ಬೀದರ್: ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಮೊಗ್ಡಂಪಲ್ಲಿ ಮಂಡಲದ ಸತ್ವಾರ್ ಗ್ರಾಮದ ಹೊರವಲಯದಲ್ಲಿ ಮಂಗಳವಾರ ಸಂಭವಿಸಿದ ಭೀಕರ ಅಫಘಾತದಲ್ಲಿ ಮೃತಪಟ್ಟ ಬೀದರ್ ಮೂಲದ ಆರು ಮಹಿಳೆಯರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಹೇಳಿದ್ದಾರೆ.
ಆಟೋ ಹಾಗೂ ಟ್ಯಾಂಕರ್ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರು ಬೀದರ್ ತಾಲೂಕಿನ ರಾಜಗೀರಾ ಗ್ರಾಮದವರು ಎಂದು ತಿಳಿದುಬಂದಿದೆ. ಟಂ ಟಂ ಚಾಲಕ ದೇವಿದಾಸ ಸೇರಿದಂತೆ ಕೂಲಿ ಕಾರ್ಮಿಕರಾದ ರೇಖಾ, ರೇಷ್ಮಾ, ಕವಿತಾ ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ
ಇಂದು ಅಪಘಾತದ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರ ಖಂಡ್ರೆ ಅವರು, ಕೂಲಿಗೆ ಹೋದವರು ಆರು ಜನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸರ್ಕಾರ ಅವರ ಕುಟುಂಬದ ಜೊತೆ ಇದ್ದು, ಪರಿಹಾರ ನೀಡತ್ತಿದೆ. ಮೃತರ ಆತ್ಮಕ್ಕೆ ಶಾಂತಿ ನೀಡಲಿ. ಈಗಾಗಲೇ ಸಿಎಂ ಜೊತೆ ಮಾತನಾಡಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ನೀಡುತ್ತೇವೆ. ಮೃತ ಆರು ಜನಕ್ಕೆ ತಲಾ 5 ಲಕ್ಷ ಪರಿಹಾರ ನೀಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ನಾನು ವೈಯಕ್ತಿಕ ಪರಿಹಾರ ನೀಡುತ್ತೇನೆ. ಒಂದು ಆಟೋದಲ್ಲಿ 15 -20 ಜನ ತುಂಬಿಕೊಂಡು ಹೋಗೋದು ತಪ್ಪು. ಇವರ ಮನೆಗಳಿಗೆ ಭೇಟಿ ನೀಡಿ ಎಲ್ಲಾ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಸಚಿವ ಈಶ್ವರ್ ಖಂಡ್ರೆ ಭರವಸೆ ನೀಡಿದ್ದಾರೆ.