗೆ ಆಗಸ್ಟ್ 5, 2026 ರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅದೇ ದಿನ ಭೂಮಿ ನೀಡಿದ ರೈತರಿಗೆ ಸಿಎಂ ಡಿ.ಕೆ.ಶಿವಕುಮಾರ್ ಅವರು ಸಾಂಕೇತಿಕವಾಗಿ ನಿವೇಶನ ಹಂಚಿಕೆ ಮಾಡಲಿದ್ದಾರೆ. ಹಾಗಾಗಿ, ಸೈಟ್ ಬೆಲೆ ಎಷ್ಟು? ಯಾರಿಗೆ ಎಷ್ಟು ಸೈಟ್? ಅರ್ಜಿ ಪ್ರಕ್ರಿಯೆ ಹೇಗೆ? ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ:
ಎಲ್ಲಿದೆ ಶಿವರಾಮ ಕಾರಂತ ಬಡಾವಣೆ?
ಡಾ. ಕೆ. ಶಿವರಾಮ ಕಾರಂತ ಬಡಾವಣೆ ಎನ್ನುವುದು BDA ಉತ್ತರ ಬೆಂಗಳೂರಿನಲ್ಲಿ ನಿರ್ಮಿಸುತ್ತಿರುವ ಅತಿ ದೊಡ್ಡ ವಸತಿ ಬಡಾವಣೆ ಯೋಜನೆಗಳಲ್ಲಿ ಒಂದಾಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಶಿವರಾಮ ಕಾರಂತ ಅವರ ಹೆಸರನ್ನಿಡಲಾಗಿರುವ ಈ ಬಡಾವಣೆಯು ಸರಿಸುಮಾರು 3,069 ಎಕರೆಗಿಂತಲೂ ಹೆಚ್ಚು ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಆದರೆ, ಆರಂಭದಿಂದಲೂ ಅಂದರೆ 2008ರಿಂದಲೂ ಬಡಾವಣೆಯು ನಿಯಮಬಾಹಿರ ಡಿನೋಟಿಫಿಕೇಷನ್, ಅಕ್ರಮ ಭೂಸ್ವಾಧೀನ ಮತ್ತು ರೈತರ ಹೋರಾಟಗಳ ಸುತ್ತ ಸುತ್ತುತ್ತದೆ. ಹಾಗಾಗಿ, ಸದ್ಯ ನ್ಯಾಯಾಲಯದ ಉಸ್ತುವಾರಿಯಲ್ಲಿ ಸೈಟ್ ಗಳ ಮಾರಾಟ ಹಾಗೂ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ನಡೆಯುತ್ತಿದೆ.
ಮುಂದುವರೆದು, ಈ ಬಡಾವಣೆಯಲ್ಲಿ ಒಟ್ಟು 18,000 ನಿವೇಶನಗಳನ್ನು ಭೂಮಿ ನೀಡಿದ ರೈತರಿಗೆ ಮೀಸಲಿಡಲಾಗಿದೆ. ಕಂದಾಯ ನಿವೇಶನದಾರರಿಗೆ 3,200 ಹಾಗೂ ಸಾಮಾನ್ಯ ಸಾರ್ವಜನಿಕರಿಗೆ 2,500 ನಿವೇಶನಗಳನ್ನು ಹಂಚಲು ನಿರ್ಧರಿಸಲಾಗಿದೆ. ಇನ್ನು 80 ಮತ್ತು 100 ಅಡಿ ರಸ್ತೆಯಲ್ಲಿರುವ 140 ನಿವೇಶನಗಳನ್ನು ಹರಾಜು ಮಾಡಲಾಗುತ್ತದೆ. ಅದರಲ್ಲೂ, ಈ ಬಡಾವಣೆಯಲ್ಲಿ 30x40 ಅಳತೆಯ ಸೈಟ್‌ಗಳೇ ಹೆಚ್ಚಾಗಿವೆ.
ಬೆಲೆ ₹4900 ಇದ್ದದ್ದು ಈಗ ₹6000
2023ರಲ್ಲಿ ಬಿಡಿಎ ಪ್ರತಿ ಚದರ ಅಡಿಗೆ ₹4900 ದರ ಘೋಷಿಸಿತ್ತು. ಇದೀಗ ₹1100 ಹೆಚ್ಚಿಸಿ ₹6000ಕ್ಕೆ ಪರಿಷ್ಕರಿಸಲಾಗಿದೆ. ಇದರಿಂದ 30x40 ಅಂದರೆ 1200 ಚದರ ಅಡಿ ಸೈಟ್ ಬೆಲೆ ₹59 ಲಕ್ಷ ಇದ್ದದ್ದು ಈಗ ₹72 ಲಕ್ಷಕ್ಕೆ ಏರಿಕೆಯಾಗಿದೆ. ಕಳೆದ 3 ವರ್ಷಗಳಿಂದ ಬಡಾವಣೆ ಸಿದ್ಧವಾಗಿದ್ದರೂ ಹಂಚಿಕೆ ವಿಳಂಬವಾದ ಕಾರಣ ದರ ಹೆಚ್ಚಿಸಲಾಗಿದೆ ಎನ್ನಾಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಈ ಬಾರಿ ಅರ್ಜಿ ಪ್ರಕ್ರಿಯೆ ಸಂಪೂರ್ಣ ಆನ್‌ಲೈನ್ ಆಗಿದೆ. ಯಾರೂ BDA ಕಚೇರಿಗೆ ಹೋಗುವ ಅಗತ್ಯವಿಲ್ಲ. ಹಾಗಾಗಿ, ಅರ್ಜಿದಾರರು BDA ಅಧಿಕೃತ ಪೋರ್ಟಲ್ bdakarnataka.in ಅಥವಾ ಕಾರಂತ ಬಡಾವಣೆಗೆ ಮೀಸಲಿಟ್ಟ dsklbda.karnataka.gov.in/jcc/ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ ಎಷ್ಟು?
ಅರ್ಜಿ ಶುಲ್ಕವಾಗಿ ಸಾಮಾನ್ಯ ಮತ್ತು OBC ವರ್ಗದವರು 1000 ರೂಪಾಯಿ ಪಾವತಿಸಬೇಕು. SC ST ವರ್ಗದವರಿಗೆ 500 ರೂಪಾಯಿ. ಇದರ ಜೊತೆಗೆ 2000 ರೂಪಾಯಿ ಆರಂಭಿಕ ನೋಂದಣಿ ಠೇವಣಿ ಕೂಡ ಕಡ್ಡಾಯ. ಸೈಟ್ ಸಿಗದಿದ್ದರೆ ಈ ಹಣವನ್ನು ವಾಪಸ್ ನೀಡಲಾಗುತ್ತದೆ.