ಸಂಗ್ರಹ ಚಿತ್ರ 
ರಾಜ್ಯ

GBA ಬಂದು ವರ್ಷ ಉರುಳಿದರೂ ತೀರದ ಬೆಂಗಳೂರಿನ ಮೂಲಸೌಕರ್ಯ ಗೋಳು; ಕಾಗದಕ್ಕಷ್ಟೇ ಸೀಮಿತವಾಯಿತೇ ಆಡಳಿತ ಸುಧಾರಣೆ..?

ಸಿಬ್ಬಂದಿ ಕೊರತೆ ಪ್ರಮುಖ ಸಮಸ್ಯೆಯಾಗಿದ್ದು, ಎ, ಬಿ, ಸಿ ಮತ್ತು ಡಿ ವರ್ಗಗಳ ಅಧಿಕಾರಿಗಳು ಸೇರಿದಂತೆ 6,500 ಸಿಬ್ಬಂದಿಯನ್ನು ನೇಮಿಸುವಂತೆ ಜಿಬಿಎ ಮಾಡಿದ್ದ ಮನವಿಗೆ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ರಚನೆಯಾಗಿ ಒಂದು ವರ್ಷ ಕಳೆಯುತ್ತಿದ್ದರೂ ಬೆಂಗಳೂರಿನ ನಾಗರಿಕರಿಗೆ ಮೂಲಸೌಕರ್ಯ, ಕಸ ಹಾಗೂ ಟ್ರಾಫಿಕ್ ಸಮಸ್ಯೆಗಳಿಂದ ಮುಕ್ತಿ ಸಿಕ್ಕಿಲ್ಲ.

ಚುನಾಯಿತ ಪ್ರತಿನಿಧಿಗಳಿಲ್ಲದೆ ನಡೆಯುತ್ತಿರುವ ಆಡಳಿತದಿಂದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಶೀಘ್ರದಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಆಡಳಿತವನ್ನು ಜನರ ಬಳಿಗೆ ಕೊಂಡೊಯ್ದು ನಾಗರಿಕರ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಪರಿಹಾರ ಒದಗಿಸುವ ಉದ್ದೇಶದಿಂದ ರಚಿಸಲಾದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸೆಪ್ಟೆಂಬರ್ 2ರಂದು ಒಂದು ವರ್ಷ ಪೂರೈಸಲಿದೆ. ಆದರೆ ನಗರದ ಹದಗೆಟ್ಟ ರಸ್ತೆಗಳು, ಫುಟ್‌ಪಾತ್‌ಗಳ ಕೊರತೆ, ಕಸದ ಸಮಸ್ಯೆ ಹಾಗೂ ಪಾಲಿಕೆ ಕಚೇರಿಗಳಿಗೆ ಅಲೆದಾಡದೆ ದಾಖಲೆಗಳನ್ನು ಪಡೆಯುವಂತಹ ಸರಳ ಸೇವೆಗಳಲ್ಲೂ ನಾಗರಿಕರ ಸಂಕಷ್ಟಗಳು ಮುಂದುವರಿದಿವೆ.

ನಾಗರಿಕರಿಗೆ ಸೇವೆ ಒದಗಿಸುವುದಿರಲಿ, ಜಿಬಿಎ ಅಡಿಯಲ್ಲಿ ರಚಿಸಲಾದ ಐದು ನಗರ ಪಾಲಿಕೆಗಳೇ ಹಲವು ಆಡಳಿತಾತ್ಮಕ ಸಮಸ್ಯೆಗಳನ್ನು ಎದುರಿಸುತ್ತಿವೆ.

ಸಿಬ್ಬಂದಿ ಕೊರತೆ ಪ್ರಮುಖ ಸಮಸ್ಯೆಯಾಗಿದ್ದು, ಎ, ಬಿ, ಸಿ ಮತ್ತು ಡಿ ವರ್ಗಗಳ ಅಧಿಕಾರಿಗಳು ಸೇರಿದಂತೆ 6,500 ಸಿಬ್ಬಂದಿಯನ್ನು ನೇಮಿಸುವಂತೆ ಜಿಬಿಎ ಮಾಡಿದ್ದ ಮನವಿಗೆ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.

ಇದರಿಂದ ಕಸ ನಿರ್ವಹಣೆ, ಗುಂಡಿ ಬಿದ್ದ ರಸ್ತೆಗಳು, ಅನಧಿಕೃತ ಕಟ್ಟಡಗಳು ಸೇರಿದಂತೆ ವಿವಿಧ ದೂರುಗಳನ್ನು ಪರಿಶೀಲಿಸಲು ಅಗತ್ಯವಿರುವ ಎಂಜಿನಿಯರ್‌ಗಳ ಕೊರತೆ ಮುಂದುವರಿದಿದೆ.

ಈ ನಡುವೆ ಜಿಬಿಎ ರಚನೆಯೇ ಅಸಂವಿಧಾನಿಕ ಎಂದು ಕೆಲವು ಹೋರಾಟಗಾರರು ಆರೋಪಿಸಿದ್ದಾರೆ. ಪಾಲಿಕೆಯನ್ನು ವಿಭಜಿಸುವ ಉದ್ದೇಶವೇ ಚುನಾವಣೆ ಮುಂದೂಡಿ, ಅಧಿಕಾರಿಗಳ ಮೂಲಕ ವಾರ್ಡ್‌ಗಳ ಮೇಲೆ ಶಾಸಕರ ಹಿಡಿತವನ್ನು ಮುಂದುವರಿಸುವುದಾಗಿತ್ತು ಎಂದು ಟೀಕಿಸಿದ್ದಾರೆ. ಆದರೆ ಐದು ನಗರ ಪಾಲಿಕೆಗಳಿಗೆ ಚುನಾವಣೆ “ಖಂಡಿತವಾಗಿಯೂ ನಡೆಯಲಿದೆ” ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಈ ನಡುವೆ ಸಚಿವ ಕೃಷ್ಣ ಬೈರೇಗೌಡ ಅವರು ಟಿಎನ್‌ಐಇಗೆ ಪ್ರತಿಕ್ರಿಯಿಸಿ, ನಗರ ಪಾಲಿಕೆಗಳ ನಡುವೆ ಸಮನ್ವಯ ಸಾಧಿಸಲು ಜಿಬಿಎ ಒಂದು ವ್ಯವಸ್ಥೆಯನ್ನು ರೂಪಿಸಿದೆ ಹಾಗೂ ಹೆಚ್ಚು ಸಕ್ರಿಯ ಮತ್ತು ದೀರ್ಘಕಾಲೀನ ಆಡಳಿತದತ್ತ ಬದಲಾವಣೆಗೆ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ.

ಪರಿವರ್ತನೆಯ ಅವಧಿಯಲ್ಲಿ ಸತತವಾಗಿ ನಡೆದ ಹಲವು ಸಮೀಕ್ಷೆಗಳು ಮತ್ತು ವಿವಿಧ ಕಾರ್ಯಚಟುವಟಿಕೆಗಳಿಂದ ಆಡಳಿತದ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಿದೆ. ಮುಂದಿನ ಮೂರು ತಿಂಗಳಲ್ಲಿ 2,500 ಕಿ.ಮೀ. ರಸ್ತೆ ದುರಸ್ತಿ ಹಾಗೂ ಕಸ ನಿರ್ವಹಣೆಗೆ ಜಿಬಿಎ ಆದ್ಯತೆ ನೀಡಲಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಸಿಬ್ಬಂದಿ ಕೊರತೆ ಪ್ರಮುಖ ಸಮಸ್ಯೆಯಾಗಿದೆ ಎಂದು ಒಪ್ಪಿಕೊಂಡ ಅವರು, “ನಗರವನ್ನು ಅರ್ಥಮಾಡಿಕೊಂಡು ನಿರ್ವಹಿಸಲು ನಾಗರಿಕ ಸಿಬ್ಬಂದಿಯ ಸಾಮರ್ಥ್ಯ ವೃದ್ಧಿ, ತರಬೇತಿ ಹಾಗೂ ಕೌಶಲ್ಯ ಹೆಚ್ಚಿಸುವತ್ತ ಈಗ ಗಮನಹರಿಸಬೇಕಿದೆ. ಟಿಎಂ ವಿಜಯಭಾಸ್ಕರ್ ನೇತೃತ್ವದ ಸಮಿತಿ ಸಿಬ್ಬಂದಿ ಸಮಸ್ಯೆಯನ್ನು ಪರಿಶೀಲಿಸುತ್ತಿದೆ. ಅದರ ಶಿಫಾರಸುಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದ್ದು, ಸರ್ಕಾರ ಈ ಪ್ರಕ್ರಿಯೆಯನ್ನು ಮುಂದುವರಿಸಲಿದೆ ಎಂದರು.

ಆದರೆ, ನಾಗರಿಕ ಹೋರಾಟಗಾರರು ಜಿಬಿಎ ರಚನೆ ಪ್ರಕ್ರಿಯೆಯು ನಗರದ ಸಮಯ ಮತ್ತು ಸಂಪನ್ಮೂಲಗಳನ್ನು ವ್ಯರ್ಥ ಮಾಡಿದ ದುಬಾರಿ ಹಾಗೂ ಅನಗತ್ಯ ಕ್ರಮವಾಗಿದೆ ಎಂದು ಆರೋಪಿಸಿದ್ದಾರೆ.

ಬೆಂಗಳೂರಿನ ನಾಗರಿಕರ ವೇದಿಕೆಯ ಸಂಚಾಲಕ ಸಂದೀಪ್ ಅನಿರುದ್ಧನ್ ಮಾತನಾಡಿ, ಜಿಬಿಎ ರಚನೆಯ ಸಾಂವಿಧಾನಿಕತೆಯನ್ನೇ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಕನಿಷ್ಠ ನಾಲ್ಕು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ವಿಚಾರಣೆಯಲ್ಲಿವೆ ಎಂದರು.

ಪರಿವರ್ತನೆಯನ್ನು ತರಾತುರಿಯಲ್ಲಿ ಕೈಗೊಂಡ ಪರಿಣಾಮ ಉಂಟಾದ ಗೊಂದಲದಿಂದ ಬಹುತೇಕ ಇಲಾಖೆಗಳು ಇನ್ನೂ ಚೇತರಿಸಿಕೊಂಡಿಲ್ಲ. ಅಧಿಕಾರಿಗಳನ್ನು ನಿಯೋಜಿಸಲು ಮತ್ತು ಆಡಳಿತಾತ್ಮಕ ವ್ಯವಸ್ಥೆಯನ್ನು ಸರಿಪಡಿಸಲು ಹಲವು ತಿಂಗಳುಗಳು ಬೇಕಾಯಿತು. ನಂತರ ವಾರ್ಡ್‌ಗಳ ಗಡಿ ಪುನರ್‌ನಿರ್ಣಯದಿಂದ ಮತ್ತಷ್ಟು ಗೊಂದಲ ಉಂಟಾಯಿತು.

ತಿಂಗಳುಗಳ ಕಾಲ ವಾರ್ಡ್‌ಗಳಿಗೆ ಅಧಿಕಾರಿಗಳನ್ನು ನಿಯೋಜಿಸದ ಕಾರಣ ದೈನಂದಿನ ಸಾಮಾನ್ಯ ಕೆಲಸಗಳೂ ಸ್ಥಗಿತಗೊಂಡವು. ಇದರಿಂದ ಆಡಳಿತ ವ್ಯವಸ್ಥೆ ಅಸ್ತವ್ಯಸ್ತಗೊಂಡು ನಗರದ ಹಲವು ಭಾಗಗಳಲ್ಲಿ ನಾಗರಿಕ ಪರಿಸ್ಥಿತಿ ಹದಗೆಟ್ಟಿತು ಎಂದು ಹೇಳಿದ್ದಾರೆ.

ಜಾತಿ ಸಮೀಕ್ಷೆ, ಜನಗಣತಿ ಕಾರ್ಯ ಹಾಗೂ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯಗಳಿಂದ ಆಡಳಿತ ಮತ್ತಷ್ಟು ನಿಷ್ಕ್ರಿಯಗೊಂಡಿತು. ಚುನಾವಣೆ ಮುಂದೂಡುವ ಹಿಂದಿನ ಪ್ರವೃತ್ತಿಯೇ ಮುಂದುವರಿದಿದ್ದು, ಸದ್ಯಕ್ಕೆ ಯಾವುದೇ ಪರಿಹಾರ ಕಾಣಿಸುತ್ತಿಲ್ಲ. ಚುನಾವಣೆ ವಿಳಂಬಗೊಳಿಸುವುದೇ ಜಿಬಿಎ ರಚನೆಯ ಹಿಂದಿನ ಉದ್ದೇಶವಾಗಿರಬಹುದು ಎಂಬ ಭಾವನೆ ಮೂಡುತ್ತಿದೆ ಎಂದು ತಿಳಿಸಿದ್ದಾರೆ.

ಫ್ರೆಂಡ್ಸ್ ಆಫ್ ಲೇಕ್ಸ್ ಸಂಸ್ಥೆಯ ಸಹ-ಸಂಸ್ಥಾಪಕ ರಾಮ್ ಪ್ರಸಾದ್ ಅವರು ಮಾತನಾಡಿ, ಜಿಬಿಎ ಎಂಜಿನಿಯರ್‌ಗಳು ನಾಗರಿಕರ ಸಮಸ್ಯೆಗಳಿಗೆ ಸಮಯಕ್ಕೆ ಸರಿಯಾಗಿ ಸ್ಪಂದಿಸದೆ ಅವರ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸರ್ಕಾರ ಆದ್ಯತೆಯ ಮೇರೆಗೆ ಎಂಜಿನಿಯರ್‌ಗಳನ್ನು ವರ್ಗಾವಣೆ ಮಾಡಬೇಕು. ಅವರು ಶಾಸಕರು ಹೇಳುವುದನ್ನು ಕೇಳಿ ಅದರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಉತ್ತಮ ಕೌಶಲ್ಯ ಹೊಂದಿರುವ ಹೊಸ ಎಂಜಿನಿಯರ್‌ಗಳನ್ನು ಜಿಬಿಎಗೆ ನೇಮಿಸಬೇಕು ಎಂದು ಹೇಳಿದ್ದಾರೆ.

ಆದರೆ, ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರು ಐದು ನಗರ ಪಾಲಿಕೆಗಳ ರಚನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದರಿಂದ ಆಡಳಿತಾತ್ಮಕ ದಕ್ಷತೆ ಹೆಚ್ಚಿದ್ದು, ತ್ವರಿತವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಸಿಬ್ಬಂದಿ ಕೊರತೆ ನಿವಾರಿಸಲು ನೇಮಕಾತಿಗೆ ಸರ್ಕಾರ ಅನುಮೋದನೆ ನೀಡಿದೆ. ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಕ್ಷೇತ್ರಮಟ್ಟದ ಎಂಜಿನಿಯರ್‌ಗಳನ್ನು ನೇಮಿಸಬಹುದು ಎಂದು ತಿಳಿಸಿದ್ದಾರೆ.

ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಕೆರೆ ಅಭಿವೃದ್ಧಿ, ನೀಲಿ-ಹಸಿರು ಮೂಲಸೌಕರ್ಯ, ಸುಸ್ಥಿರತೆ ಮತ್ತು ವಾಸಯೋಗ್ಯ ನಗರ ಯೋಜನೆಗಳಿಗೆ ನಗರ ಪಾಲಿಕೆಗಳು ಅನುದಾನ ಮೀಸಲಿಟ್ಟಿವೆ. ಬಿ-ಸ್ಮೈಲ್ ಯೋಜನೆಗೂ ರಾಜ್ಯದಿಂದ ಗಣನೀಯ ಅನುದಾನ ದೊರೆಯುತ್ತಿದೆ ಎಂದು ಹೇಳಿದ್ದಾರೆ.

ವೈಟ್ ಟಾಪಿಂಗ್ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಹಾಗೂ ತಿಂಗಳ ಅಂತ್ಯದ ವೇಳೆಗೆ ಎಲಿವೇಟೆಡ್ ಕಾರಿಡಾರ್‌ಗಳ ಕಾಮಗಾರಿ ಆರಂಭಿಸುವತ್ತ ಗಮನ ಹರಿಸಲಾಗುವುದು ಎಂದ ಅವರು, ವಿಂಡ್ ಟನಲ್ ಫ್ಲೈಓವರ್, ಹೋಪ್ ಫಾರ್ಮ್ ಮತ್ತು ಕುಂದಲಹಳ್ಳಿ ಮೇಲ್ಸೇತುವೆ ಸೇರಿದಂತೆ ಬಹುಕಾಲದಿಂದ ಬಾಕಿ ಉಳಿದಿರುವ ಯೋಜನೆಗಳನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಪೂರ್ಣಗೊಳಿಸಲು ಜಿಬಿಎ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಲಾರಕ್ ದ್ವೀಪದ ಮೇಲಿನ ದಾಳಿಗೆ ಪ್ರತೀಕಾರ: ಜೋರ್ಡಾನ್‌ನ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ!

ನಾಗೇಂದ್ರ ರಾಜೀನಾಮೆಗೆ ರಾಜ್ಯಪಾಲರ ಅಂಗೀಕಾರ: ಸಂಪುಟದ ಎರಡು ಖಾಲಿ ಸ್ಥಾನ ಭರ್ತಿಗೆ ದೆಹಲಿಗೆ ತೆರಳಿದ ಸಿಎಂ ಡಿಕೆಶಿ!

ಸರ್ಕಾರಿ ಶಾಲೆಗಳಲ್ಲಿ ಶೂ, ಸಾಕ್ಸ್ ವಿತರಣೆ ವಿಳಂಬ; ಸರ್ಕಾರದ ವಿರುದ್ಧ AIDSO ಆಕ್ರೋಶ

ಹಗ್ಗ 16 ಮೊಳ ಇದ್ದರೂ ಕುಣಿಕೆ ನಮ್ಮ ಹತ್ತಿರ ಇದೆ: ಏನೋ ದಬಾಕಕ್ಕೆ ಹೋಗವನೆ, ದಬಾಕೊಂಡೇ ಬರ್ತಾನೆ ಅಂತ ಗೊತ್ತಿತ್ತು; ಯಶ್ ತಾಯಿ

ಅಲ್-ಹಿಂದ್ ಐಸಿಸ್ ಜೊತೆ ಸೇರಿ ಭಯೋತ್ಪಾದಕ ಕೃತ್ಯಕ್ಕೆ‌‌ ಸಂಚು: ಆರೋಪಿಗೆ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ!