ಬೆಂಗಳೂರು: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ದೇವಸ್ಥಾನವೊಂದರಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಪಾಳಕ್ಕೆ ಹೊಡೆದು ಬೆದರಿಕೆ ಹಾಕಿದ ಬಿಜೆಪಿ ಶಾಸಕ ಸುರೇಶ್ ಗೌಡ ಪುತ್ರಿಯ ಘಟನೆಗೆ ಸಂಬಂಧಿಸಿದ ವಿಡಿಯೊ ತಡವಾಗಿ ಹೊರಬಿದ್ದಿದೆ.
ಮಹಿಳಾ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಹಾಗೂ ಶಾಸಕರ ಪುತ್ರಿಯ ನಡುವೆ ನಡೆದಿದ್ದ ಘರ್ಷಣೆಯ ವಿಡಿಯೋ ದೃಶ್ಯಗಳು ಘಟನೆ ಬೆಳಕಿಗೆ ಬಂದು ಕೆಲವು ದಿನಗಳ ನಂತರ ಬಹಿರಂಗವಾಗಿವೆ.
ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ಸುರೇಶ್ ಗೌಡ ಅವರ ಪುತ್ರಿ ಐಶ್ವರ್ಯ ಅವರು ಆರತಿ ಉಕ್ಕಡ ದೇವಸ್ಥಾನದಲ್ಲಿ ಪಿಎಸ್‌ಐ ಸವಿತಾ ಬಿ. ಪಾಟೀಲ್ ಅವರೊಂದಿಗೆ ತೀವ್ರ ವಾಗ್ವಾದ ನಡೆಸುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಒಂದು ಹಂತದಲ್ಲಿ ಐಶ್ವರ್ಯ ಅವರು ಯಾರಿಗೋ ಫೋನ್ ಕರೆ ಮಾಡುತ್ತಿರುವುದು ಕಂಡುಬರುತ್ತದೆ.
ವಾಗ್ವಾದ ಮುಂದುವರಿದಂತೆ ಅವರು ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡುತ್ತಾರೆ. ಆಗ ಮಹಿಳಾ ಎಸ್ ಐ ಕೂಡ ತಿರುಗಿಸಿ ಹೊಡೆಯುತ್ತಾರೆ. ಸ್ಥಳದಲ್ಲಿದ್ದ ಇತರರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಾರೆ.
ಆಗಸ್ಟ್ 12ರಂದು ರಾತ್ರಿ 8.15ರ ವೇಳೆಗೆ ದೇವಸ್ಥಾನದಲ್ಲಿ ಭೀಮನ ಅಮಾವಾಸ್ಯೆ ಆಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ದೇವಸ್ಥಾನದ ಗರ್ಭಗುಡಿಗೆ ಪ್ರವೇಶಿಸುವ ವಿಚಾರಕ್ಕೆ ಸಂಬಂಧಿಸಿದ ವಿವಾದವೇ ಘರ್ಷಣೆಗೆ ಕಾರಣವಾಗಿತ್ತು.
ಮಂಡ್ಯ ಮಹಿಳಾ ಪೊಲೀಸ್ ಠಾಣೆಗೆ ಸಂಬಂಧಿಸಿದ ಸಬ್‌ಇನ್‌ಸ್ಪೆಕ್ಟರ್ ಸವಿತಾ ಪಾಟೀಲ್ ಅವರು ಬಳಿಕ ಈ ಘಟನೆ ಕುರಿತು ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೇ ವೇಳೆ, ಪ್ರತಿದೂರು ನೀಡಲು ಶಾಸಕರ ಪುತ್ರಿ ಮುಂದಾದರೂ ಪೊಲೀಸರು ಅದನ್ನು ಸ್ವೀಕರಿಸಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ಐಶ್ವರ್ಯ ಅವರು ದೇವಿಯ ದರ್ಶನಕ್ಕಾಗಿ ದೇವಸ್ಥಾನಕ್ಕೆ ಬಂದಿದ್ದರು. ಆದರೆ ತಕ್ಷಣವೇ ಗರ್ಭಗುಡಿಗೆ ಪ್ರವೇಶಿಸಲು ಅವಕಾಶ ನೀಡದಿದ್ದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ದೂರಿನಲ್ಲಿ, ಅವರು ಪೊಲೀಸ್ ಅಧಿಕಾರಿಯನ್ನು ಅವಾಚ್ಯವಾಗಿ ನಿಂದಿಸಿ, ಕಪಾಳಮೋಕ್ಷ ಮಾಡಿ, ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಶಾಸಕ ಬಿ. ಸುರೇಶ್ ಗೌಡ ಅವರು ಈಗಾಗಲೇ ಕ್ಷಮೆಯಾಚಿಸಿದ್ದಾರೆ. ಇದೇ ವೇಳೆ, ಪೊಲೀಸ್ ಅಧಿಕಾರಿ ತಮ್ಮ ಪುತ್ರಿಯನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.
ನನ್ನ ಮಗಳು ದೇವಸ್ಥಾನಕ್ಕೆ ಭೇಟಿ ನೀಡಿದ್ದಳು. ದೇವಸ್ಥಾನದ ಗರ್ಭಗುಡಿಗೆ ಹೋಗಲು ಆಕೆ ಮನವಿ ಮಾಡಿದ್ದಳು. ಪೊಲೀಸರು ಆಕೆಗೆ ಒಳಗೆ ಹೋಗಲು ಅವಕಾಶ ನೀಡಲಿಲ್ಲ. ಆದರೆ ಸರ್ಕಲ್ ಇನ್‌ಸ್ಪೆಕ್ಟರ್‌ಗೆ ಒಳಗೆ ಹೋಗಲು ಅವಕಾಶ ನೀಡಲಾಗಿತ್ತು. ನನ್ನ ಮಗಳು ಮತ್ತೆ ಒಳಗೆ ಹೋಗಲು ಅವಕಾಶ ನೀಡುವಂತೆ ಮನವಿ ಮಾಡಿದ್ದಳು. ಆಗ ಆ ಪೊಲೀಸ್ ಅಧಿಕಾರಿ ನನ್ನ ಮಗಳನ್ನು ನಿಂದಿಸಿದ್ದಾರೆ ಎಂದು ತೋರುತ್ತದೆ. ಬಳಿಕ ಜಗಳ ಆರಂಭವಾಯಿತು. ನನ್ನ ಮಗಳು ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋವನ್ನು ನಾನು ನೋಡಿಲ್ಲ. ಈ ಘಟನೆಗೆ ನಾನು ಕ್ಷಮೆಯಾಚಿಸುತ್ತೇನೆ, ನನಗೆ ವಿಷಾದವಿದೆ ಎಂದು ಹೇಳಿದ್ದರು.
ಇನ್ನೂ ಆಗಿಲ್ಲ ಬಂಧನ
ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರಕಾರ, ಶಾಸಕ ಬಿ. ಸುರೇಶ್ ಗೌಡ ಅವರ ಪುತ್ರಿ ಹಾಗೂ ಎಸಿಪಿ ಗೌತಮ್ ಅವರ ಪತ್ನಿ ಐಶ್ವರ್ಯ ಅವರು ದರ್ಶನಕ್ಕೆ ಅವಕಾಶ ನೀಡುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಉಂಟಾದ ವಿವಾದದ ಬಳಿಕ ಪಿಎಸ್‌ಐ ಅವರನ್ನು ಅವಾಚ್ಯವಾಗಿ ನಿಂದಿಸಿ, ಕಪಾಳಮೋಕ್ಷ ಮಾಡಿ ಹಾಗೂ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪಿಎಸ್‌ಐ ನೀಡಿದ ದೂರಿನ ಆಧಾರದ ಮೇಲೆ ಕ್ಯಾತನಹಳ್ಳಿ ಪೊಲೀಸರು ಐಶ್ವರ್ಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)ಯ ಸೆಕ್ಷನ್ 132, 115(2), 352 ಮತ್ತು 351(2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಆದರೆ ಎಫ್‌ಐಆರ್ ದಾಖಲಾಗಿರುವುದರ ಜೊತೆಗೆ, ಹಲ್ಲೆ ನಡೆದಿದೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದರೂ, ಇದುವರೆಗೆ ಐಶ್ವರ್ಯ ಅವರ ಬಂಧನದ ಕುರಿತು ಯಾವುದೇ ಬೆಳವಣಿಗೆ ಕಂಡುಬಂದಿಲ್ಲ. ಇದರಿಂದ ಈ ಪ್ರಕರಣದಲ್ಲಿ ಪೊಲೀಸರ ಕ್ರಮದ ಬಗ್ಗೆ ಪ್ರಶ್ನೆಗಳು ಎದ್ದಿವೆ.