ನಂಜನಗೂಡು (ಮೈಸೂರು): ದಕ್ಷಿಣ ಕಾಶಿ ಎಂದೇ ಹೆಸರಾದ ಮೈಸೂರು ಜಿಲ್ಲೆಯ ಪ್ರಸಿದ್ಧ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ 2024-25ನೇ ಸಾಲಿನ ಲೆಕ್ಕಪತ್ರದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ಶಾಸಕ ದರ್ಶನ್ ಧ್ರುವನಾರಾಯಣ್ ಅವರ ನೇತೃತ್ವದಲ್ಲಿ ನಡೆದ ದೇವಾಲಯದ ವ್ಯವಸ್ಥಾಪನಾ ಸಮಿತಿ ಕುಂದು-ಕೊರತೆಗಳ ಸಭೆಯಲ್ಲಿ ವಾರ್ಷಿಕ ಆಯವ್ಯಯ ಪರಿಶೀಲನೆ ನಡೆಸಿದಾಗ, 2024-25ನೇ ಸಾಲಿನ ಲೆಕ್ಕಪತ್ರದಲ್ಲಿ ಸುಮಾರು ₹4 ರಿಂದ ₹5 ಕೋಟಿ ರೂಪಾಯಿಗಳ ಭಾರೀ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ದೇವಾಲಯದ ವ್ಯವಸ್ಥಾಪನ ಸಮಿತಿ ಸಭೆಯಲ್ಲಿ ಸಮಗ್ರ ತನಿಖೆಗೆ ಆದೇಶಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:
4 ರಿಂದ 5 ಕೋಟಿ ವಂಚನೆ?
ಶಾಸಕ ದರ್ಶನ್ ಧ್ರುವನಾರಾಯಣ್ ಅವರ ನೇತೃತ್ವದಲ್ಲಿ ನಡೆದ ದೇವಾಲಯದ ವ್ಯವಸ್ಥಾಪನಾ ಸಮಿತಿಯ ವಾರ್ಷಿಕ ಸಭೆಯಲ್ಲಿ, 2024-25ನೇ ಸಾಲಿನ ಲೆಕ್ಕಪತ್ರವನ್ನು ಪರಿಶೀಲಿಸಿದಾಗ, ದೇವಾಲಯಕ್ಕೆ ಒಟ್ಟು ₹25.86 ಕೋಟಿ ರೂ. ಆದಾಯ ಬಂದಿದ್ದು, ಅದರಲ್ಲಿ ಬರೋಬ್ಬರಿ ₹25.68 ಕೋಟಿ ರೂ. ಖರ್ಚು ತೋರಿಸಲಾಗಿದೆ. ಅದರಲ್ಲೂ, ಬಂದ ಆದಾಯದಲ್ಲಿ ಬಹುಪಾಲು ಹಣವನ್ನು ವಿವಿಧ ವೆಚ್ಚಗಳ ಹೆಸರಿನಲ್ಲಿ ಖಾಲಿ ಮಾಡಿರುವುದರ ಹಿಂದೆ ₹4 ರಿಂದ ₹5 ಕೋಟಿ ರೂ. ದುರುಪಯೋಗ ಆಗಿರುವ ಬಲವಾದ ಸಂಶಯ ಮೂಡಿದೆ. ಇನ್ನು, ದೇವಾಲಯದ ಈ ಖರ್ಚು-ವೆಚ್ಚಗಳ ಲೆಕ್ಕಪತ್ರವನ್ನು ಪರಿಶೀಲಿಸಿದ ಸ್ಥಳೀಯ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ತೀವ್ರ ಆಶ್ಚರ್ಯ ಹಾಗೂ ಆಘಾತ ವ್ಯಕ್ತಪಡಿಸಿ, ಕ್ಕಪತ್ರದ ಸತ್ಯಾಸತ್ಯತೆಯನ್ನು ಹೊರತರಲು ಉನ್ನತ ಮಟ್ಟದ ತನಿಖೆಗೆ ಸೂಚನೆ ನೀಡಿದ್ದಾರೆ.
₹25 ಕೋಟಿ ಆದಾಯ, ₹17 ಲಕ್ಷ ಮಾತ್ರ ಉಳಿತಾಯ
ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾದ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ 2024-25 ನೇ ಸಾಲಿನ ಖರ್ಚು-ವೆಚ್ಚದ ಲೆಕ್ಕಪತ್ರಗಳ ಪ್ರಕಾರ, ದೇವಾಲಯಕ್ಕೆ ಬರೋಬ್ಬರಿ ₹25 ಕೋಟಿ 86 ಲಕ್ಷಕ್ಕೂ ಅಧಿಕ ಆದಾಯ ಬಂದಿದ್ದು, ಅದರಲ್ಲಿ ಅಧಿಕಾರಿಗಳು ಬರೋಬ್ಬರಿ ₹25 ಕೋಟಿ ₹68 ಲಕ್ಷ ರೂಪಾಯಿಗಳನ್ನು ಖರ್ಚು ತೋರಿಸಿ ಕೇವಲ ₹17.84 ಲಕ್ಷ ರೂಪಾಯಿಗಳನ್ನು ಮಾತ್ರ ಉಳಿತಾಯ ಎಂದು ತೋರಿಸಿದ್ದಾರೆ. ಅದರಂತೆ, ದೇವಾಲಯದ ಸಿಸಿಟಿವಿ ರಿಪೇರಿಗೆ ₹29 ಲಕ್ಷ, ಪಾರ್ಕಿಂಗ್ ನಿರ್ವಹಣೆಗೆ ₹17 ಲಕ್ಷ, ಲಾಡು ತಯಾರಿಕೆಗೆ ₹3 ಕೋಟಿಗೂ ಅಧಿಕ ಹಾಗೂ ಅತಿಥಿಗಳ ಶಲ್ಯ ಖರೀದಿಗೆ ₹11 ಲಕ್ಷ ರೂಪಾಯಿ ವೆಚ್ಚ ತೋರಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಅದರಲ್ಲೂ, ಈ ಹಿಂದಿನ ವರ್ಷಗಳಲ್ಲಿ ಸುಮಾರು ₹4 ಕೋಟಿಗೂ ಹೆಚ್ಚು ಉಳಿತಾಯವಾಗುತ್ತಿದ್ದ ಸಂದರ್ಭದಲ್ಲಿ 2024-25ರಲ್ಲಿ ಮಾತ್ರ ಉಳಿತಾಯ ಇಷ್ಟು ಕಡಿಮೆಯಾಗಿರುವುದೇಕೆ ಎಂಬ ಪ್ರಶ್ನೆ ಎತ್ತಿದ್ದಾರೆ.
ಏತನ್ಮಧ್ಯೆ, ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯದ ಕಳಲೆ ದೇವಸ್ಥಾನಕ್ಕೂ ₹18 ಲಕ್ಷ ವೆಚ್ಚದ ಲೆಕ್ಕ ತೋರಿಸಿರುವ ಬಗ್ಗೆ ಪ್ರಶ್ನೆಗಳು ಎದ್ದಿವೆ. ಯಾಕಂದ್ರೆ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ 2024-25 ನೇ ಸಾಲಿನ ಖರ್ಚು-ವೆಚ್ಚದ ಲೆಕ್ಕಪತ್ರಗಳ ಪ್ರಕಾರ, ಶ್ರೀ ಲಕ್ಷ್ಮೀಕಾಂತ ಸ್ವಾಮಿ ದೇವಾಲಯದ ಕಾಮಗಾರಿಗೆ ₹14 ಲಕ್ಷ ಹಾಗೂ ಜಾತ್ರೆಗೆ ₹4 ಲಕ್ಷ ಖರ್ಚು ಮಾಡಲಾಗಿದೆ. ಆದರೆ, ಆ ವರ್ಷ, ದೇವಾಲಯದಲ್ಲಿ ಯಾವುದೇ ಕಾಮಗಾರಿ ನೆಡದಿಲ್ಲ ಎನ್ನಲಾಗಿದೆ. ಹಾಗಾಗಿ, ಶ್ರೀಕಂಠೇಶ್ವರ ದೇವಾಲಯದ ಹೆಸರಲ್ಲಿ ಲೆಕ್ಕಪತ್ರದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿರಬಹುದು ಎನ್ನಲಾಗಿದೆ.