ತುಮಕೂರು: ನೀವು ಮುಂದಿನ ದಿನಗಳಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಯಾರಿಗೆ ಯಾವ ಸ್ಥಾನ ಕೊಡಬೇಕು ಎಂಬುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಆಯಾ ಕಾಲಕ್ಕೆ ಏನೇನು ಆಗಬೇಕೋ ಅದು ಆಗುತ್ತದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಉತ್ತರಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಕುರಿತು ಮಾತನಾಡಿ, ಪದೇ ಪದೇ ನಾನು ಹೇಳೋದಿಕ್ಕೆ ತಯಾರಿಲ್ಲ. ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು. ದೇಶದ ಅಭಿವೃದ್ಧಿಯಲ್ಲಿ ರಾಷ್ಟ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಚಿಂತನೆಗಳು, ಆಲೋಚನೆಗಳು ಇವೆ. ನಮ್ಮೆಲ್ಲರಿಗೂ ಅವರು ಆದರ್ಶ. ವರಿಷ್ಠರು ಏನು ತೀರ್ಮಾನ ಮಾಡ್ತಾರೋ ಅದಕ್ಕೆ ನಾವೆಲ್ಲಾ ಬದ್ಧರಾಗಿರುತ್ತೇವೆ ಎಂದು ಹೇಳಿದರು.
ಬಿಡದಿ ಟೌನ್ಶಿಪ್ ನಿರ್ಮಾಣ ವಿಚಾರವಾಗಿ ಪ್ರತಿಕ್ರಿಯಿಸಿ, ಈಗಾಗಲೇ ಹೇಳಿ ಆಗಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವ್ರು ಸಹ ಅದನ್ನು ಪ್ರೆಸ್ಟೀಜ್ ಆಗಿ ತಗೋಬಾರದು. ರಾಜ್ಯ ಸರ್ಕಾರ ಮನಸ್ಸು ಮಾಡಿದ್ರೆ 50 ಬಿಡದಿಗಳನ್ನು ಮಾಡಬಹುದು.
ಅದೊಂದೇ ಬಿಡದಿಗೆ ಯಾಕೆ ದಿನ ಬೆಳಗಾದರೆ ಜಪ ಮಾಡಬೇಕು. ಏನ್ರಿ ಅವಶ್ಯಕತೆ ಇದೆ. ಒಂದು ಬಿಡದಿ ಅಲ್ಲ, 50 ಬಿಡದಿ ಮಾಡಲಿ. ಆದರೆ ಬಿಡದಿ ಜನ ಬೇಡ ಅಂದಾಗ ನಾವ್ಯಾರು ಅದನ್ನು ಮಾಡೋಕೆ. ಆ ಜನ್ರ ತೀರ್ಮಾನ ಏನಿದೆಯೋ ಅದರಂತೆ ನಾವು ನಡೆದುಕೊಳ್ಳಬೇಕಾಗುತ್ತೆ ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದ್ರು.
ಇನ್ನು ತಿಪಟೂರು ತಾಲೂಕನ್ನು ಬರಪೀಡಿತ ಪ್ರದೇಶ ಪಟ್ಟಿಯಿಂದ ಕೈಬಿಟ್ಟ ವಿಚಾರ ಕುರಿತು ಮಾತನಾಡಿ, ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಅವ್ರು ಮೂರು ದಿನಗಳ ಕಾಲ ರಜೆ ಇದಿನಿ. ಸೋಮವಾರ ಬಂದು ಎರಡನೇ ಲಿಸ್ಟ್ ನಲ್ಲಿ ಸೇರುಸ್ತಿನಿ ಅನ್ನುವ ಮಾತನ್ನು ಹೇಳಿದ್ದಾರೆ. ಕೆಲವೊಮ್ಮೆ ಎಲ್ಲವನ್ನು ಸೇರಿಸುವ ಕೆಲಸ ಆಗಿರಲ್ಲ. ಅದಕ್ಕೆ ಉಪ್ಪು ಖಾರ ಹಾಕುವ ಕೆಲಸ ಬೇಡ ಎಂದರು.
ಇನ್ನೂ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡು ಉದ್ಘಾಟನೆಯಾದ ತಕ್ಷಣವೇ ನಿಲ್ದಾಣಕ್ಕೆ ನಡೆದಾಡುವ ದೇವರು ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಹೆಸರನ್ನು ಅಧಿಕೃತವಾಗಿ ನಾಮಕರಣ ಮಾಡಲಾಗುವುದು ಎಂದರು. ಬರುವ ವರ್ಷ ಮೇ ಅಥವಾ ಜೂನ್ ತಿಂಗಳಲ್ಲಿ ನವೀಕೃತ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲು ತೀರ್ಮಾನಿಸಲಾಗಿದೆ ಎಂದು ಸೋಮಣ್ಣ ತಿಳಿಸಿದ್ದಾರೆ.
ನಾನು ನಾಗೇಂದ್ರ ರಾಜಿನಾಮೆಯನ್ನು ಸ್ವಾಗತಿಸುತ್ತೇನೆ. ಅವರು ಆರೋಪಿ, ಅಪರಾಧಿ ಆಗಿರಲಿಲ್ಲ. ರಾಜ್ಯ ಸರ್ಕಾರಕ್ಕೆ ಒಂದು ನಂಬಿಕೆ ಇರುತ್ತೆ. ವಿರೋಧ ಪಕ್ಷಗಳ ಭಾವನೆಗೆ ಸ್ಪಂದಿಸುವ ಜೊತೆಗೆ ಮಾಡಿರುವ ಕೆಲಸ ಒಳ್ಳೆಯದಾಗಿದೆ. ನಾಗೇಂದ್ರಗೆ ಒಳ್ಳೆಯಾದಾಗಲಿ ಎಂದರು.
ದಲಿತರು, ದೊಡ್ಡವರು, ಸವರ್ಣಿಯರು ಅದೆಲ್ಲವನ್ನು ತಲೆಯಿಂದ ತೆಗೆದುಹಾಕಿ. ವ್ಯಕ್ತಿ ದೊಡ್ಡವರಲ್ಲ, ವ್ಯಕ್ತಿಗಿಂತ ರಾಜ್ಯ, ದೇಶ ದೊಡ್ಡದು ಅಂತ ನಾವು ಪದೇ ಪದೇ ಮಾತನಾಡುತ್ತೇವೆ ಎಂದರು.
ನಾಗೇಂದ್ರ ಬುದ್ಧಿವಂತ ಇದ್ದಾನೆ. ಒಳ್ಳೆ ತೀರ್ಮಾನ ತೆಗೆದುಕೊಂಡಿದ್ದಾನೆ. ಅವನ ತೀರ್ಮಾನವನ್ನು ನಾನು ಸ್ವಾಗತ ಮಾಡುತ್ತೇನೆ. ಸಣ್ಣಪುಟ್ಟದ್ದು ಎಲ್ಲಾ ಒಂದು ಕಡೆ ಉಪ್ಪು ಖಾರ ಬೆರೆಸುವಂತಹದ್ದು ಇರುತ್ತೆ. ನಾಗೇಂದ್ರ ತೀರ್ಮಾನ ಸರಿಯಿದೆ. ವಿರೋಧ ಪಕ್ಷವಾಗಿ ನಮ್ಮ ಕರ್ತವ್ಯ ನಾವು ಮಾಡಿದ್ದೇವೆ. ಅವನಿಗೆ ಗೊತ್ತಿದೆ, ತಾನೊಬ್ಬ ಆರೋಪಿ ಅನ್ನೋದು. ಆರೋಪ ಮುಕ್ತವಾಗುವ ತನಕ ಈಗ ತೆಗೆದುಕೊಂಡಿರುವ ತೀರ್ಮಾನ ಸರಿ ಇದೆ ಎಂದು ಹೇಳಿದರು.