ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯನ್ನು ಕೇವಲ ಸರ್ಕಾರಿ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೇ, ಜನರೇ ಭಾಗವಹಿಸುವ ಸಂಭ್ರಮದ ಹಬ್ಬವನ್ನಾಗಿ ಆಚರಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಇದೇ ಮೊದಲ ಬಾರಿಗೆ ‘ಫ್ರೀಡಂ ಹಬ್ಬ’ವನ್ನು ಆಯೋಜಿಸುತ್ತಿದೆ.
ಆಗಸ್ಟ್ 15ರಂದು ಬೆಳಗ್ಗೆ 11 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ವಿಧಾನಸೌಧ ಸುತ್ತಮುತ್ತ ದಿನಪೂರ್ತಿ ವಿವಿಧ ಸಾಂಸ್ಕೃತಿಕ, ಕಲಾತ್ಮಕ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ಕಾರ್ಯಕ್ರಮದ ವಿವರಗಳನ್ನು ಪ್ರಕಟಿಸಿದ ಸಚಿವರು, "ಸ್ವಾತಂತ್ರ್ಯ ದಿನವು ಪ್ರತಿಯೊಬ್ಬ ಭಾರತೀಯರ ಮನೆಯ ಮೊದಲ ಹಬ್ಬವಾಗಬೇಕು. ಇದೂವರೆಗೆ ಜನರು ಸರ್ಕಾರಿ ಕಾರ್ಯಕ್ರಮವನ್ನು ವೀಕ್ಷಕರಾಗಿ ಮಾತ್ರ ನೋಡುತ್ತಿದ್ದರು. ಆದರೆ, ಈ ಬಾರಿ ದೇಶದ ಹುಟ್ಟುಹಬ್ಬವನ್ನು ತಮ್ಮದೇ ಹಬ್ಬದಂತೆ ಆಚರಿಸಲು ಜನರಿಗೆ ವೇದಿಕೆ ಕಲ್ಪಿಸಲಾಗುತ್ತಿದೆ" ಎಂದು ಹೇಳಿದರು.
ಸುಮಾರು ರೂ.3ರಿಂದ ರೂ.5 ಕೋಟಿ ವೆಚ್ಚದಲ್ಲಿ ನಡೆಯಲಿರುವ ಈ ಹಬ್ಬದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ, ಗುಜರಾತಿ, ಹಿಂದಿ, ಒಡಿಯಾ ಸೇರಿದಂತೆ ವಿವಿಧ ಭಾಷಾ ಸಮುದಾಯಗಳು ಹಾಗೂ ಈಶಾನ್ಯ ಭಾರತದ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಜೊತೆಗೆ ಕೊಡಗು, ಮಂಗಳೂರು, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಸಾಂಸ್ಕೃತಿಕ ತಂಡಗಳೂ ಪಾಲ್ಗೊಳ್ಳಲಿವೆ.
ಪ್ರಮುಖ ಆಕರ್ಷಣೆಗಳು..
ಪೀಪಲ್ಸ್ ಪೆರೇಡ್ (ಜನರ ಮೆರವಣಿಗೆ):
ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು, ರೈತರು, ವಿಜ್ಞಾನಿಗಳು, ಸಶಸ್ತ್ರ ಪಡೆಗಳ ಸಿಬ್ಬಂದಿ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಫ್ರೀಡಂ ವಾಲ್:
200 ಅಡಿ ಉದ್ದದ ಸಾರ್ವಜನಿಕ ಕಲಾ ವೇದಿಕೆಯಲ್ಲಿ "ಸ್ವಾತಂತ್ರ್ಯ ಎಂದರೆ ನಿಮಗೆ ಏನು?" ಎಂಬ ಪ್ರಶ್ನೆಗೆ ನಾಗರಿಕರು ಬರೆಯಲು, ಚಿತ್ರ ಬಿಡಿಸಲು ಅವಕಾಶ.
ಫ್ರೀಡಂ ಪಾಥ್:
ಕರ್ನಾಟಕದ ವಿವಿಧ ಜಿಲ್ಲೆಗಳ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಪರಿಚಯಿಸುವ ವಿಶೇಷ ಪ್ರದರ್ಶನ. ಬೆಳಗಾವಿ, ಶಿವಪುರ, ಚಿತ್ರದುರ್ಗ ಸೇರಿದಂತೆ ಹಲವು ಪ್ರದೇಶಗಳ ಕೊಡುಗೆಯನ್ನು ಅನಾವರಣಗೊಳಿಸಲಾಗುತ್ತದೆ.
ಜರ್ನಿ ಆಫ್ ಫ್ರೀಡಂ:
ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟ್ಟಗಳನ್ನು ಮರುಸೃಷ್ಟಿಸುವ ವಾಕ್-ಥ್ರೂ ಮ್ಯೂಸಿಯಂ.
ಮಕ್ಕಳ ಮೇಳ:
ಮಕ್ಕಳಿಗಾಗಿ ಆಟಗಳು, ಕಥೆ ಹೇಳುವ ಕಾರ್ಯಕ್ರಮ, ಕಲಾ ಚಟುವಟಿಕೆಗಳು, ಕ್ರಿಯಾತ್ಮಕ ಕಾರ್ಯಾಗಾರಗಳು ಹಾಗೂ ಕುಟುಂಬ ಸಮೇತ ಪಾಲ್ಗೊಳ್ಳಬಹುದಾದ ವಿಶೇಷ ಕಾರ್ಯಕ್ರಮಗಳು.
120ಕ್ಕೂ ಹೆಚ್ಚು ಮಳಿಗೆಗಳು:
ಕರಕುಶಲ, ಸಾವಯವ ಉತ್ಪನ್ನಗಳು, ಆಟಿಕೆಗಳು, ಜವಳಿ, ಜೀವನಶೈಲಿ ಉತ್ಪನ್ನಗಳು ಹಾಗೂ ವಿವಿಧ ಆಹಾರ ಮಳಿಗೆಗಳು ದಿನಪೂರ್ತಿ ಹಬ್ಬದ ವಾತಾವರಣ ನಿರ್ಮಿಸಲಿವೆ.
ಕಾರ್ಯಕ್ರಮದ ಸಮಾರೋಪವಾಗಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಎಂ.ಡಿ. ಪಲ್ಲವಿ, ಬ್ರೂಸ್ ಲೀ ಮಣಿ, ರಘು ದೀಕ್ಷಿತ್ ಸೇರಿದಂತೆ ಖ್ಯಾತ ಕಲಾವಿದರ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಆಕರ್ಷಕ ಪಟಾಕಿ ಪ್ರದರ್ಶನದೊಂದಿಗೆ ‘ಫ್ರೀಡಂ ಹಬ್ಬ’ ಮುಕ್ತಾಯಗೊಳ್ಳಲಿದೆ.
ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಾಗರಿಕರು ವಿಶೇಷ ವೆಬ್‌ಸೈಟ್ ಹಾಗೂ ಸಹಾಯವಾಣಿಯ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಇದರ ವಿವರಗಳನ್ನು ಇನ್ನೆರಡು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.