ಬೆಂಗಳೂರು: ತೆರಿಗೆ ಅಧಿಕಾರಿಗಳ ದಾಳಿ ವೇಳೆಯೇ ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ 'ತೆರಿಗೆ ಭಯೋತ್ಪಾದನೆ' ವಿರುದ್ಧ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಐಟಿ ದಾಳಿ ಸಂದರ್ಭದಲ್ಲೇ ಖ್ಯಾತ ಉದ್ಯಮಿ ಸಿಜೆ ರಾಯ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವುಂದು ರಾಜ್ಯದ ಇತರೆ ಉಧ್ಯಮಿಗಳ ಆಘಾತಕ್ಕೆ ಕಾರಣವಾಗಿದ್ದು, ನಿರಂತರ ಐಡಿ ದಾಳಿಯಿಂದಲೇ ಮನನೊಂದು ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳ ನಡುವೆಯೇ ರಾಜ್ಯ ಮತ್ತೋರ್ವ ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸರಣಿ ಟ್ವೀಟ್ ಮಾಡಿರುವ ಉದ್ಯಮಿ ಮೋಹನ್ ದಾಸ್ ಪೈ ಸಿ.ಜೆ.ರಾಯ್ ಆತ್ಮಹತ್ಯೆ ಮತ್ತು ಕೇಂದ್ರ ಬಜೆಟ್ ಕುರಿತು ಹಲವು ಅಂಶಗಳನ್ನು ಹಂಚಿಕೊಂಡಿದ್ದಾರೆ.
ಪ್ರಮುಖವಾಗಿ ಸಿಜೆ ರಾಯ್ ಸಾವಿನ ಬಗ್ಗೆ ಮುಕ್ತ ಪಾರದರ್ಶಕವಾಗಿ ತನಿಖೆ ಮಾಡುವಂತೆ ಮೋಹನ್ ದಾಸ್ ಪೈ ಮನವಿ ಮಾಡಿದ್ದು, ಅಲ್ಲದೇ ತೆರಿಗೆ ಅಧಿಕಾರಿಗಳ ದಾಳಿ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಗೆ ಟ್ವೀಟ್ ಮೂಲಕ ವಿಶೇಷ ಮನವಿ ಮಾಡಿದ್ದಾರೆ.
ತೆರಿಗೆ ಭಯೋತ್ಪಾದನೆ
ತೆರಿಗೆ ಅಧಿಕಾರಿಗಳಿಂದ ಹಲವಾರು ಜನರು ಭಯಭೀತರಾಗಿದ್ದಾರೆ. ನಾಗರಿಕ ಹಕ್ಕುಗಳ ಮೇಲಿನ ದಾಳಿಯಾಗುತ್ತಿದೆ. ದಯವಿಟ್ಟು ತೆರಿಗೆ ಪಾವತಿದಾರರನ್ನು ಈ ರೀತಿಯ ದಾಳಿಗಳು ಮತ್ತು ನಾಗರಿಕ ಹಕ್ಕುಗಳ ಮೇಲಿನ ದಾಳಿಯಿಂದ ರಕ್ಷಿಸುವಂತೆ ಪೈ ವಿನಂತಿಸಿದ್ದಾರೆ.
ನಮ್ಮ ವಿತ್ತ ಸಚಿವರು ಇಂತಹ ಅಧಿಕಾರಿಗಳಿಗೆ ಹೆಚ್ಚು ಅಧಿಕಾರ ನೀಡ್ತಿದ್ದಾರೆ. ಆದರೆ ಇದರಿಂದ ನಾಗರಿಕರ ರಕ್ಷಣೆ ಎಲ್ಲಿದೆ? ತಪ್ಪು ದಾಳಿಗೆ ಅಧಿಕಾರಿಗಳಿಗೆ ಶಿಕ್ಷೆಯಾಗಿದೆಯೇ? ಇಲ್ಲ. ಕಳೆದ 3 ವರ್ಷಗಳಲ್ಲಿ ನೇರ ತೆರಿಗೆಗಳ ಮೂಲಕ 72 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆಯೇ? ಇಂತಹ ದಾಳಿಗಳ ಮೂಲಕ ಎಷ್ಟು ಸಂಗ್ರಹಿಸಲಾಗಿದೆ? ಎಂದು ಮೋಹನ್ ದಾಸ್ ಪೈ ಪ್ರಶ್ನಿಸಿದ್ದಾರೆ.
ತೆರಿಗೆ ಕಟ್ಟುವವರನ್ನು ರಕ್ಷಿಸಿ
ಇದೇ ವೇಳೆ ಈಗಾಗಲೇ ನಾವು ಟ್ಯಾಕ್ಸ್ ಟೆರರಿಸಂನಿಂದ ಸಿದ್ಧಾರ್ಥ್ ಅವರನ್ನು ಕಳೆದುಕೊಂಡಿದ್ದೇವೆ. ಐಟಿ ಅಧಿಕಾರಿಗಳ ಟಾರ್ಚರ್‌ನಿಂದ ಅನೇಕರು ಸಮಸ್ಯೆಗೆ ಒಳಗಾಗಿದ್ದಾರೆ. ಈ ದಾಳಿ ಪ್ರಕ್ರಿಯೆಯೇ ಕ್ರೂರವಾಗಿದೆ. ನಿರ್ಮಲಾ ಸೀತಾರಾಮನ್ ಅವರೇ ಅಧಿಕಾರಿಗಳಿಗೆ ಹೆಚ್ಚು ಹೆಚ್ಚು ಅಧಿಕಾರ ನೀಡಿದ್ದೀರಾ, ಜನಸಾಮಾನ್ಯರನ್ನು ರಕ್ಷಿಸೋರು ಯಾರು? ತಪ್ಪಾಗಿ ರೇಡ್ ಮಾಡಿದಾಗ ಅಧಿಕಾರಿಗಳಿಗೆ ಶಿಕ್ಷೆ ನೀಡಿದ್ದೀರಾ? ಖಂಡಿತಾ ಇಲ್ಲ. ಇದರಿಂದ ದಯವಿಟ್ಟು ಜನರನ್ನು ತಪ್ಪಿಸಿ ಎಂದು ಮನವಿ ಮಾಡಿದ್ದಾರೆ.
ಕಳೆದ ಮೂರು ವರ್ಷದಲ್ಲಿ 72 ಲಕ್ಷ ಕೋಟಿ ರೂ. ನೇರ ತೆರಿಗೆಯಿಂದ ಸಂಗ್ರಹಿಸಿದ್ದೀರಿ. ಇದು ದಾಖಲೆಯ ತೆರಿಗೆ ಸಂಗ್ರಹ. ಜೊತೆಗೆ ಡಿಜಿಟಲ್ ಕ್ರಾಂತಿ ಕೂಡ ಹೌದು. ಹಾಗಿದ್ರೆ ಈ ರೀತಿಯ ದಾಳಿಗಳಿಂದ ಎಷ್ಟು ದುಡ್ಡು ಸಂಗ್ರಹಿಸಿದ್ದೀರಾ? ಎಷ್ಟು ಲಿಟಿಗೇಷನ್ ಕೇಸ್‌ಗಳಿವೆ? ಎಷ್ಟು ಕೋರ್ಟ್‌ನಲ್ಲಿ ಪ್ರಕರಣ ಇದೆ? ದಯವಿಟ್ಟು ವಿವರ ಕೊಡಿ. ಟ್ಯಾಕ್ಸ್ ಕಟ್ಟುವವರನ್ನು ರಕ್ಷಣೆ ಮಾಡಿ ಎಂದು ಪೈ ಪೋಸ್ಟ್‌ನಲ್ಲಿ ಮನವಿ ಮಾಡಿದ್ದಾರೆ.