ಬೆಂಗಳೂರು: ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಬಳಕೆ ವೇಗವಾಗಿ ಹೆಚ್ಚಾಗುತ್ತಿದ್ದರೂ, ಕರ್ನಾಟಕದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಧಿಕೃತ ಸರ್ಕಾರಿ ಇವಿ ಚಾರ್ಜಿಂಗ್ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.
ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬದಿಯ ಸೌಲಭ್ಯ (Wayside Amenities - WSA) ಕೇಂದ್ರಗಳ ಪೈಕಿ ಕೇವಲ ನಾಲ್ಕರಲ್ಲಿ ಮಾತ್ರ ಇವಿ ಚಾರ್ಜಿಂಗ್ ಸ್ಟೇಷನ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಸದಸ್ಯ ಜಗ್ಗೇಶ್ ಸೇರಿದಂತೆ ಹಲವು ಸದಸ್ಯರು ಕೇಳಿದ ಲಿಖಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, 2023-24ರಲ್ಲಿ ಒಂದು ಹಾಗೂ 2024-25ರಲ್ಲಿ ಇನ್ನೂ ಮೂರು ವೇಸೈಡ್ ಅಮೆನಿಟೀಸ್ ಕೇಂದ್ರಗಳಲ್ಲಿ ಇವಿ ಚಾರ್ಜಿಂಗ್ ಸೌಲಭ್ಯ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.
ದೇಶಾದ್ಯಂತ ಪ್ರಸ್ತುತ 84 ವೇಸೈಡ್ ಅಮೆನಿಟೀಸ್ ಕೇಂದ್ರಗಳಲ್ಲಿ ಮಾತ್ರ ಇವಿ ಚಾರ್ಜಿಂಗ್ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆ ವೇಗವಾಗಿ ಹೆಚ್ಚುತ್ತಿರುವ ನಡುವೆಯೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಾರ್ಜಿಂಗ್ ಮೂಲಸೌಕರ್ಯ ಅಭಿವೃದ್ಧಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ.
ರಾಜಸ್ಥಾನದಲ್ಲಿ 20 ಕಾರ್ಯನಿರ್ವಹಣೆಯಲ್ಲಿರುವ ವೇಸೈಡ್ ಅಮೆನಿಟೀಸ್ ಕೇಂದ್ರಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ಹರಿಯಾಣದಲ್ಲಿ 18, ಗುಜರಾತ್ ಹಾಗೂ ಉತ್ತರ ಪ್ರದೇಶದಲ್ಲಿ ತಲಾ 10 ಕೇಂದ್ರಗಳಿವೆ. ಕರ್ನಾಟಕದಲ್ಲಿ ಕೇವಲ 4 ಕೇಂದ್ರಗಳಿದ್ದು, ಕೇರಳ ಮತ್ತು ತೆಲಂಗಾಣದಲ್ಲಿ ತಲಾ ಒಂದು ಕೇಂದ್ರ ಮಾತ್ರ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ನ್ಯಾಷನಲ್ ಹೈವೇಸ್ ಲಾಜಿಸ್ಟಿಕ್ಸ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ (NHLML) ಮೂಲಕ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್‌ಪ್ರೆಸ್‌ವೇಗಳುದ್ದಕ್ಕೂ ಪ್ರತಿ 40ರಿಂದ 60 ಕಿಲೋಮೀಟರ್‌ಗಳ ಅಂತರದಲ್ಲಿ ವೇಸೈಡ್ ಅಮೆನಿಟೀಸ್ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಭೂಮಿ ಲಭ್ಯತೆ ಹಾಗೂ ಆರ್ಥಿಕ ಸಾಧ್ಯತೆಗಳ ಆಧಾರದ ಮೇಲೆ ಈ ಯೋಜನೆ ಜಾರಿಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಕೇಂದ್ರಗಳಲ್ಲಿ ಉಪಹಾರ ಗೃಹಗಳು, ಶೌಚಾಲಯ, ಕುಡಿಯುವ ನೀರು, ವಾಹನ ನಿಲುಗಡೆ, ಇಂಧನ ಕೇಂದ್ರ, ಇವಿ ಚಾರ್ಜಿಂಗ್ ಸ್ಟೇಷನ್, ವೈದ್ಯಕೀಯ ನೆರವು ಹಾಗೂ ವಾಹನ ಚಾಲಕರು ಮತ್ತು ಲಾರಿ ಚಾಲಕರಿಗೆ ಅಲ್ಪಾವಧಿ ವಸತಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.