ಚಿಕ್ಕಮಗಳೂರು/ಕಾರವಾರ: ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆ ಚಿಕ್ಕಮಗಳೂರಿನ ಟಿಪ್ಪು ನಗರದಲ್ಲಿ ಐ ಲವ್ ಮೊಹಮ್ಮದ್ ಬ್ಯಾನರ್ ಅಳವಡಿಕೆ ಮಾಡಲಾಗಿದ್ದು ಇದು ವಿವಾದದ ಕಿಡಿ ಹೊತ್ತಿಸಿದೆ. ಕಳೆದ ವರ್ಷ ಈದ್ ಮಿಲಾದ್ ವೇಳೆ ಉತ್ತರ ಪ್ರದೇಶದ ಕಾನ್ಪುರದಿಂದ ಪ್ರಾರಂಭವಾಗಿದ್ದ ಈ ರೀತಿಯ ಬ್ಯಾನರ್ ವಿವಾದ, ಕರ್ನಾಟಕ ಸೇರಿ ದೇಶಾದ್ಯಂತ ಸದ್ದು ಮಾಡಿತ್ತು. ಅದೇ ಬ್ಯಾನರ್ ಈಗ ಚಿಕ್ಕಮಗಳೂರಿನಲ್ಲಿ ಮತ್ತೆ ಕಾಣಿಸಿಕೊಂಡಿದೆ.
ಮತ್ತೊಂದೆಡೆ, ಉತ್ತರ ಕನ್ನಡದ ಅಂಕೋಲಾ ಪಟ್ಟಣದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕೆಲವರು ಪ್ಯಾಲೆಸ್ತೀನ್ ಧ್ವಜವನ್ನು ಪ್ರದರ್ಶಿಸಿದ್ದಾರೆ. ಇದನ್ನು ನೋಡಿದ ತಕ್ಷಣ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು ಸ್ಥಳದಲ್ಲೇ ಧ್ವಜವನ್ನು ವಶಕ್ಕೆ ಪಡೆದು ಮುನ್ನೆಚ್ಚರಿಕೆ ನೀಡಿದ್ದಾರೆ. ಪ್ಯಾಲೆಸ್ತೀನ್ ಧ್ವಜವನ್ನು ಹಾರಿಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಮೆರವಣಿಗೆ ಶಾಂತಿಯುತವಾಗಿ ಮುಂದುವರಿಯಲು ಅವಕಾಶ ಮಾಡಿಕೊಟ್ಟರು.