ಕರ್ನಾಟಕದ ಮೇಕೆದಾಟು, ಕೇರಳದ ಮುಲ್ಲಪೆರಿಯಾರ್ ಯೋಜನೆಗಳಿಗೆ ತಮಿಳುನಾಡಿನ ವಿರೋಧ ವಿಧಾನಸಭೆಯಲ್ಲಿ ರಾಜ್ಯಪಾಲ ಆರ್ಲೇಕರ್ 
ರಾಜ್ಯ

ಮೇಕೆದಾಟು ಯೋಜನೆ: ಕರ್ನಾಟಕಕ್ಕೆ ಏಕೆ ಬೇಕು? ತಮಿಳುನಾಡು ವಿರೋಧವೇಕೆ? : ಮುಂದಿನ ಹಾದಿಯೇನು?

ಈ ಯೋಜನೆ ಪರಿಸರದ ದೃಷ್ಟಿಯಿಂದ ಅತಿಸೂಕ್ಷ್ಮ ಪ್ರದೇಶವಾದ ಕಾವೇರಿ ವನ್ಯಜೀವಿ ಅಭಯಾರಣ್ಯದೊಳಗೆ ನಿರ್ಮಾಣವಾಗಲಿರುವುದರಿಂದ ಪರಿಸರವಾದಿಗಳೂ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆ (Mekedatu Balancing Reservoir-cum-Drinking Water Project) ಹಲವು ದಶಕಗಳಿಂದ ಕರ್ನಾಟಕ–ತಮಿಳುನಾಡು ನಡುವಿನ ವಿವಾದದ ಕೇಂದ್ರಬಿಂದುವಾಗಿದೆ.

ಬೆಂಗಳೂರಿನ ಭವಿಷ್ಯದ ಕುಡಿಯುವ ನೀರಿನ ಅಗತ್ಯ ಪೂರೈಸಲು ಹಾಗೂ ಕಾವೇರಿ ಜಲಾನಯನ ಪ್ರದೇಶದ ನೀರಿನ ನಿರ್ವಹಣೆಯನ್ನು ಸುಧಾರಿಸಲು ಈ ಯೋಜನೆ ಅಗತ್ಯ ಎಂದು ಕರ್ನಾಟಕ ವಾದಿಸಿದರೆ, ಇದು ಕೆಳಹರಿವಿನ ನೀರಿನ ಹರಿವಿನ ಮೇಲೆ ಪರಿಣಾಮ ಬೀರುವುದಲ್ಲದೆ ಕಾವೇರಿ ನೀರು ಹಂಚಿಕೆ ವ್ಯವಸ್ಥೆಗೆ ಧಕ್ಕೆ ತರುತ್ತದೆ ಎಂದು ತಮಿಳುನಾಡು ವಿರೋಧಿಸುತ್ತಿದೆ.

ಇದರ ಜೊತೆಗೆ, ಈ ಯೋಜನೆ ಪರಿಸರದ ದೃಷ್ಟಿಯಿಂದ ಅತಿಸೂಕ್ಷ್ಮ ಪ್ರದೇಶವಾದ ಕಾವೇರಿ ವನ್ಯಜೀವಿ ಅಭಯಾರಣ್ಯದೊಳಗೆ ನಿರ್ಮಾಣವಾಗಲಿರುವುದರಿಂದ ಪರಿಸರವಾದಿಗಳೂ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಮೇಕೆದಾಟು ಯೋಜನೆ ಎಂದರೇನು?

ಬೆಂಗಳೂರಿನಿಂದ ಸುಮಾರು 110 ಕಿ.ಮೀ. ದೂರದಲ್ಲಿ ಮೇಕೆದಾಟು ಪ್ರದೇಶದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಬಹು ಉದ್ದೇಶದ ಜಲಾಶಯ ನಿರ್ಮಿಸುವ ಯೋಜನೆಯೇ ಮೇಕೆದಾಟು ಯೋಜನೆ.

ಈ ಯೋಜನೆಯ ಪ್ರಮುಖ ಉದ್ದೇಶಗಳು:

  • ಬೆಂಗಳೂರು ಮಹಾನಗರ ಮತ್ತು ಸುತ್ತಮುತ್ತಲಿನ ನಗರಗಳಿಗೆ ಕುಡಿಯುವ ನೀರು ಒದಗಿಸುವುದು.

  • ಮಳೆಗಾಲದಲ್ಲಿ ಹೆಚ್ಚುವರಿಯಾಗಿ ಹರಿದು ಹೋಗುವ ನೀರನ್ನು ಸಂಗ್ರಹಿಸುವುದು.

  • ಸುಮಾರು 400 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದಿಸುವುದು.

ಯೋಜನೆಯ ಬಳಕೆಗೆ ಲಭ್ಯವಿರುವ ನೀರು ಸಂಗ್ರಹ ಸಾಮರ್ಥ್ಯ (Live Storage) 59.46 ಟಿಎಂಸಿ ಆಗಿದೆ.

ಕರ್ನಾಟಕ ಮಾಡಿದ ಪ್ರಮುಖ ಬದಲಾವಣೆಗಳು

2019ರಲ್ಲಿ ಸಲ್ಲಿಸಿದ್ದ ಮೊದಲ ವಿವರವಾದ ಯೋಜನಾ ವರದಿ (DPR)ಯಲ್ಲಿ ಕುಡಿಯುವ ನೀರಿಗೆ 4.75 ಟಿಎಂಸಿ ನೀರನ್ನು ಬಳಸುವ ಪ್ರಸ್ತಾವ ಇತ್ತು.

ಆದರೆ 2026ರ ಏಪ್ರಿಲ್‌ನಲ್ಲಿ ಕರ್ನಾಟಕ ಯೋಜನೆಯನ್ನು ಪರಿಷ್ಕರಿಸಿತು.

  • ಕುಡಿಯುವ ನೀರಿನ ಬಳಕೆಯನ್ನು 4.75 ಟಿಎಂಸಿಯಿಂದ 6.95 ಟಿಎಂಸಿಗೆ ಹೆಚ್ಚಿಸಲಾಯಿತು.

  • ಹೆಚ್ಚುವರಿಯಾಗಿ 5 ಶೇಕಡಾ ಡೆಡ್ ಸ್ಟೋರೇಜ್ ಸೇರಿಸಲಾಯಿತು.

  • ಶಿವನಸಮುದ್ರ ರನ್-ಆಫ್-ರಿವರ್ ವಿದ್ಯುತ್ ಯೋಜನೆ ಹಾಗೂ

  • ಕಾವೇರಿ ನದಿಗೆ ಅಡ್ಡವಾಗಿ ಡೈವರ್ಷನ್ ವಿಯರ್ ನಿರ್ಮಾಣದ ಪ್ರಸ್ತಾವ ಸೇರಿಸಲಾಯಿತು.

ಬೆಂಗಳೂರು ಜನಸಂಖ್ಯೆ ಹಾಗೂ ನೀರಿನ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬದಲಾವಣೆ ಅಗತ್ಯವಾಗಿದೆ ಎಂದು ಕರ್ನಾಟಕ ಹೇಳಿದೆ.

ಮತ್ತೆ ವಿವಾದದಲ್ಲಿ

ಕೇಂದ್ರ ಜಲ ಆಯೋಗ (CWC) ಪರಿಷ್ಕೃತ ಪ್ರಸ್ತಾವ ಪರಿಶೀಲಿಸಿ, 2019ರ DPR ನ್ನು ಮುಂದುವರಿಸಿ ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಯೋಜನೆಯಲ್ಲಿ ಮಹತ್ವದ ಬದಲಾವಣೆಗಳಾಗಿರುವುದರಿಂದ ಸಂಪೂರ್ಣ ಹೊಸ DPR ಸಿದ್ಧಪಡಿಸುವಂತೆ ಕರ್ನಾಟಕಕ್ಕೆ ಸೂಚಿಸಿದೆ.

ಹೊಸ DPRನಲ್ಲಿ ಸೇರಿಸಬೇಕಾದ ಅಂಶಗಳು:

  • ಪರಿಷ್ಕೃತ ನೀರಿನ ಬೇಡಿಕೆ

  • ಶಿವನಸಮುದ್ರ ವಿದ್ಯುತ್ ಯೋಜನೆ

  • ನೀರಿನ ದಿಕ್ಕು ಬದಲಾವಣೆ ವ್ಯವಸ್ಥೆ

  • ಹೊಸ ತಾಂತ್ರಿಕ ವಿವರಗಳು

ಇದೀಗ ಕಾವೇರಿ ನೀರಾವರಿ ನಿಗಮ ಪರಿಷ್ಕೃತ DPR ಸಿದ್ಧಪಡಿಸುತ್ತಿದೆ.

ಇದೇ ವೇಳೆ ಯೋಜನೆಯ ಅಂದಾಜು ವೆಚ್ಚವೂ 9,000 ಕೋಟಿಯಿಂದ ಸುಮಾರು 16,000 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಕರ್ನಾಟಕದ ಲೆಕ್ಕಾಚಾರಗಳ ಬಗ್ಗೆ CWC ಆಕ್ಷೇಪ

ಕೇಂದ್ರ ಜಲ ಆಯೋಗ ಕೆಲವು ಗಂಭೀರ ಆಕ್ಷೇಪಗಳನ್ನು ವ್ಯಕ್ತಪಡಿಸಿದೆ.

  • ಬೆಂಗಳೂರಿನ ಕುಡಿಯುವ ನೀರಿನ ಬೇಡಿಕೆಯ ಲೆಕ್ಕಾಚಾರ ಹಳೆಯ ಅಂದಾಜುಗಳ ಆಧಾರದಲ್ಲಿದೆ.

  • ಇನ್ನೂ 1990ರ ನೀರಿನ ಬಳಕೆ ಅಂಕಿಅಂಶಗಳನ್ನೇ ಬಳಸಲಾಗಿದೆ.

  • 6.95 ಟಿಎಂಸಿ ಬಳಕೆ ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಮಿತಿಗಿಂತ ಹೆಚ್ಚಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿದೆ.

ಯೋಜನೆ ಎಲ್ಲಿದೆ?

ಯೋಜನೆಯು ಕಾವೇರಿ ವನ್ಯಜೀವಿ ಅಭಯಾರಣ್ಯದೊಳಗೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕು, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕು ಪ್ರದೇಶದಲ್ಲಿದೆ.

ಯೋಜನೆಗೆ ಸುಮಾರು 12,000 ಎಕರೆ ಭೂಮಿ ಅಗತ್ಯ. 98 ಅರಣ್ಯ ಭೂಮಿ ಹಾಗೂ 2 ಶೇಕಡಾ ಖಾಸಗಿ ಭೂಮಿ ಬೇಕಾಗಿದ್ದು, ನಾಲ್ಕು ಗ್ರಾಮಗಳು ಭೂಸ್ವಾಧೀನಕ್ಕೆ ಒಳಗಾಗಲಿದ್ದು, ಸುಮಾರು 500 ಕುಟುಂಬಗಳು ಸ್ಥಳಾಂತರಗೊಳ್ಳಬೇಕಾಗುತ್ತದೆ.

ಕರ್ನಾಟಕದ ವಾದವೇನು?

ಕರ್ನಾಟಕದ ಪ್ರಕಾರ,

  • ಬೆಂಗಳೂರಿನ ಜನಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ.

  • ಕುಡಿಯುವ ನೀರಿನ ಬೇಡಿಕೆ ಭಾರೀ ಪ್ರಮಾಣದಲ್ಲಿ ಏರಿದೆ.

  • ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದುಹೋಗುವ ಹೆಚ್ಚುವರಿ ನೀರನ್ನು ಸಂಗ್ರಹಿಸಬಹುದು.

  • ಕೆಆರ್‌ಎಸ್, ಕಬಿನಿ ಹಾಗೂ ಹೇಮಾವತಿ ಜಲಾಶಯಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ.

  • ಸುಪ್ರೀಂ ಕೋರ್ಟ್ ಆದೇಶದಂತೆ 177.25 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವ ವ್ಯವಸ್ಥೆ ಸುಲಭವಾಗುತ್ತದೆ.

  • ಇದು ನೀರಾವರಿ ಯೋಜನೆಯಲ್ಲ; ಕುಡಿಯುವ ನೀರಿನ ಯೋಜನೆ ಎಂದು ರಾಜ್ಯ ಹೇಳುತ್ತಿದೆ.

ತಮಿಳುನಾಡು ವಿರೋಧಿಸುವುದೇಕೆ?

ತಮಿಳುನಾಡಿನ ಪ್ರಕಾರ,

  • ಯೋಜನೆ ಕಾವೇರಿ ನ್ಯಾಯಮಂಡಳಿ ತೀರ್ಪು ಹಾಗೂ 2018ರ ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ.

  • ಅಂತಾರಾಜ್ಯ ಗಡಿಯ ಮೇಲ್ಭಾಗದಲ್ಲೇ ಜಲಾಶಯ ನಿರ್ಮಾಣವಾಗುತ್ತದೆ.

  • ಇದರಿಂದ ಕರ್ನಾಟಕ ಹೆಚ್ಚುವರಿ ನೀರನ್ನು ತಡೆಹಿಡಿಯಲು ಸಾಧ್ಯವಾಗುತ್ತದೆ.

  • ಈಗಾಗಲೇ ನೀರು ಹಂಚಿಕೆ ವೇಳೆ ಈ ಹರಿವನ್ನು ಪರಿಗಣಿಸಲಾಗಿದೆ.

  • ಇಷ್ಟು ದೊಡ್ಡ ಹೊಸ ಜಲಾಶಯಕ್ಕೆ ನ್ಯಾಯಮಂಡಳಿ ಅನುಮತಿ ನೀಡಿಲ್ಲ.

  • ಕೆಳಹರಿವಿನ ನೀರು ಬಿಡುಗಡೆಗೆ ತೊಂದರೆಯಾಗಬಹುದು.

  • ಬೆಂಗಳೂರಿನ ನೀರಿನ ಅಗತ್ಯಕ್ಕೆ ಈಗಿರುವ ಜಲಾಶಯಗಳೇ ಸಾಕು ಎಂದು ತಮಿಳುನಾಡು ವಾದಿಸುತ್ತಿದೆ.

ಪರಿಸರದ ಮೇಲೆ ಪರಿಣಾಮ

ಯೋಜನೆಯಿಂದ:

  • ಸುಮಾರು 5,100 ಹೆಕ್ಟೇರ್ ಅರಣ್ಯ ಮುಳುಗಡೆಯಾಗಲಿದೆ.

  • ಮೈಸೂರು ಆನೆ ಕಾರಿಡಾರ್‌ಗೆ ಹಾನಿಯಾಗಲಿದೆ.

  • ಹುಲಿ, ಚಿರತೆ, ಆನೆ, ಕರಡಿ, ಹನಿ ಬ್ಯಾಡ್ಜರ್ ಸೇರಿದಂತೆ ಹಲವು ಜೀವಿಗಳಿಗೆ ಅಪಾಯ ಎದುರಾಗಲಿದೆ.

  • ಅಳಿವಿನಂಚಿನಲ್ಲಿರುವ ಹಂಪ್‌ಬ್ಯಾಕ್ ಮಹಶೀರ್ ಮೀನುಗಳಿಗೂ ಹಾನಿಯಾಗಲಿದೆ.

ಪರಿಸರ ತಜ್ಞರ ಎಚ್ಚರಿಕೆ

ತಜ್ಞರ ಪ್ರಕಾರ:

  • ಜಲಾನಯನ ಪ್ರದೇಶ ರಕ್ಷಣೆ ಕುಸಿಯಲಿದೆ.

  • ಕಾರ್ಬನ್ ಸಂಗ್ರಹ ಸಾಮರ್ಥ್ಯ ಕಡಿಮೆಯಾಗಲಿದೆ.

  • ಹವಾಮಾನ ನಿಯಂತ್ರಣದ ಮೇಲೆ ಪರಿಣಾಮ ಬೀಳಲಿದೆ.

  • ವನ್ಯಜೀವಿಗಳ ಸಂಚಾರ ಮಾರ್ಗಗಳು ಕಡಿತಗೊಳ್ಳಲಿವೆ.

ಭಾರತೀಯ ವಿಜ್ಞಾನ ಸಂಸ್ಥೆ (IISc) ಅಧ್ಯಯನದ ಪ್ರಕಾರ,

  • ಈ ಅರಣ್ಯಗಳು ವರ್ಷಕ್ಕೆ 500 ಕೋಟಿ ರೂಪಾಯಿಗೂ ಅಧಿಕ ಪರಿಸರ ಸೇವೆಗಳನ್ನು ಒದಗಿಸುತ್ತವೆ.

  • ಅವುಗಳ ನಿವ್ವಳ ಪರಿಸರ ಆಸ್ತಿ ಮೌಲ್ಯ 12,500 ಕೋಟಿ ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ.

ಪರ್ಯಾಯ ಮಾರ್ಗಗಳೇನು?

ತಜ್ಞರು ಸೂಚಿಸಿರುವ ಕೆಲವು ಪರ್ಯಾಯಗಳು:

  • ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ವಿಸ್ತರಿಸುವುದು.

  • ಅಂತರ್ಜಲ ಮರುಪೂರಣ ಹೆಚ್ಚಿಸುವುದು.

  • ಸಂಸ್ಕರಿಸಿದ ತ್ಯಾಜ್ಯ ನೀರನ್ನು ಮರುಬಳಕೆ ಮಾಡುವುದು (ಸುಮಾರು 16 ಟಿಎಂಸಿ).

  • ಕಾವೇರಿ ಹಂತ-6 ಯೋಜನೆಯಿಂದ ಬರಲಿರುವ 675 MLD ನೀರನ್ನು ಸಮರ್ಪಕವಾಗಿ ಬಳಸುವುದು.

  • ಜಲವಿದ್ಯುತ್ ಬದಲಿಗೆ ಸೌರ ವಿದ್ಯುತ್ ಹಾಗೂ ಬ್ಯಾಟರಿ ಸಂಗ್ರಹ ವ್ಯವಸ್ಥೆಗೆ ಆದ್ಯತೆ ನೀಡುವುದು.

ಇನ್ನೂ ಯಾವ ಅನುಮತಿಗಳು ಬೇಕು?

  • ರಾಷ್ಟ್ರೀಯ ವನ್ಯಜೀವಿ ಮಂಡಳಿ (NBWL) ಅನುಮೋದನೆ

  • ಅರಣ್ಯ ಇಲಾಖೆ ಅನುಮತಿ

  • ಪರಿಸರ ಅನುಮತಿ

  • ಪರಿಷ್ಕೃತ DPRಗೆ ಕೇಂದ್ರ ಜಲ ಆಯೋಗದ ಅನುಮೋದನೆ

  • ಕಾವೇರಿ ನೀರು ಹಂಚಿಕೆ ನಿಯಮಗಳಿಗೆ ಅನುಸಾರ ಅಗತ್ಯ ಒಪ್ಪಿಗೆ

ಮೇಕೆದಾಟು ಯೋಜನೆ: ಪ್ರಮುಖ ಕಾಲಕ್ರಮ

  • 1980–90ರ ದಶಕ: ಮೇಕೆದಾಟು ಜಲಾಶಯ ಕಲ್ಪನೆ ಆರಂಭ.

  • 2003–2012: ಪ್ರಾಥಮಿಕ ಅಧ್ಯಯನಗಳು.

  • 2013: ಪ್ರಾಥಮಿಕ ವರದಿ ಸಿದ್ಧತೆ.

  • 2014: ಸಲಹೆಗಾರರ ನೇಮಕಕ್ಕೆ ಟೆಂಡರ್.

  • 2015: ತಮಿಳುನಾಡು ಆಕ್ಷೇಪ.

  • 2016: ₹5,900 ಕೋಟಿ DPR ಸಿದ್ಧ; ಸುಪ್ರೀಂ ಕೋರ್ಟ್‌ನಲ್ಲಿ ತಮಿಳುನಾಡು ವಿರೋಧ.

  • 2017: CWCಗೆ DPR ಸಲ್ಲಿಕೆ.

  • 2018: ತಿದ್ದುಪಡಿ; ಸುಪ್ರೀಂ ಕೋರ್ಟ್ ಕಾವೇರಿ ತೀರ್ಪು; CWMA ರಚನೆ.

  • 2019: ₹9,000 ಕೋಟಿ DPR ದೆಹಲಿಯ CWCಗೆ ಸಲ್ಲಿಕೆ.

  • 2021: ರಾಜ್ಯ ಬಜೆಟ್‌ನಲ್ಲಿ ಅನುದಾನ.

  • 2022: ಮೇಕೆದಾಟು ಪಾದಯಾತ್ರೆ; ತಮಿಳುನಾಡು ಮತ್ತೆ ವಿರೋಧ.

  • 2023: ಪರಿಸರ ಹಾಗೂ ಅರಣ್ಯ ಅನುಮತಿಗೆ ಅರ್ಜಿ.

  • 2024: CWMA DPR ಅನ್ನು ಮರುಪರಿಶೀಲನೆಗೆ CWCಗೆ ಹಿಂತಿರುಗಿಸಿತು.

  • 2025–26: ಸುಪ್ರೀಂ ಕೋರ್ಟ್ DPR ಸಿದ್ಧತೆಯ ವಿರುದ್ಧದ ತಮಿಳುನಾಡಿನ ಅರ್ಜಿ ತಿರಸ್ಕರಿಸಿತು; ಆದರೆ ಅಂತಿಮ ಅನುಮತಿಗಳು ಇನ್ನೂ ಬಾಕಿ.

  • 2026: CWC ಮತ್ತು CWMA ಸಲಹೆ ಆಧರಿಸಿ ಪರಿಷ್ಕೃತ DPR ಸಿದ್ಧಪಡಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

2013ರ ಅತ್ಯಾಚಾರ ಪ್ರಕರಣ: ‘Tehelka’ ಮಾಜಿ ಸಂಪಾದಕ ತರುಣ್ ತೇಜಪಾಲ್ ದೋಷಿ; ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು..!

"ಪ್ರಧಾನಿ ಮೋದಿಗೆ ಅಷ್ಟೊಂದು ತಲೆಬಾಗಬೇಡಿ": Instagram ಖಾತೆ ನಿರ್ಬಂಧ ಬೆನ್ನಲ್ಲೇ Meta ವಿರುದ್ಧ ಕೇಜ್ರಿವಾಲ್ ಆಕ್ರೋಶ..!

ಹಾರ್ಮುಜ್ ಜಲಸಂಧಿ ಒಪ್ಪಂದ ಸನ್ನಿಹಿತ, ಆದರೆ ಯಾವುದಾದರೊಂದು ದೇಶ ತನ್ನ ನಿಲುವಿನಲ್ಲಿ ಸಡಿಲಿಕೆ ತೋರಿಸಬೇಕು: ಇರಾನ್-ಯುಎಸ್

Mojtaba Khamenei ಎಲ್ಲಿದ್ದಾರೆ? ರಹಸ್ಯ ತಾಣದಲ್ಲಿ ಪರಮೋಚ್ಛ ನಾಯಕ; ಅವರ ಉಪಸ್ಥಿತಿಯೇ ನಮ್ಮ ಧೈರ್ಯ ಎಂದ Iran ಅಧ್ಯಕ್ಷ

ಅಸಮಾಧಾನಿತ ಶಾಸಕರ ಸಮಸ್ಯೆ ಆಲಿಸಿದ್ದೇವೆ, ನಾವೆಲ್ಲಾ ಒಂದು ಕುಟುಂಬ- ಸುರ್ಜೆವಾಲ; ಸಚಿವ ಸ್ಥಾನ ಹೊರತಾಗಿ ಬೇರೆ ಏನು ಕೊಟ್ಟರೂ ಒಪ್ಪಲ್ಲ- ಎಂ ಕೃಷ್ಣಪ್ಪ