ಬೆಂಗಳೂರು: ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಕಳೆದ 35 ವರ್ಷಗಳ ಲೆಕ್ಕಪರಿಶೋಧನೆ (ಆಡಿಟ್) ನಡೆಸದಿರುವ ವಿಚಾರಕ್ಕೆ ಸಂಬಂಧಿಸದಂತೆ ಅಧಿಕಾರಿಗಳನ್ನು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ತೀವ್ರ ತರಾಟೆಗೆ ತೆಗೆದುಕೊಂಡರು.
ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಭಿವೃದ್ಧಿ ಯೋಜನೆ ರೂಪಿಸಿದ ಬಳಿಕ ಮೂಲ ಅಂದಾಜು ಮೊತ್ತವನ್ನು ಬದಲಾಯಿಸಬೇಕಾದರೆ ಸೂಕ್ತ ಕಾರಣಗಳೊಂದಿಗೆ ಮಂಡಳಿಯ ಅನುಮೋದನೆ ಪಡೆಯಬೇಕು. ಬಳಿಕ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ಚಿಕ್ಕಸಂಗಮದಲ್ಲಿ ಕಲ್ಯಾಣ ಮಂಟಪ ಹಾಗೂ ವೇದ ಪಾಠಶಾಲೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ರೂ.24.98 ಕೋಟಿ ಅನುದಾನ ಕೋರಲಾಗಿದೆ. ಈ ಸಂಬಂಧ ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಕೂಡಲಸಂಗಮ ಅಭಿವೃದ್ಧಿ ಮಂಡಳಿ 2005ರಲ್ಲಿ ಸ್ಥಾಪನೆಯಾದರೂ, 2023ರವರೆಗೆ ಯಾವುದೇ ಮಹತ್ವದ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಿರಲಿಲ್ಲ. ನಂತರ ಸಚಿವ ಸಂಪುಟ ರೂ.744 ಕೋಟಿ ಮೌಲ್ಯದ ವಿವಿಧ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದು, ಇದುವರೆಗೆ ರೂ.480 ಕೋಟಿ ವೆಚ್ಚ ಮಾಡಲಾಗಿದೆ. ಬಾಕಿ ಇರುವ 17 ಸ್ಮಾರಕಗಳ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಸವಕಲ್ಯಾಣ ಕಾಮಗಾರಿಗಳ ವಿಳಂಬಕ್ಕೆ ಅಸಮಾಧಾನ
ಮುಖ್ಯಮಂತ್ರಿಯವರೊಂದಿಗೆ ಬಸವಕಲ್ಯಾಣಕ್ಕೆ ಭೇಟಿ ನೀಡಿದ್ದ ವೇಳೆ ಅಧಿಕಾರಿಗಳು ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಭರವಸೆ ನೀಡಿದ್ದರು. ಆದರೆ, ಈಗ ಮತ್ತಷ್ಟು ಕಾಲಾವಕಾಶ ಕೇಳುತ್ತಿರುವುದು ಒಪ್ಪಲಾಗದು. ಬಾಕಿ ಇರುವ ಎಲ್ಲ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಬೇಕು ಎಂದು ಬೀದರ್ ಜಿಲ್ಲಾಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬನವಾಸಿ ಅಭಿವೃದ್ಧಿಗೆ ರೂ.50 ಕೋಟಿ ಯೋಜನೆ
ಐತಿಹಾಸಿಕ ಬನವಾಸಿ ಅಭಿವೃದ್ಧಿಗಾಗಿ ₹50 ಕೋಟಿ ವೆಚ್ಚದ ಸಮಗ್ರ ಯೋಜನೆ ಸಿದ್ಧಪಡಿಸಲಾಗಿದೆ. ಮಂಡಳಿಯ ಅನುಮೋದನೆ ಪಡೆದ ಬಳಿಕ ಅದನ್ನು ಮುಖ್ಯಮಂತ್ರಿಗಳ ಮುಂದಿಡಲಾಗುವುದು ಎಂದು ಹೇಳಿದರು.
ಅನುಮತಿ ಇಲ್ಲದೆ ರೂ.2.18 ಕೋಟಿ ವೆಚ್ಚ; ಅಧಿಕಾರಿಗಳಿಗೆ ತರಾಟೆ
ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಯಾವುದೇ ಅನುಮೋದನೆ ಇಲ್ಲದೆ ರೂ.2.18 ಕೋಟಿ ವೆಚ್ಚ ಮಾಡಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಡಿಸಿಎಂ, ವೆಚ್ಚದ ಸಂಪೂರ್ಣ ವಿವರ ಸಲ್ಲಿಸುವಂತೆ ಹಾಗೂ ಮುಂದಿನ ಅಭಿವೃದ್ಧಿ ಕಾಮಗಾರಿಗಳ ಕುರಿತು ಪ್ರಸ್ತಾವನೆ ನೀಡುವಂತೆ ನಿರ್ದೇಶನ ನೀಡಿದರು.
ದೇವಾಲಯಗಳ ಒತ್ತುವರಿ ತೆರವಿಗೆ ಮೂರು ತಿಂಗಳಲ್ಲಿ ಸಮೀಕ್ಷೆ
ಧಾರ್ಮಿಕ ಪರಿಷತ್ ಸಭೆಯ ಅಧ್ಯಕ್ಷತೆ ವಹಿಸಿದ ಡಾ. ಪರಮೇಶ್ವರ್, ಮುಜರಾಯಿ ದೇವಾಲಯಗಳ ಆಸ್ತಿಗಳ ಮೇಲಿನ ಒತ್ತುವರಿಯನ್ನು ತೆರವುಗೊಳಿಸಲು ಮೂರು ತಿಂಗಳೊಳಗೆ ಸಮಗ್ರ ಸಮೀಕ್ಷೆ ನಡೆಸಿ ಕ್ರಮ ಕೈಗೊಳ್ಳುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ಸೂಚಿಸಿದರು.
'ಎ' ಮತ್ತು 'ಬಿ' ವರ್ಗದ ದೇವಾಲಯಗಳ ನಿಧಿಯನ್ನು ಅವುಗಳ ಅಭಿವೃದ್ಧಿಗೆ ಹಾಗೂ ಭೂಮಿ ಖರೀದಿಸಲು ಬಳಸಬೇಕು. ಖರೀದಿಸುವ ಭೂಮಿ ಶಾಶ್ವತವಾಗಿ ದೇವಾಲಯದ ಆಸ್ತಿಯಾಗಿರುತ್ತದೆ ಎಂದು ಹೇಳಿದರು.
ಅದೇ ವೇಳೆ, 'ಸಿ' ವರ್ಗದ ದೇವಾಲಯಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಯಾವುದೇ ಸಂಘ-ಸಂಸ್ಥೆಗಳಿಗೆ ದತ್ತು ನೀಡಬಾರದು. ಬಳಿಕ ಅವು ದೇವಾಲಯದ ಆಸ್ತಿಗಳ ಮೇಲೆ ಹಕ್ಕು ಸಾಧಿಸುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.