ನವದೆಹಲಿ: ನೇಪಾಳದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದ ಬದುಕುಳಿದ ಕನ್ನಡಿಗ ಮಲ್ಲಿನಾಥ್ ಅವರೊಂದಿಗೆ ಕರ್ನಾಟಕ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಗುರುವಾರ ವೀಡಿಯೊ ಕರೆ ಮೂಲಕ ಮಾತನಾಡಿ, ಅವರಿಗೆ ಧೈರ್ಯ ತುಂಬಿದರು.
"ಧೈರ್ಯವಾಗಿರಿ. ಸುರಕ್ಷಿತ ಸ್ಥಳದಲ್ಲಿ ಇರುವುದರಿಂದ ಹೊರ ಬರುವ ಪ್ರಯತ್ನ ಮಾಡುವುದು ಬೇಡ. ನಿಮ್ಮ ಜೊತೆ ನಮ್ಮ ಸರ್ಕಾರವಿದೆ. ನಿಮ್ಮ ಸಂಕಷ್ಟಕ್ಕೆ ನಾವು ಸ್ಪಂದಿಸುತ್ತೇವೆ" ಎಂದು ಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
"ಕರ್ನಾಟಕದಿಂದ ನೇಪಾಳ ಪ್ರವಾಸಕ್ಕೆ ಹೊರಟವರ ಸಂಪರ್ಕ ಕಡಿತವಾಗಿದೆ. ಹುಡುಕಾಟದ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಯಾರೂ ಕೂಡ ಎದೆಗುಂದುವ ಅಗತ್ಯವಿಲ್ಲ. ನಾವೆಲ್ಲ ಕನ್ನಡಿಗರು. ನಮ್ಮ ಸರ್ಕಾರ ನಿಮ್ಮ ಜೊತೆಯಲ್ಲಿರುತ್ತದೆ’ ಎಂದು ಹೇಳಿದರು. ಸಿಎಂಒ ಹಂಚಿಕೊಂಡ ವೀಡಿಯೊದಲ್ಲಿ, ಶಿವಕುಮಾರ್ ಅವರು ಮಲ್ಲಿನಾಥ್ ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸುತ್ತಿರುವುದನ್ನು ಕಾಣಬಹುದಾಗಿದೆ.
ಮಲ್ಲಿನಾಥ್, ತಾವು ಡಿಕೆ ಶಿವಕುಮಾರ್ ಅಭಿಮಾನಿ ಎಂದು ಸಿಎಂಗೆ ಹೇಳಿದ್ದಾರೆ. ಹಠಾತ್ ಪ್ರವಾಹ ಸಂಭವಿಸುವ 10 ನಿಮಿಷಗಳ ಮೊದಲು ತಾನು ತಪ್ಪಿಸಿಕೊಂಡೆ ಎಂದು ಮಲ್ಲಿನಾಥ್ ಹೇಳಿದರು.
ತಾನು ದೇವರ ಭಕ್ತನಾಗಿದ್ದು "ಪ್ರಯತ್ನಗಳು ವಿಫಲವಾಗಬಹುದು, ಆದರೆ ಪ್ರಾರ್ಥನೆಗಳು ವಿಫಲವಾಗುವುದಿಲ್ಲ" ಎಂಬ ಸಿಎಂ ಮಾತುಗಳನ್ನು ನಂಬುವುದಾಗಿ ಅವರು ಶಿವಕುಮಾರ್ ಅವರಿಗೆ ತಿಳಿಸಿದರು.
"ನಾನು ಬೇರೆ ಪಕ್ಷದವನಾಗಿರಬಹುದು, ಆದರೆ ನಾನು ನಿಮ್ಮ ಅಭಿಮಾನಿ. ನಾನು ಕೂಡ ದೇವರ ಭಕ್ತ" ಎಂದು ಅವರು ಶಿವಕುಮಾರ್ ಅವರಿಗೆ ಹೇಳಿದರು. ಮಲ್ಲಿನಾಥ್ ಸುರಕ್ಷಿತವಾಗಿರುವುದರಿಂದ ಆತುರಪಡದೆ ಸ್ವಲ್ಪ ಸಮಯ ಅಲ್ಲೇ ಇರುವಂತೆ ಶಿವಕುಮಾರ್ ಸಲಹೆ ನೀಡಿದರು. "ಯಾವುದೇ ಪಕ್ಷವಾದರೂ, ನಾವೆಲ್ಲರೂ ಕನ್ನಡಿಗರು. ನಾವೆಲ್ಲರೂ ಕೈಜೋಡಿಸಬೇಕು" ಎಂದು ಡಿಕೆ ಶಿವಕುಮಾರ್ ಮಲ್ಲಿನಾಥ್ ಅವರಿಗೆ ಹೇಳಿದರು.
ನೇಪಾಳದಲ್ಲಿರುವ ಕರ್ನಾಟಕದ ಇತರ ಕೆಲವು ಪ್ರವಾಸಿಗರನ್ನು ತಲುಪಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ ಎಂದು ಮುಖ್ಯಮಂತ್ರಿಗಳು ಅವರಿಗೆ ಹೇಳಿದರು.
ಅವರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿರುವುದಾಗಿ ಮಲ್ಲಿನಾಥ್ ಪ್ರತಿಕ್ರಿಯಿಸಿದರು. ದೇಶದ ಮಧ್ಯ ಜಿಲ್ಲೆಗಳಲ್ಲಿ ಹಠಾತ್ ಪ್ರವಾಹ ಉಂಟಾಗಿ ವ್ಯಾಪಕ ಹಾನಿ ಸಂಭವಿಸಿದೆ. ಮಾನಸ ಸರೋವರ ಯಾತ್ರೆ ಕೈಗೊಂಡಿದ್ದ ಹಲವಾರು ಯಾತ್ರಿಕರು ಸೇರಿದಂತೆ 130 ಕ್ಕೂ ಹೆಚ್ಚು ಭಾರತೀಯರು ನಾಪತ್ತೆಯಾಗಿದ್ದಾರೆ. ಇನ್ನೂ ಹಲವಾರು ಜನರು ನೇಪಾಳದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.