ಕೊಪ್ಪಳ: 2028ಕ್ಕೂ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು, ಡಿ.ಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್ ತಂಗಡಗಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, 2028 ಕ್ಕೆ ಪಕ್ಷದ ಹಿರಿಯ ನಾಯಕರು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾಗಿದ್ದೇವೆ ಎನ್ನುತ್ತಿದ್ದರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ತಂಗಡಗಿ, ಸಹಜವಾಗಿ ಹಿರಿಯರು ತಮ್ಮ ಭಾವನೆ ವ್ಯಕ್ತಪಡಿಸುವುದು ತಪ್ಪಲ್ಲ. ಆದರೆ 2028 ಕ್ಕೂ ಕೂಡ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗುವುದು ನಿಶ್ಚಿತ ಎಂದರು.
ಜಿಲ್ಲೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಮಂತ್ರಿ ಪದವಿಯ ಆಕಾಂಕ್ಷಿಯಾಗಿದ್ದರು. ಮುಂದಿನ ದಿನಗಳಲ್ಲಿ ಹಿಟ್ನಾಳ್ ಅವರು ಸಚಿವರಾಗುತ್ತಾರೆ ಎಂಬ ವಿಶ್ವಾಸವಿದೆ. ನಮ್ಮಲ್ಲಿ ಯಾವುದೇ ಮುನಿಸುಗಳಿಲ್ಲ. ಜಿಲ್ಲೆಯ ಶಾಸಕರೆಲ್ಲ ಒಟ್ಟಾಗಿದ್ದೇವೆ ಎಂದಿದ್ದಾರೆ.
ಸಾರ್ವಜನಿಕ ಪ್ರದೇಶಗಳಲ್ಲಿ ಆರ್‌ಎಸ್ಎಸ್ ಚಟುವಟಿಕೆಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆಯಲ್ಲ ಎಂಬ ಪ್ರಶ್ನೆಗೆ ಸಂಘಟನೆಗಳು ಸಭೆ, ಕಾರ್ಯಕ್ರಮ ನಡೆಸಲು ಅನುಮತಿ ಕಡ್ಡಾಯ ಎಂದು ಹೇಳಿದ್ದೇವೆ. ಇದಕ್ಕೆ ಆರ್‌ಎಸ್‌ಎಸ್ ಹೊರತಾಗಿಲ್ಲ. ಈ ಸಂಘಟನೆಯವರು ಮೊದಲ ನೋಂದಣಿ ಬಗ್ಗೆ ಮಾಹಿತಿ ಕೊಡಲಿ. ಬಿಜೆಪಿಗರು ತಾಕತ್ತಿದ್ದರೆ ರಾಷ್ಟ್ರಧ್ವಜವನ್ನು ಆಅರ್‌ಎಸ್ಎಸ್ ಕೇಂದ್ರ ಕಚೇರಿ ಮೇಲೆ ಹಾರಿಸಲಿ. ಬಿಜೆಪಿಯವರಿಂದ ದೇಶ ಪ್ರೇಮದ ಪಾಠ ಕಲಿಯಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು.