ರಾಜ್ಯಪಾಲರ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ ಸಂಸದ ತೇಜಸ್ವಿ ಸೂರ್ಯ 
ರಾಜ್ಯ

ಲಾಲ್ ಬಾಗ್-ಕಬ್ಬನ್ ಪಾರ್ಕ್ ನ 22 ಎಕರೆ ಜಾಗ ಪರಭಾರೆ?, ಬೆಂಗಳೂರಿನ ಪಾರ್ಕ್‌ಗಳಿಗೆ ಹೊಸ ಕಾಯ್ದೆ ಕಂಟಕ?; ರಾಜ್ಯಪಾಲರಿಗೆ ಸಂಸದ Tejasvi Surya ಪತ್ರ

ಸಾರ್ವಜನಿಕ ಉದ್ಯಾನಗಳು ಕೇವಲ ಖಾಲಿ ಜಾಗವಲ್ಲ. ಅವು ಜೀವವೈವಿಧ್ಯ ಸಂರಕ್ಷಣೆ, ಶುದ್ಧ ಗಾಳಿ, ಆರೋಗ್ಯ, ಮನರಂಜನೆ ಹಾಗೂ ಸಾರ್ವಜನಿಕರ ಜೀವನಮಟ್ಟಕ್ಕೆ ಅಗತ್ಯವಾದ ಪೀಳಿಗೆಯಿಂದ ಪೀಳಿಗೆಗೆ ಉಳಿಸಬೇಕಾದ..

ಬೆಂಗಳೂರು: ಹೊಸ ವಿವಾದಕ್ಕೆ ಕಾರಣವಾಗಿರುವ ಕರ್ನಾಟಕ ಸರ್ಕಾರದ ಪಾರ್ಕ್‌ಗಳ (ಸಂರಕ್ಷಣೆ) ತಿದ್ದುಪಡಿ ಮಸೂದೆ, 2026 ವಿರುದ್ಧ ತಮ್ಮ ಹೋರಾಟ ಮುಂದುವರೆಸಿರುವ ಸಂಸದ ತೇಜಸ್ವಿ ಸೂರ್ಯ ಮಸೂದೆಯನ್ನು ವಾಪಸ್ ಕಳುಹಿಸುವಂತೆ ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.

ಹೌದು.. ಸರ್ಕಾರಿ ಪಾರ್ಕ್‌ಗಳು ಮತ್ತು ಉದ್ಯಾನವನಗಳ ಜಾಗದ ಒಂದು ಭಾಗವನ್ನು ಸಾರ್ವಜನಿಕ ಮೂಲಸೌಕರ್ಯ ಹಾಗೂ ಉಪಯುಕ್ತತಾ ಯೋಜನೆಗಳಿಗೆ ಬಳಸಲು ಅವಕಾಶ ನೀಡುವ ಕರ್ನಾಟಕ ಸರ್ಕಾರದ ಪಾರ್ಕ್‌ಗಳ (ಸಂರಕ್ಷಣೆ) ತಿದ್ದುಪಡಿ ಮಸೂದೆ, 2026 ಅನ್ನು ಮರುಪರಿಶೀಲನೆಗಾಗಿ ರಾಜ್ಯ ವಿಧಾನಮಂಡಲಕ್ಕೆ ವಾಪಸ್ ಕಳುಹಿಸುವಂತೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಒತ್ತಾಯಿಸಿದ್ದಾರೆ.

ಬುಧವಾರ ನಾಗರಿಕರು, ವಾಕರ್ಸ್‌ ಅಸೋಸಿಯೇಷನ್‌ಗಳ ಪ್ರತಿನಿಧಿಗಳು ಹಾಗೂ ಮಾಜಿ ಹಿರಿಯ ಸರ್ಕಾರಿ ಅಧಿಕಾರಿಗಳ ನಿಯೋಗದೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿದ ತೇಜಸ್ವಿ ಸೂರ್ಯ, ಈ ಕುರಿತು ಮನವಿ ಸಲ್ಲಿಸಿದರು.

1975ರ ಕರ್ನಾಟಕ ಸರ್ಕಾರದ ಪಾರ್ಕ್‌ಗಳ (ಸಂರಕ್ಷಣೆ) ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿರುವ ಮಸೂದೆಯನ್ನು ಆಗಸ್ಟ್‌ 24ರಂದು ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಯಾವುದೇ ಸಮಗ್ರ ಚರ್ಚೆಯಿಲ್ಲದೆ ಅಂಗೀಕರಿಸಲಾಗಿದೆ ಎಂದು ಅವರು ಆರೋಪಿಸಿದರು. ಪ್ರತಿಪಕ್ಷಗಳ ಪ್ರತಿಭಟನೆ ನಡುವೆಯೇ ಮಸೂದೆ ಅಂಗೀಕಾರಗೊಂಡಿತ್ತು ಎಂದು ಅವರು ರಾಜ್ಯಪಾಲರ ಗಮನಕ್ಕೆ ತಂದರು.

ಪಾರ್ಕ್‌ ಜಾಗ ಶೇ.5ರಷ್ಟು ಬಳಕೆಗೆ ಅವಕಾಶ

ತಿದ್ದುಪಡಿ ಮಸೂದೆಯ ಪ್ರಕಾರ, ಸರ್ಕಾರಿ ಪಾರ್ಕ್‌ಗಳು ಮತ್ತು ಉದ್ಯಾನವನಗಳ ಒಟ್ಟು ಭೂಮಿ ಅಥವಾ ಕಟ್ಟಡ ಪ್ರದೇಶದ ಗರಿಷ್ಠ ಶೇ.5ರಷ್ಟು ಜಾಗವನ್ನು ಮಾರಾಟ, ಗುತ್ತಿಗೆ, ಉಡುಗೊರೆ, ವಿನಿಮಯ, ಅಡಮಾನ ಅಥವಾ ಇತರ ರೀತಿಯಲ್ಲಿ ಪರಭಾರೆ ಮಾಡಲು ರಾಜ್ಯ ಸರ್ಕಾರಕ್ಕೆ ಅವಕಾಶ ಸಿಗಲಿದೆ.

ಸಾರ್ವಜನಿಕ ಉಪಯುಕ್ತತಾ ಯೋಜನೆಗಳಿಗಾಗಿ ಸರ್ಕಾರಿ ಇಲಾಖೆಗಳು, ಶಾಸನಬದ್ಧ ಪ್ರಾಧಿಕಾರಗಳು, ಸರ್ಕಾರಿ ಕಂಪನಿಗಳು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಈ ಅವಕಾಶ ಅನ್ವಯಿಸಲಿದೆ. ಈಗಾಗಲೇ ಪರಭಾರೆ ಮಾಡಿರುವ ಜಾಗವನ್ನೂ ಶೇ.5ರ ಮಿತಿಯೊಳಗೆ ಲೆಕ್ಕ ಹಾಕಲಾಗುತ್ತದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

‘ಪಾರ್ಕ್‌ ಜಾಗವನ್ನು ಬೇರೆ ಉದ್ದೇಶಗಳಿಗೆ ಬಳಸಲು ಅವಕಾಶ ನೀಡುವುದು ನಿರಂಕುಶ ಕ್ರಮವಾಗಬಹುದು. ಇದರಿಂದ ಆರೋಗ್ಯಕರ ಪರಿಸರದ ಹಕ್ಕಿನ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಲಾಲ್ ಬಾಗ್-ಕಬ್ಬನ್ ಪಾರ್ಕ್ ಕುರಿತು ಕಳವಳ

ಸಾರ್ವಜನಿಕ ಉದ್ಯಾನಗಳು ಕೇವಲ ಖಾಲಿ ಜಾಗವಲ್ಲ. ಅವು ಜೀವವೈವಿಧ್ಯ ಸಂರಕ್ಷಣೆ, ಶುದ್ಧ ಗಾಳಿ, ಆರೋಗ್ಯ, ಮನರಂಜನೆ ಹಾಗೂ ಸಾರ್ವಜನಿಕರ ಜೀವನಮಟ್ಟಕ್ಕೆ ಅಗತ್ಯವಾದ ಪೀಳಿಗೆಯಿಂದ ಪೀಳಿಗೆಗೆ ಉಳಿಸಬೇಕಾದ ನೈಸರ್ಗಿಕ ಆಸ್ತಿಗಳು ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ಬೆಂಗಳೂರಿನ ಪ್ರಸ್ತಾವಿತ ಟನಲ್‌ ರಸ್ತೆ ಯೋಜನೆ ಕುರಿತು ಕೂಡ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಯೋಜನೆಗಾಗಿ ಲಾಲ್‌ಬಾಗ್‌ನಲ್ಲಿ ಸುಮಾರು 1.92 ಹೆಕ್ಟೇರ್‌ (ಸುಮಾರು 5 ಎಕರೆ) ಜಾಗವನ್ನು ಸುರಂಗ ಹಾಗೂ ಶಾಫ್ಟ್‌ ನಿರ್ಮಾಣಕ್ಕೆ ಬಳಸಬೇಕಾಗಬಹುದು ಎಂದು ಅವರು ಹೇಳಿದ್ದಾರೆ.

ಅದೇ ರೀತಿ, ಪ್ರಸ್ತಾವಿತ ಹೆಬ್ಬಾಳ ಶಾರ್ಟ್‌ ಟನಲ್‌ ಯೋಜನೆಗೆ ಪರಿಸರದ ದೃಷ್ಟಿಯಿಂದ ಮಹತ್ವದ ಹೆಬ್ಬಾಳ್‌ ಕೆರೆಯ ಸುಮಾರು 3.45 ಎಕರೆ ಜಾಗ ಬೇಕಾಗಬಹುದು. ಟನಲ್‌ ರಸ್ತೆ ಯೋಜನೆಯ ಡಿಪಿಆರ್‌ನಲ್ಲಿ ಶಾಫ್ಟ್‌ ಸುತ್ತಮುತ್ತ ಪಾರ್ಕಿಂಗ್‌ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಾಣದ ಪ್ರಸ್ತಾವನೆಯೂ ಇದೆ ಎಂದು ಅವರು ಆರೋಪಿಸಿದ್ದಾರೆ.

ಸುಮಾರು 300 ಕೋಟಿ ವರ್ಷಗಳಷ್ಟು ಹಳೆಯದಾದ ‘ಪೆನಿನ್ಸುಲರ್ ಗ್ನೈಸ್‌’ ಶಿಲೆ ಲಾಲ್‌ಬಾಗ್‌ನಲ್ಲಿದ್ದು, ಇದು ಪ್ರಮುಖ ಭೌಗೋಳಿಕ ಹಾಗೂ ಪರಿಸರ ಪರಂಪರೆ ತಾಣವಾಗಿದೆ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ಬೆಂಗಳೂರಿನ 65.4 ಎಕರೆ ಪಾರ್ಕ್‌ ಜಾಗ ಅಪಾಯದಲ್ಲಿ?

ಬೆಂಗಳೂರಿನಲ್ಲಿ ಸುಮಾರು 1,353 ಪಾರ್ಕ್‌ಗಳು, ಒಟ್ಟು 1,308 ಎಕರೆ ಪ್ರದೇಶದಲ್ಲಿ ಹರಡಿಕೊಂಡಿವೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಅವರ ಪ್ರಕಾರ, ಶೇ.5ರ ಮಿತಿ ಅನ್ವಯಿಸಿದರೆ ಬೆಂಗಳೂರಿನ ಈಗಾಗಲೇ ಸೀಮಿತವಾಗಿರುವ ಪಾರ್ಕ್‌ ಪ್ರದೇಶದ ಸುಮಾರು 65.4 ಎಕರೆ ಜಾಗ ಬೇರೆ ಉದ್ದೇಶಗಳಿಗೆ ಬಳಕೆಯಾಗುವ ಅಪಾಯವಿದೆ.

ಸುಮಾರು 240 ಎಕರೆ ವಿಸ್ತೀರ್ಣದ ಲಾಲ್‌ಬಾಗ್‌ ಮತ್ತು ಸುಮಾರು 197 ಎಕರೆ ವಿಸ್ತೀರ್ಣದ ಕಬ್ಬನ್‌ ಪಾರ್ಕ್‌ ಸೇರಿ 437 ಎಕರೆ ಪ್ರದೇಶ ಹೊಂದಿವೆ. ಶೇ.5ರ ಮಿತಿ ಅನ್ವಯಿಸಿದರೆ ಈ ಎರಡು ಪ್ರಮುಖ ಹಸಿರು ತಾಣಗಳಲ್ಲೇ ಸುಮಾರು 22 ಎಕರೆ ಜಾಗ ಪರಭಾರೆ ಅಥವಾ ಬೇರೆ ಬಳಕೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

‘ಪಬ್ಲಿಕ್ ಯುಟಿಲಿಟಿ’ ವ್ಯಾಖ್ಯಾನ ಸ್ಪಷ್ಟವಾಗಿಲ್ಲ

ಬೆಂಗಳೂರಿನಲ್ಲಿ ಹಸಿರು ಹೊದಿಕೆ ಕಡಿಮೆಯಾಗುತ್ತಿರುವ ಹಾಗೂ ನಗರೀಕರಣ ವೇಗವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ತಿದ್ದುಪಡಿ ಮತ್ತಷ್ಟು ಆತಂಕಕಾರಿ ಎಂದು ಸಂಸದರು ಹೇಳಿದ್ದಾರೆ.

‘ಸಾರ್ವಜನಿಕ ಉಪಯುಕ್ತತೆ’ ಎಂಬ ಪದಕ್ಕೆ ಸರ್ಕಾರ ಸ್ಪಷ್ಟ ವ್ಯಾಖ್ಯಾನ ನೀಡಿಲ್ಲ. ದೊಡ್ಡ ಪ್ರಮಾಣದ ರಿಯಲ್‌ ಎಸ್ಟೇಟ್‌ ಅಥವಾ ವಾಣಿಜ್ಯ ಯೋಜನೆಗಳಿಗೆ ಮಸೂದೆಯನ್ನು ದುರುಪಯೋಗಪಡಿಸಿಕೊಳ್ಳದಂತೆ ಸೂಕ್ತ ರಕ್ಷಣಾ ಕ್ರಮಗಳನ್ನೂ ರೂಪಿಸಲಾಗಿಲ್ಲ. ಪಾರ್ಕ್‌ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಸಬೇಕಾದರೆ ಕಠಿಣ ಸುರಕ್ಷತಾ ಕ್ರಮಗಳು, ಪರಿಸರ ಮೌಲ್ಯಮಾಪನ, ಪಾರದರ್ಶಕತೆ ಹಾಗೂ ಅರ್ಥಪೂರ್ಣ ಸಾರ್ವಜನಿಕ ಸಮಾಲೋಚನೆ ಕಡ್ಡಾಯವಾಗಬೇಕು ಎಂದು ತೇಜಸ್ವಿ ಸೂರ್ಯ ಒತ್ತಾಯಿಸಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಶಾಸಕರು, ವಿಧಾನಪರಿಷತ್‌ ಸದಸ್ಯರು ಹಾಗೂ ಸಂಸದರಿಗೆ ಪತ್ರ ಬರೆದು ಮಸೂದೆ ಮುಂದುವರಿಸದಂತೆ ಮನವಿ ಮಾಡಿದ್ದಾಗಿ ಅವರು ತಿಳಿಸಿದ್ದಾರೆ. ಪಾರ್ಕ್‌ಗಳು ಮತ್ತು ಹಸಿರು ಪ್ರದೇಶಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಂವಿಧಾನದ 200ನೇ ವಿಧಿಯಡಿ ತಮ್ಮ ಅಧಿಕಾರವನ್ನು ಬಳಸಿ ಮಸೂದೆಯನ್ನು ರಾಜ್ಯ ವಿಧಾನಮಂಡಲಕ್ಕೆ ಮರುಪರಿಶೀಲನೆಗಾಗಿ ವಾಪಸ್ ಕಳುಹಿಸುವಂತೆ ರಾಜ್ಯಪಾಲರನ್ನು ತೇಜಸ್ವಿ ಸೂರ್ಯ ಒತ್ತಾಯಿಸಿದ್ದಾರೆ.

‘ಕರ್ನಾಟಕದ ಸಂರಕ್ಷಿತ ಪಾರ್ಕ್‌ಗಳು ಮತ್ತು ಹಸಿರು ಪ್ರದೇಶಗಳನ್ನು ಯಾವುದೇ ರೀತಿಯ ಹಿಂತಿರುಗಿಸಲಾಗದ ರೀತಿಯ ಪರಭಾರೆಗೆ ಒಳಪಡಿಸುವ ಮೊದಲು ಸಂಪೂರ್ಣ ಸಂವಿಧಾನಾತ್ಮಕ, ಪರಿಸರ ಹಾಗೂ ಸಾರ್ವಜನಿಕ ಪರಿಶೀಲನೆ ನಡೆಯಬೇಕು’ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹದಲ್ಲಿ 19 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರದಲ್ಲಿ ಕಟ್ಟೆಚ್ಚರ!

Chandra Grahan 2026: ವರ್ಷದ ಕೊನೆಯ ಸುದೀರ್ಘ ಚಂದ್ರಗ್ರಹಣ; ಭಾರತದಲ್ಲಿ ಸೂತಕ ಕಾಲ ಇಲ್ಲ, ಯಾಕೆ ಗೊತ್ತ?

2ನೇ ಟೆಸ್ಟ್ ಮೇಲೆ ಭಾರತ ಬಿಗಿ ಹಿಡಿತ: ಮಳೆಕಾಟದಿಂದ 4ನೇ ದಿನದಾಟ ಬೇಗನೇ ಅಂತ್ಯ

Toxic: ಭರ್ಜರಿ ಓಪನಿಂಗ್, ಮೊದಲ ದಿನವೇ ಪಠಾಣ್, ಅನಿಮಲ್ ದಾಖಲೆ ಉಡೀಸ್, ಸಂಜೆ ವೇಳೆಗೆ 70 ಕೋಟಿ ಗೂ ಅಧಿಕ ಕಲೆಕ್ಷನ್!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!