ಸಿಎಂ ಡಿಕೆ ಶಿವಕುಮಾರ್ 
ರಾಜ್ಯ

ಅತಿವೃಷ್ಟಿ, ಅನಾವೃಷ್ಟಿ ಬಗ್ಗೆ ವರದಿ ನೀಡಲು ನೂತನ ಸಚಿವರಿಗೆ ಸೂಚನೆ: ಸಿದ್ದುಗೆ ಯಾವುದೇ ಅಸಮಾಧಾನವಿಲ್ಲ, ತಮಿಳುನಾಡಿಗೆ ಕಾನೂನು ಮೂಲಕವೇ ಉತ್ತರ- ಸಿಎಂ ಡಿಕೆ ಶಿವಕುಮಾರ್

ಸುಮಾರು 2 ಗಂಟೆಗಳ ಕಾಲ ಸಚಿವ ಸಂಪುಟದ ನೂತನ ಸದಸ್ಯರಿಗೆ ಮಾರ್ಗದರ್ಶನ ನೀಡಿದ್ದೇವೆ. ನಮ್ಮಲ್ಲಿ ಸಾಕಷ್ಟು ಹಿರಿಯ ನಾಯಕರಿದ್ದರೂ ನಾವು ಈ ಬಾರಿ ಹೊಸ ಮುಖಗಳಿಗೆ ಅವಕಾಶ ನೀಡಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಬೆಂಗಳೂರು: ಬುಧವಾರದಿಂದಲೇ ನೂತನ ಸಚಿವರುಗಳು ತಮಗೆ ಜವಾಬ್ದಾರಿ ವಹಿಸುವ ಜಿಲ್ಲೆಗಳಿಗೆ ಹೋಗಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಬಗ್ಗೆ ಅಲ್ಲಿನ ಸ್ಥಳಗಳಿಗೆ ಹೋಗಿ, ಪರಿಶೀಲನೆ ಮಾಡಬೇಕು. ನಂತರ ಕಂದಾಯ ಸಚಿವರಿಗೆ ವರದಿ ಸಲ್ಲಿಸಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ ಎಂದು ಸಿಎಂ ಡಿ ಕೆ ಶಿವಕುಮಾರ್ ಮಾಹಿತಿ ನೀಡಿದರು.

ವಿಧಾನಸೌಧದಲ್ಲಿ ಸೋಮವಾರ ರಾತ್ರಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ನಮ್ಮ ಮುಂದಿರುವ ಸವಾಲು, ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಬರಗಾಲ ಹಾಗೂ ಕಾವೇರಿ ಭಾಗದ ಪ್ರದೇಶದಲ್ಲಿ ನೀರಿನ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.

ಈಗ ತಾತ್ಕಾಲಿಕವಾಗಿ ಮಳೆಯಿಂದ ಸಮಸ್ಯೆ ನಿವಾರಣೆಯಾಗಿರಬಹುದು. ಭೀಕರವಾದ ಕಂಟಕ ಎದುರಾಗಿತ್ತು. ದೇವರ ಕೃಪೆಯಿಂದ ಇದು ಸಧ್ಯಕ್ಕೆ ನಿವಾರಣೆಯಾಗಿದೆ. ತಮಿಳುನಾಡಿಗೆ 3,50 ಕ್ಯೂಸೆಕ್ ನೀರು ಹರಿಸುವಂತೆ ಹೇಳಿದ್ದು, ನಾವು 30 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತಾಗಿದೆ. ಕೆಆರ್ ಎಸ್, ಹೇಮಾವತಿ ತುಂಬಿಲ್ಲ, ಒಳಹರಿವು ಹೆಚ್ಚಿದೆ. ಮಲೆನಾಡಿನಲ್ಲಿ ಮಳೆ ಬೀಳುತ್ತಿದ್ದು, ತುಂಗಭದ್ರಾಗೆ ಇನ್ನು ನೀರು ಬರಬೇಕು. ಆಲಮಟ್ಟಿಯಲ್ಲಿ ನೀರಿನ ಹರಿವು ಇದೆ. ಬರಗಾಲದ ಛಾಯೆ ಇನ್ನು ಇದೆ. ಮಳೆಯಿಂದಾಗಿ ಶಿವಮೊಗ್ಗ, ತೀರ್ಥಹಳ್ಳಿ ಭಾಗದಲ್ಲಿ ಅನಾಹುತಗಳು ಆಗಿವೆ. ನಾನು ವರದಿ ತರಿಸಿಕೊಂಡು ಪರಿಹಾರ ನೀಡಲಾಗುವುದು ಎಂದರು.

ಎಲ್ಲ ಪಕ್ಷದ ಜನಪ್ರತಿನಿಧಿಗಳನ್ನು ಕರೆದುಕೊಂಡು ಹೋಗಿ ಪರಿಶೀಲಿಸಲು ಸೂಚನೆ: ಸಚಿವ ಸಂಪುಟ ವಿಸ್ತರಣೆಯಾಗುವ ಹಿನ್ನೆಲೆಯಲ್ಲಿ ಸ್ಥಳೀಯ ನಾಯಕರಿಂದ ಪರಿಹಾರ ಘೋಷಣೆ ಮಾಡಿಸಲು ತೀರ್ಮಾನಿಸಿದ್ದೇವೆ. ಈಗಾಗಲೇ ಬೆಳಗಾವಿ, ಚಿತ್ರದುರ್ಗ, ಕಲಬುರ್ಗಿ ವಿಭಾಗಗಳಲ್ಲಿ ಸಭೆ ಮಾಡಿದ್ದು, ಮೈಸೂರು ವಿಭಾಗದ ಸಭೆಯನ್ನು ಶೀಘ್ರವೇ ಮಾಡಲಾಗುವುದು. ಎಲ್ಲರ ಸಲಹೆ ಪಡೆಯಲಾಗಿದ್ದು, ಕುಡಿಯುವ ನೀರಿನ ಉದ್ದೇಶಕ್ಕೆ ಪ್ರತಿ ವಿಧಾನಸಭೆಗೆ 1 ಕೋಟಿ ಅನುದಾನ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಹೋಗಿ ವರದಿ ನೀಡಬೇಕು. ನಂತರ ಸರ್ಕಾರ ತೀರ್ಮಾನ ಮಾಡಲಿದೆ. ಎಲ್ಲಾ ಪಕ್ಷದ ಜನಪ್ರತಿನಿಧಿಗಳನ್ನು ಕರೆದುಕೊಂಡು ಹೋಗಿ ಪರಿಶೀಲನೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಹೊಸ ಮುಖಗಳಿಗೆ ಅವಕಾಶ: ಸುಮಾರು 2 ಗಂಟೆಗಳ ಕಾಲ ಸಚಿವ ಸಂಪುಟದ ನೂತನ ಸದಸ್ಯರಿಗೆ ಮಾರ್ಗದರ್ಶನ ನೀಡಿದ್ದೇವೆ. ನಮ್ಮಲ್ಲಿ ಸಾಕಷ್ಟು ಹಿರಿಯ ನಾಯಕರಿದ್ದರೂ ನಾವು ಈ ಬಾರಿ ಹೊಸ ಮುಖಗಳಿಗೆ ಅವಕಾಶ ನೀಡಿದ್ದೇವೆ. ಇಂದು 19 ಸದಸ್ಯರು ಸಂಪುಟ ಸೇರ್ಪಡೆಯೊಂದಿಗೆ ವಿಸ್ತರಣೆಯಾಗಿದೆ. ನಮ್ಮಲ್ಲಿ ಅನೇಕ ಅರ್ಹರು ಇದ್ದರು. ನಮ್ಮಲ್ಲಿ ಅರ್ಹತೆ ಇಲ್ಲದವರು ಯಾರೂ ಇಲ್ಲ. ನಮ್ಮ ಪಕ್ಷ ತೀರ್ಮಾನ ಮಾಡಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ನಾನು ಹಾಗೂ ಪರಮೇಶ್ವರ್ ಅವರು ಬಂದಾಗ, ವೀರೇಂದ್ರ ಪಾಟೀಲ್ ಅವರು ಸಿಎಂ ಆಗಿದ್ದರು. ಆಗ ಬಂಗಾರಪ್ಪನವರು ಸಚಿವ ಸಂಪುಟದಲ್ಲಿ ಇರಲಿಲ್ಲ. ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್, ಲಕ್ಕಪ್ಪನವರು ಇರಲಿಲ್ಲ. ಎಸ್ ಎಂ ಕೃಷ್ಣ ಅವರ ಕಾಲದಲ್ಲಿ ಅಜೀಜ್ ಸೇಠ್ ಅವರು ಸಂಪುಟದಲ್ಲಿ ಸ್ಥಾನ ಪಡೆಯಲು ಆಗಿರಲಿಲ್ಲ. ಆಸೆ ಎಲ್ಲರಿಗೂ ಇರುತ್ತದೆ, ತಾಳ್ಮೆಯಿಂದ ಇದ್ದರೆ ನಾವು ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಅವಕಾಶ ನೀಡಲಾಗುವುದು. ನಾನು ಹಾಗೂ ಪರಮೇಶ್ವರ್ ಅವರು ನಮ್ಮ ಶಾಸಕರ ಜೊತೆ ಚರ್ಚೆ ಮಾಡುತ್ತೇವೆ. ಎಲ್ಲರಿಗೂ ಗೌರವ ನೀಡುತ್ತೇವೆ” ಎಂದು ವಿವರಿಸಿದರು.

ಮಹಿಳೆಯರಿಗೂ ಅವಕಾಶ ನೀಡುತ್ತೇವೆ: ಮಹಿಳೆಯರಿಗೆ ಸ್ಥಾನ ಸಿಕ್ಕಿಲ್ಲ ಎಂಬ ಪ್ರಶ್ನೆಯೂ ನಿಮ್ಮಲ್ಲಿ ಮೂಡಬಹುದು. ಆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಅದನ್ನು ನಾವು ಮಾಡುತ್ತೇವೆ. ನಮ್ಮ ಪಕ್ಷದ ಸಿದ್ಧಾಂತ ಮಹಿಳೆಗೆ ಆದ್ಯತೆ ನೀಡುವುದು. ಈ ಹಿಂದೆಯೂ ಮಹಿಳೆಯರು ಇದ್ದರು, ಈಗ ಮಹಿಳೆಗೆ ಉಪಸಭಾಪತಿ ಸ್ಥಾನ ನೀಡಿದ್ದೇವೆ. ಸಚಿವ ಸಂಪುಟದಲ್ಲೂ ಒಂದು ಸ್ಥಾನ ಮಹಿಳೆಯರಿಗೆ ನೀಡಲಾಗುವುದು” ಎಂದು ಭರವಸೆ ನೀಡಿದರು.

ಸಿದ್ದರಾಮಯ್ಯ ಅವರಿಗೆ ಯಾವುದೇ ಅಸಮಾಧಾನವಿಲ್ಲ: ಸಚಿವ ಸಂಪುಟ ವಿಸ್ತರಣೆಗೆ ಸಿದ್ದರಾಮಯ್ಯ ಅವರ ಗೈರಾಗಿದ್ದು, ಅವರಿಗೆ ಅಸಮಾಧಾನವಾಗಿದೆಯೇ ಎಂದು ಕೇಳಿದಾಗ, ಸಿದರಾಮಯ್ಯ ಅವರು ಸೇರಿ ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ. ಅವರ ಜನ್ಮದಿನದ ಅಂಗವಾಗಿ ಅನೇಕ ಅತಿಥಿಗಳು ಶುಭಕೋರುತ್ತಿದ್ದಾರೆ. ನಾನು ಶುಭ ಕೋರಿದ್ದೇನೆ. ನಾವೆಲ್ಲರೂ ಒಂದು ತಂಡ 139 ಶಾಸಕರೂ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಅವರು ಯಾಕೆ ಅಸಮಾಧಾನಗೊಳ್ಳುತ್ತಾರೆ? ನಾನು ಸೇರಿದಂತೆ ಎಲ್ಲರೂ ಸಿದ್ದರಾಮಯ್ಯನವರ ಕಡೆಯವರೆ. ನಾವು ಒಂದಾಗಿದ್ದೇವೆ, ಒಂದಾಗಿರುತ್ತೇವೆ, ಒಂದಾಗಿ ಹೋರಾಟ ಮಾಡುತ್ತೇವೆ. ನೀವುಗಳು ಹೊಸದಾಗಿ ಹುಡುಕುತ್ತಿದ್ದೀರಿ. ಅನೇಕರು ಅವರನ್ನು ಭೇಟಿ ಮಾಡುತ್ತಿರುತ್ತಾರೆ. ಸಚಿವ ಸ್ಥಾನ ಸಿಗದವರ ಜತೆಗೂ ಅವರು ಮಾತನಾಡುತ್ತಿರುತ್ತಾರೆ. ಅವರು ನಮ್ಮ ಪಕ್ಷದ ಕೆಲಸವನ್ನು ಮಾಡುತ್ತಿದ್ದಾರೆ” ಎಂದು ಪ್ರಶ್ನಿಸಿದರು.

“ಖಂಡಿತವಾಗಿ ಸಿದ್ದರಾಮಯ್ಯ ಜೊತೆಗೆ ಮಾತನಾಡಿದ್ದೇನೆ. ಒಟ್ಟು ಐದು ಬಾರಿ ಚರ್ಚೆ ಮಾಡಿದ್ದೇನೆ. ಹೈಕಮಾಂಡ್ ನಿಂದ ಬಂದ ಮಾರ್ಗದರ್ಶನವನ್ನು ನಾವು ಪಾಲಿಸುತ್ತೇವೆ ಎಂದು ತಿಳಿಸಿದರು.ಗಾಯತ್ರಿ ಅವರ ವಿಚಾರವಾಗಿ ಕೇಳಿದಾಗ, “ನಮ್ಮ ಪಕ್ಷದಲ್ಲಿ ಕೆಲವು ತಾಂತ್ರಿಕ ವಿಚಾರಗಳಿವೆ. ಅವರು ಇನ್ನು ಪ್ರಮಾಣವಚನ ಸ್ವೀಕರಿಸಬೇಕಾಗಿದೆ. ನಿಮಗೆ ಬಂದಿರುವ ಎಲ್ಲಾ ಪಟ್ಟಿ ಅಧಿಕೃತವಲ್ಲ. ನಾನು ಸಹಿ ಹಾಕಿ ರಾಜ್ಯಪಾಲರಿಗೆ ಕೊಟ್ಟ ಪಟ್ಟಿ ಮಾತ್ರ ಅಧಿಕೃತ. ಹೈಕಮಾಂಡ್ ನನಗೆ ತಿಳಿಸುವ ಪಟ್ಟಿ ಅಂತಿಮ. ನಮ್ಮಲ್ಲಿ ಕೆಲವು ಮಾಹಿತಿ ಲೀಕ್ ಮಾಡಿದ್ದು, ಅಂತಿಮವಲ್ಲ ಎಂದರು.

ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ತಮಿಳುನಾಡಿಗೆ, ಕಾನೂನು ಮೂಲಕವೇ ಉತ್ತರ: ತಮಿಳುನಾಡು ನ್ಯಾಯಾಲಯದ ಮೆಟ್ಟಿಲೇರಿರುವ ಬಗ್ಗೆ ಕೇಳಿದಾಗ, “ಕಾವೇರಿ ವಿಚಾರದಲ್ಲಿ ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಕಾನೂನು ತಜ್ಞರ ಜೊತೆ ಚರ್ಚೆ ಮಾಡಿ ಅವರಿಗೆ ಕಾನೂನು ಮೂಲಕ ಉತ್ತರ ನೀಡಲಾಗುವುದು. ಕಾವೇರಿ ವಿಚಾರದಲ್ಲಿ ತಮಿಳುನಾಡು ನ್ಯಾಯಾಲಯದ ಮೇಟ್ಟಿಲೇರಿದೆ ಎಂಬ ಮಾಹಿತಿ ಬಂದಿದೆ. ನಾನು ಅವರ ಹಕ್ಕನ್ನು ಪ್ರಶ್ನೆ ಮಾಡುವುದಿಲ್ಲ. ಆದರೆ ನಾನು ದೇಶದ ಕಾನೂನನ್ನು ಗೌರವಿಸಿದ್ದೇವೆ. ನಾವು ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ಪಡೆಯಬೇಕು ಎಂದು ತಕ್ಷಣವೇ ತೀರ್ಮಾನ ಮಾಡಲಿಲ್ಲ. ನಮಗೆ ಬಿಜೆಪಿ ಹಾಗೂ ಜೆಡಿಎಸ್ ಸಹಕಾರ ನೀಡಿವೆ. ಈ ವಿಚಾರದಲ್ಲಿ ಇಡೀ ಕರ್ನಾಟಕ ಒಗ್ಗಟ್ಟಾಗಿ ನಿಂತಿದೆ. ಭವಿಷ್ಯದಲ್ಲೂ ಅವರು ನಮ್ಮ ಜೊತೆ ನಿಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹೊಸ ಮುಖಗಳ ನಿರೀಕ್ಷೆ ಹುಸಿ; ಡಿಕೆಶಿ ಸಂಪುಟದಲ್ಲಿ ಹಿರಿಯರ ಪ್ರಾಬಲ್ಯ, ಅನುಭವಿಗಳಿಗೆ ಮಣೆ ಹಾಕಿದ ಹೈಕಮಾಂಡ್..!

ಸಚಿವ ಸಂಪುಟದಲ್ಲಿ ಬೆಂಗಳೂರು ಮೇಲುಗೈ; ಯಾದಗಿರಿ ಸೇರಿ 8 ಜಿಲ್ಲೆಗಳಿಗೆ ಸಿಗಲಿಲ್ಲ ಪ್ರಾತಿನಿಧ್ಯ..!

ಕಾವೇರಿ ನೀರು ಹಂಚಿಕೆ: ತಮಿಳುನಾಡು ಅರ್ಜಿಯನ್ನು ಸುಪ್ರೀಂನಲ್ಲಿ ಪ್ರಶ್ನಿಸಲು ಅಧಿಕಾರಿಗಳಿಗೆ ಸಚಿವ ರಾಮಲಿಂಗಾ ರೆಡ್ಡಿ ನಿರ್ದೇಶನ

ಹೈಕೋರ್ಟ್‌ನಿಂದ ಜೀವಾವಧಿ ಶಿಕ್ಷೆಗೆ ತಡೆ: ವಿನಯ್ ಕುಲಕರ್ಣಿ ಶಾಸಕ ಸ್ಥಾನ ಅನರ್ಹತೆ ರದ್ದು!

ಸಂಪುಟ ವಿಸ್ತರಣೆಯಲ್ಲಿ ಬಿಗ್ ಟ್ವಿಸ್ಟ್: ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 19 ಶಾಸಕರು; ಕೊನೆ ಕ್ಷಣದಲ್ಲಿ ಒಬ್ಬರಿಗೆ ಕೊಕ್!