ಬೆಂಗಳೂರು: ಭಾರತದ ಮೊದಲ ಶ್ರೀಗಂಧದ ಜೀನ್ ಪೂಲ್ ಮತ್ತು ಜರ್ಮ್‌ಪ್ಲಾಸಂ ಬ್ಯಾಂಕ್ ನ್ನು ಕರ್ನಾಟಕದಲ್ಲಿ ಸ್ಥಾಪಿಸಲಾಗಿದೆ.ಇದರಿಂದ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ವಾಣಿಜ್ಯ ಬೆಳೆ ಬೆಳೆಸಲು ರೈತರಿಗೆ ಅತ್ಯುತ್ತಮ ಗುಣಮಟ್ಟದ ಸಸಿಗಳು ಲಭ್ಯವಾಗಲಿದೆ.
ಈ ಜೀನ್ ಪೂಲ್ ಮತ್ತು ಜರ್ಮ್‌ಪ್ಲಾಸಂ ಬ್ಯಾಂಕ್ ನ್ನು ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ಸಂಸ್ಥೆಯು ಇನ್‌ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿ (IWST) ಸಹಭಾಗಿತ್ವದಲ್ಲಿ ಸ್ಥಾಪಿಸಿದೆ. ಮಾದರಿ ಸಂಗ್ರಹಣೆ ಮೂರು ತಿಂಗಳ ಹಿಂದೆ ಆರಂಭವಾಗಿದ್ದರೂ, ಇತ್ತೀಚಿನ ಕೇಂದ್ರ ಬಜೆಟ್‌ನಲ್ಲಿ ಕರಾವಳಿ ಪ್ರದೇಶದಲ್ಲಿ ಶ್ರೀಗಂಧದ ಬೆಳವಣಿಗೆಯನ್ನು ಉತ್ತೇಜಿಸುವ ಘೋಷಣೆಯು ಈ ಯೋಜನೆಗೆ ಮತ್ತಷ್ಟು ಬಲ ನೀಡಿದೆ.
ಶ್ಶ್ರೀಗಂಧದ ಬೆಳೆ ಲಾಭದಾಯಕ ಉದ್ಯಮವಾಗಿರುವುದರಿಂದ, ಇತರ ಜಾತಿಗಳ ಜೊತೆಗೆ ಶ್ರೀಗಂಧ ಗಿಡ ನೆಡುವಿಕೆಯನ್ನು ಉತ್ತೇಜಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮನವಿ ಮಾಡಿದ್ದೇವೆ. ಇದಕ್ಕಾಗಿ ಉತ್ತಮ ಗುಣಮಟ್ಟದ ಸಸಿಗಳು ಅಗತ್ಯವಾಗಿದ್ದು, ಹೀಗಾಗಿ ಈ ಉಪಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್(KSDL)ನ ಹಿರಿಯ ಅಧಿಕಾರಿ ಹೇಳಿದ್ದಾರೆ. ಜೊತೆಗೆ, ಜೀನ್ ಪೂಲ್ ಶ್ರೀಗಂಧ ಮತ್ತು ಅದರ ಎಣ್ಣೆಗೆ ಮೂಲಮಟ್ಟದ ಮಾನದಂಡವನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದರು.
ಈ ಸಂಶೋಧನೆಗಳನ್ನು ಇತರ ರಾಜ್ಯಗಳಿಗೂ ಹಂಚಿಕೊಳ್ಳಲಾಗುತ್ತದೆ. ಮಧ್ಯಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್, ಮಹಾರಾಷ್ಟ್ರ ಮತ್ತು ಗುಜರಾತ್‌ನ ರೈತರಿಂದ ಬೀಜಗಳು ಮತ್ತು ಸಸಿಗಳಿಗಾಗಿ ಕೆಎಸ್ ಡಿಎಲ್ ಗೆ ಆದೇಶಗಳು ಬರುತ್ತಿವೆ.
ಮರ ಮತ್ತು ಎಣ್ಣೆಯ ಗುಣಮಟ್ಟ ಹಾಗೂ ಪ್ರಮಾಣದಲ್ಲಿ ಉಂಟಾಗಿರುವ ಕುಸಿತವನ್ನು ಸೆಂಟ್ರಲ್ ವಿಸ್ಟಾ ಓವರ್‌ಸೈಟ್ ಸಮಿತಿಯಿಂದ ಬಿಡುಗಡೆಗೊಂಡ ಶ್ರೀಗಂಧ ಅಭಿವೃದ್ಧಿ ಸಮಿತಿಯ ವರದಿ ಪ್ರಸ್ತಾಪಿಸಿತ್ತು. ವರದಿಯು ಭಾರತ, ವಿಶೇಷವಾಗಿ ಕರ್ನಾಟಕ, ಆಸ್ಟ್ರೇಲಿಯಾದಿಂದ ಶ್ರೀಗಂಧದ ಎಣ್ಣೆ ಮತ್ತು ಬೀಜಗಳನ್ನು ಆಮದು ಮಾಡಿಕೊಳ್ಳುತ್ತಿದ್ದುದನ್ನೂ ಉಲ್ಲೇಖಿಸಿದೆ.
ಕಳೆದ ವರ್ಷ ಕರ್ನಾಟಕ ಅರಣ್ಯ ಇಲಾಖೆ KSDL ಜೊತೆಗೆ ಕೈಜೋಡಿಸಿ ರಾಜ್ಯದಾದ್ಯಂತ ಪ್ರತಿವರ್ಷ 1 ಲಕ್ಷ ಶ್ರೀಗಂಧದ ಸಸಿಗಳನ್ನು ನೆಡುವ ಯೋಜನೆಯನ್ನು ರೂಪಿಸಿತ್ತು. ಆದರೆ ಈ ಯೋಜನೆ ಇನ್ನೂ ಆರಂಭವಾಗಿಲ್ಲ.
ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಅರಣ್ಯ ಸಿಬ್ಬಂದಿಯ ಸಹಾಯದಿಂದ ಅರಣ್ಯಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ಅತ್ಯುತ್ತಮ ಹಳೆಯ ಶ್ರೀಗಂಧದ ಮರಗಳನ್ನು ಗುರುತಿಸಲಾಗುತ್ತಿದೆ, ಅವುಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ.
ಜರ್ಮ್‌ಪ್ಲಾಸಂ ಬ್ಯಾಂಕ್ ಮತ್ತು ಜೀನ್ ಪೂಲ್‌ನಲ್ಲಿ ಈ ಮಾದರಿಗಳನ್ನು ವಿಶ್ಲೇಷಿಸಿ, ಮೂಲ ಮರ, ಉತ್ತಮ ಮರದ ಗುಣಮಟ್ಟ ಮತ್ತು ಎಣ್ಣೆಯ ಗುಣಮಟ್ಟವನ್ನು ತಿಳಿಯಲಾಗುತ್ತಿದೆ. ಅತ್ಯುತ್ತಮ ಮಾದರಿಗಳನ್ನು ಹೆಚ್ಚಿಸಿ ರೈತರಿಗೆ ಪೂರೈಸಲಾಗುತ್ತದೆ ಎಂದು ಕೆಎಸ್ ಡಿಎಲ್ ಅಧಿಕಾರಿ ತಿಳಿಸಿದ್ದಾರೆ.
ಮೈಸೂರು, ಚಾಮರಾಜನಗರ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಕೇರಳದ ಮರಾಯೂರು ಪ್ರದೇಶಗಳು ಅತ್ಯುತ್ತಮ ಗುಣಮಟ್ಟದ ಶ್ರೀಗಂಧಕ್ಕಾಗಿ ಪ್ರಸಿದ್ಧವಾಗಿವೆ.
ಕರ್ನಾಟಕದಲ್ಲಿ 713 ರೈತರು 4,000 ಎಕರೆ ಪ್ರದೇಶದಲ್ಲಿ ಶ್ರೀಗಂಧವನ್ನು ಬೆಳೆಸುತ್ತಿದ್ದಾರೆ. ಇದರ ಜೊತೆಗೆ, ರಾಜ್ಯದ ಅರಣ್ಯಗಳಲ್ಲಿ ಶ್ರೀಗಂಧ ಮರಗಳು ಸಹಜವಾಗಿ ಕಂಡುಬರುತ್ತವೆ. ಶ್ರೀಗಂಧ ಕರ್ನಾಟಕದ ರಾಜ್ಯ ಮರವಾಗಿದೆ, ಆದರೆ ನೆಡುವಿಕೆ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಹೆಚ್ಚಿನ ಕೆಲಸ ನಡೆಯುತ್ತಿಲ್ಲ ಎಂದು ಕೆಎಸ್ ಡಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.